ಶಿಕ್ಷಕರ ನೇಮಕಾತಿ ಪ್ರಕರಣ! ಆದೇಶ ಕಾಯ್ದಿರಿಸಿದ ಕೆಎಟಿ

Gadag Vijayavni
Gadag Vijayavni
Published on
ನ್ಯಾಯಾಂಗ ಪ್ರಕ್ರಿಯೆಗಳನ್ನು ಪರಿಣಿತ ವರದಿಗಾರರು ಬರೆದರೆ ಉತ್ತಮ: ಕೆಎಟಿ ಅಭಿಪ್ರಾಯ
ವಿಜಯವಾಣಿ ಸುದ್ದಿಜಾಲ ಗದಗ
ವಿವಾಹಿತ ಮಹಿಳೆಯ ಸರ್ಕಾರಿ (ಜಿಪಿಎಸ್​ಟಿ ಶಿಕ್ಷಕರು) ನೇಮಕಾತಿ ಸಂದರ್ಭದಲ್ಲಿ ಪತಿಯ ಅಥವಾ ತಂದೆಯ ಆದಾಯ ಪ್ರಮಾಣ ಪತ್ರ ಪರಿಗಣಿಸಬೇಕೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಧೀರ್ ವಿಚಾರಣೆ ನಡೆಸಿ ಗುರುವಾರ ತೀರ್ಪು ಕಾಯ್ದಿರಿಸಿದ ಕರ್ನಾಟಕ ಆಡಳಿತ ನ್ಯಾಯಾಧೀಕರಣ (ಕೆಎಟಿ, ಬೆಂಗಳೂರು ಪ್ರಿನ್ಸಿಪಲ್​ ಬೆಂಚ್​), ನ್ಯಾಯಾಂಗ ಪ್ರಕ್ರಿಯೆಗಳನ್ನು ಪರಿಣಿತ ಮಾಧ್ಯಮ ಪ್ರತಿನಿಧಿಗಳು ವರದಿ ಮಾಡಿದರೆ ಉತ್ತಮ ಎಂದು ಅಭಿಪ್ರಾಯ ಪಟ್ಟಿದೆ.
ಶಿಕ್ಷಕರ(ಜಿಪಿಎಸ್​ಟಿ) ನೇಮಕಾತಿಗೆ ಸಂಬಂಧಿಸಿದಂತೆ ಕಳೆದ ನಾಲ್ಕು ವರ್ಷದಿಂದ ವಿವಿಧ ಹಂತದ ನ್ಯಾಯಾಲಯ ಅಂಗಳದಲ್ಲಿ ವಿಚಾರಣೆ ನಡೆಯುತ್ತಿದ್ದ ಈ ಪ್ರಕರಣ ಸುಖಾಂತ್ಯ ಕಾಣುವ ಹಂತಕ್ಕೆ ತಲುಪಿದೆ. ಗುರುವಾರ ಅಂತಿಮ ಹಂತದ ವಾದ ಪ್ರತಿವಾದ ಆಲಿಸಿದ ಬೆಂಗಳೂರು ಕೆಎಟಿ ತೀರ್ಪು ಕಾಯ್ದಿರಿಸಿತು. ಸರ್ಕಾರಿ ನೇಮಕಾತಿಗೂ ಸವಾಲಾಗಿರುವ ಈ ಪ್ರಕರಣ ಇತ್ಯರ್ಥದಿಂದ ನೇಮಕಾತಿಗೆ ತೋಡಕು ನಿವಾರಣೆ ಆದಂತಾಗುತ್ತದೆ.
ಏನಿದು ಪ್ರಕರಣ?
ಕಳೆದ ಬಾರಿ 13500 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲ ಮಹಿಳಾ ಅಭ್ಯಥಿರ್ಗಳ (3ಎ, 3ಬಿ, 2ಎ ಇತರೆ ಹಿಂದೂಳಿದ) ಹೆಸರು ಕೈಬಿಡಲಾಗಿತ್ತು. ಅದರಲ್ಲಿ ನೇಮಕಾತಿ ಸಂದರ್ಭದಲ್ಲಿ ತಂದೆ ಮತ್ತು ಪತಿಯ ಆದಾಯ ಪ್ರಮಾಣ ಪತ್ರ ಸಲ್ಲಿಸಿದವರು ಇದ್ದರು. ಈ ಎರಡು ಪ್ರಮಾಣ ಪತ್ರದಲ್ಲಿ ಯಾವ ಪ್ರಮಾಣ ಪತ್ರ ಪರಿಗಣಿಸಬೇಕು ಎಂಬ ವಿವಾದ ಹೈಕೋರ್ಟ, ಸುಪ್ರೀಂ ಕೋರ್ಟ ವರೆಗೂ ತಲುಪಿತ್ತು. ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆದು ಈ ಪ್ರಕರಣ ಇತ್ಯರ್ಥಕ್ಕೆ ಕೆಎಟಿ ಸೂಕ್ತ ವೇದಿಕೆ. 6 ತಿಂಗಳ ಒಳಗಾಗಿ ಪ್ರಕರಣ ಇತ್ಯರ್ಥಗೊಳಿಸಲು ಸುಪ್ರೀಂಕೋರ್ಟ ಕೆಎಟಿಗೆ ಆದೇಶ ನೀಡಿತ್ತು. ಸುಪ್ರೀಂ ಆದೇಶದಂತೆ ಕೆಎಟಿ(ಬೆಂಗಳೂರು) ಕಳೆದ ಎರಡು ತಿಂಗಳಿಂದ ವಾದ ಪ್ರತಿವಾದದ ಸುದೀರ್ ವಿಚಾರಣೆ ನಡೆಸಿ, ಗುರುವಾರ ಆದೇಶ ಕಾಯ್ದಿರಿಸಿತು.
