

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿ (ಕಸಾಪ)ನಲ್ಲಿ ನಾಡೋಜ ಡಾ. ಮನು ಬಳಿಗಾರ್ ಸ್ಥಾಪಿಸಿರುವ ‘ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ದತ್ತಿ ಪ್ರಶಸ್ತಿ’ಗೆ 2025 ಮತ್ತು 2026ನೇ ಸಾಲಿಗೆ ಸಾಹಿತ್ಯ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಲಾಗಿದೆ. 2025ನೇ ಸಾಲಿಗೆ ಹಿರಿಯ ವಿಮರ್ಶಕ ಎಸ್.ಆರ್. ವಿಜಯಶಂಕರ (ಬೆಂಗಳೂರು) ಮತ್ತು ಹಿರಿಯ ಸಾಹಿತಿ ಡಾ. ಲತಾ ಗುತ್ತಿ (ಬೆಂಗಳೂರು) ಹಾಗೂ 2026ನೇ ಸಾಲಿಗೆ ಹಿರಿಯ ಸಾಹಿತಿ ಡಾ. ಶ್ರೀರಾಮ ಇಟ್ಟಣ್ಣವರ (ಬಾಗಲಕೋಟೆ) ಮತ್ತು ಹಿರಿಯ ಲೇಖಕಿ ಡಾ. ಪದ್ಮಿನಿ ನಾಗರಾಜು (ಬೆಂಗಳೂರು) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ 30 ಸಾವಿರ ನಗದು, ಸ್ಮರಣಿಕೆಯನ್ನು ಒಳಗೊಂಡಿದೆ. ಕಸಾಪ ಆಡಳಿತಾಧಿಕಾರಿ ಕೆ.ಎ. ದಯಾನಂದ ಅಧ್ಯಕ್ಷತೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಕನ್ನಡ ನಾಡು-ನುಡಿ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ 60 ವರ್ಷ ಪೂರೈಸಿದ ಒಬ್ಬ ಲೇಖಕ ಮತ್ತು ಒಬ್ಬ ಲೇಖಕಿಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. 2021ರಿಂದ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕಸಾಪ ಮಾಜಿ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಅವರು ತಮಗೆ ಮಾಸಿಕವಾಗಿ ನೀಡುವ ಗೌರವ ಸಂಭಾವನೆಯನ್ನು ಪರಿಷತ್ತಿನಲ್ಲಿ ದತ್ತಿ ಪ್ರಶಸ್ತಿಗಾಗಿ ಮೀಸಲಿಟ್ಟಿದ್ದಾರೆ ಎಂದು ಕಸಾಪ ತಿಳಿಸಿದೆ.