ಬದುಕಿಗೆ ಮಾರಕವಾದ ಕಸ್ತೂರಿ ರಂಗನ್ ವರದಿ

ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆ ತಿರಸ್ಕರಿಸಲು ಆಗ್ರಹಿಸಿ ವಿರಾಜಪೇಟೆಯಲ್ಲಿ ಸಿಪಿಐ (ಎಂ)ನಿಂದ ಸಭೆ ಕರೆಯಲಾಗಿತ್ತು. ದುರ್ಗ ಪ್ರಸಾದ್, ಪದ್ಮಿನಿ ಶ್ರೀಧರ್, ಸಾಬು, ರಮೇಶ್ ಇದ್ದರು.
ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆ ತಿರಸ್ಕರಿಸಲು ಆಗ್ರಹಿಸಿ ವಿರಾಜಪೇಟೆಯಲ್ಲಿ ಸಿಪಿಐ (ಎಂ)ನಿಂದ ಸಭೆ ಕರೆಯಲಾಗಿತ್ತು. ದುರ್ಗ ಪ್ರಸಾದ್, ಪದ್ಮಿನಿ ಶ್ರೀಧರ್, ಸಾಬು, ರಮೇಶ್ ಇದ್ದರು.
Published on

ವಿರಾಜಪೇಟೆ:

ಮಲೆನಾಡು, ಕರಾವಳಿ ಭಾಗದ ಜನಸಾಮಾನ್ಯರ ಬದುಕಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆ ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಸಿಪಿಐ (ಎಂ) ಜಿಲ್ಲಾ ಘಟಕ ಆಗ್ರಹಿಸಿತು.


ಪಟ್ಟಣದಲ್ಲಿರುವ ಪಕ್ಷದ ಕಚೇರಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ರಮೇಶ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಪಶ್ಚಿಮ ಘಟ್ಟದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ. ಅತಿ ಸೂಕ್ಷ್ಮ ಪ್ರದೇಶಗಳ ಹೆಸರಿನಲ್ಲಿ ರೈತರನ್ನು ಭೂಮಿ ಹಕ್ಕಿನಿಂದ ವಂಚಿಸಲಾಗುತ್ತಿದೆ. ಇದರಿಂದ ಜೀವನೋಪಾಯಕ್ಕೆ ಧಕ್ಕೆಯಾಗಲಿದ್ದು, ಕೃಷಿ ಮತ್ತು ಇನ್ನಿತರ ಚಟುವಟಿಕೆಗಳಿಗೆ ತೊಂದರೆಯಾಗಲಿದೆ ಎಂದರು.


ಕೇಂದ್ರ ಸರ್ಕಾರವು ಕೂಡಲೇ ಕಸ್ತೂರಿ ರಂಗನ್ ವರದಿ ಜಾರಿಯ ಕರಡು ಅಧಿಸೂಚನೆಯನ್ನು ವಾಪಸ್ ಪಡೆಯಬೇಕು. ಪಶ್ಚಿಮ ಘಟ್ಟದ ಜನರ ಹಿತಾಸಕ್ತಿ ಕಾಪಾಡಲು ರಾಜ್ಯ ಸರಕಾರವು ಕೇಂದ್ರದ ಮೇಲೆ ಒತ್ತಡ ತರಬೇಕು. ಸ್ಥಳೀಯರ ಒಪ್ಪಿಗೆಯಿಲ್ಲದೆ ಯಾವುದೇ ಕಠಿಣ ನಿಯಮ ಹೇರಬಾರದು ಎಂದು ಒತ್ತಾಯಿಸಿದರು.


ಜಿಲ್ಲಾ ಸಮಿತಿ ಸದಸ್ಯ ಡಾ.ಐ.ಆರ್. ದುರ್ಗಾಪ್ರಸಾದ್ ಮಾತನಾಡಿ, ಕೇಂದ್ರ ಸರ್ಕಾರ ಡಾ. ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು 7ನೇ ಕರಡು ಅಧಿಸೂಚನೆ ಹೊರಡಿಸಿದ್ದು, ಮುಂದಿನ 60 ದಿನಗಳೊಳಗೆ ಆಕ್ಷೇಪ ಸಲ್ಲಿಸಲು ಕಾಲಾವಕಾಶ ನಿಗದಿಪಡಿಸಿದೆ. ವರದಿ ಜಾರಿಯಾದರೆ ಕೊಡಗಿನ ನೂರಾರು ಗ್ರಾಮಗಳ ಗ್ರಾಮಸ್ಥರ ಜೀವನ ಅತಂತ್ರವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಜಿಲ್ಲೆಯಲ್ಲಿ ಶೇ. 30 ಜನರು ಪಶ್ಚಿಮ ಘಟ್ಟದ ಅರಣ್ಯ ಭೂಮಿಯಲ್ಲಿ ಕೃಷಿ ಮತ್ತು ತೋಟಗಾರಿಕೆಯೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ನಿಯಮ ಜನಸಾಮಾನ್ಯರ ಉಸಿರುಗಟ್ಟಿಸುತ್ತಿವೆ. ಹೀಗಿದ್ದಾಗ ಕೇಂದ್ರ ಸರ್ಕಾರ ಜಿಲ್ಲೆಯ ಬಹುಪಾಲು ಜನವಸತಿ ಪ್ರದೇಶಗಳನ್ನು ಪರಿಸರವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ, ಅಲ್ಲಿ ವಿವಿಧ ನಿಬರ್ಂಧ ಹೇರಲು ಹೊರಟಿರುವ ಕ್ರಮ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಜಿಲ್ಲಾ ಸಮಿತಿ ಸದಸ್ಯರಾದ ಎ.ಸಿ.ಸಾಬು ಮಾತನಾಡಿ, ಆಕ್ಷೇಪಗಳನ್ನು ಕೇಂದ್ರ ಸರ್ಕಾರ ಅಂಗೀಕರಿಸುವುದಿಲ್ಲ ಎನ್ನುವುದು ಹಿಂದಿನ ಅನುಭವ. ಈ ಹಿಂದೆ ಅಧಿಸೂಚನೆಗಳು ಪ್ರಕಟವಾದಾಗಲೂ ಸಾಕಷ್ಟು ಆಕ್ಷೇಪಣಾ ಪತ್ರಗಳನ್ನು ಕಳುಹಿಸಲಾಗಿತ್ತಾದರೂ ಅವುಗಳಿಗೆ ಯಾವ ಬೆಲೆಯೂ ಸಿಕ್ಕಿಲ್ಲ. ಕರ್ನಾಟಕದಲ್ಲಿ ಈ ವರದಿ ಜಾರಿಗೆ ನಿರಂತರ ವಿರೋಧ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನರ ಹಿತರಕ್ಷಣೆಗಾಗಿ ಹಾಗೂ ಜನನಿಬಿಡ ಪ್ರದೇಶಗಳನ್ನು ಈ ವರದಿಯ ವ್ಯಾಪ್ತಿಯಿಂದ ಹೊರಗಿಡಲು ಒತ್ತಾಯಿಸಿ ಸಿಪಿಐಎಂ ಮತ್ತು ವಿವಿಧ ಸಂಘಟನೆಗಳು ಕರ್ನಾಟಕದಲ್ಲೂ ಬೃಹತ್ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಮಿತಿ ಸದಸ್ಯೆ ಪದ್ಮಿನಿ ಶ್ರೀಧರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net