ಕಲಬುರಗಿ ತೀರ್ಪು ಪ್ರಸ್ತಾಪ:
ಗುರುವಾರ ಕೆಎಟಿನಲ್ಲಿ ಅಂತಿಮ ಹಂತದ ವಿಚಾರಣೆ ವೇಳೆ ಕಲಬುರಗಿ ಕೆಎಟಿ ತೀರ್ಪುನ್ನು ಪ್ರಸ್ತಾಪಿಸಲಾಯಿತು. ಪ್ರತಿವಾದಿಗಳ ವಾದವನ್ನೇ ಕೇಳದೇ ತೀರ್ಪು ನೀಡಿದ್ದಾರೆ ಎಂದು ಪತಿಯ ಆದಾಯ ಪರ ವಕೀಲರು ವಿಷಯ ಪ್ರಸ್ತಾಪಿಸಿದರು. ಈ ವಿಷಯವಾಗಿ ಬೆಂಗಳೂರು ಕೆಎಟಿ ಕೂಡ ಆಶ್ಚರ್ಯ ವ್ಯಕ್ತಪಡಿಸಿತು. ಇದು ವೈಯಕ್ತಿಕ ಪ್ರಕರಣ ಅಲ್ಲ. ಸರ್ಕಾರಕ್ಕೆ ನಿರ್ದೇಶನ ನೀಡುವ ಪ್ರಕರಣ ಇದಾಗಿದೆ ಎಂದಷ್ಟೇ ಬೆಂಗಳೂರು ಕೆಎಟಿ ತಿಳಿಸಿತು.
ವಸ್ತುನಿಷ್ಠ ವರದಿ ಮಾಡಿ:
ಗುರುವಾರ ವಿಚಾರಣೆ ಆರಂಭದಲ್ಲೇ ಮಾಧ್ಯಮ ಪ್ರತಿನಿಧಿಗಳು ನ್ಯಾಯಾಂಗ ಪ್ರಕ್ರಿಯೆ ವರದಿ ಮಾಡುವ ವಿಷಯವನ್ನು ಕೆಎಟಿ ಪ್ರಸ್ತಾಪಿಸಿತು. ಶಿಕ್ಷಕರಿಗೆ ಕೆಎಟಿ ವರದಾನ ಎಂಬ ವರದಿಗಳು ಪತ್ರಿಕೆಗಳಲ್ಲಿ ಇಂದು ಬಿತ್ತರವಾಗಿವೆ. ಈ ಬಗ್ಗೆ ಸುಧಿರ್ ವಿಚಾರಣೆ ನಡೆಯುತ್ತಿದೆ. ಈ ಹಿಂದೆ ನ್ಯಾಯಾಂಗ ಪ್ರಕ್ರಿಯೆ ವರದಿ ಮಾಡುವ ಸಂಬಂಧ ಹೈಕೋರ್ಟನಲ್ಲಿ ಡಿಬೆಟ್​ ನಡೆದಿದೆ. ಮಾಧ್ಯಮ ಪ್ರತಿನಿಧಿಗಳಿಗೂ ವಸ್ತುನಿಷ್ಠ ವರದಿ ಬಗ್ಗೆ ನಿರ್ದೇಶನ ಮಾಡಲಾಗಿದೆ. ನ್ಯಾಯಾಂಗ ಪ್ರಕ್ರಿಯೆಗಳನ್ನು ಪರಿಣಿತ ಅಲ್ಲದವರು ವರದಿ ಮಾಡುವ ಬದಲಾಗಿ ಪರಿಣಿತ ವರದಿಗಾರರು ನ್ಯಾಯಾಂಗ ಪ್ರಕ್ರಿಯೆ ವರದಿ ಮಾಡಬೇಕು ಎಂದು ಮಾಧ್ಯಮಕ್ಕೆ ಕೆಎಟಿ ಎಚ್ಚರಿಕೆ ನೀಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net