ಗುಂಡ್ಲುಪೇಟೆ: ತಾಲೂಕಿನ ದೇಶೀಪುರ ಗ್ರಾಮದಲ್ಲಿ ಮಂಗಳವಾರ ಕಸಕಲಪುರ ಮಾರಮ್ಮನವರ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಗಳಿಂದ ನೆರವೇರಿತು.
ಸೋಮವಾರ ಗ್ರಾಮದ ಆಯ್ದ ಭಕ್ತರು ಮಂಗಳ ವಾದ್ಯಗಳು, ಸತ್ತಿಗೆ, ಸುರಿಪಾನಿ, ಬಿರುದು, ಬಾವಲಿಗಳೊಡನೆ ಬಂಡೀಪುರ ಅರಣ್ಯದೊಳಗಿರುವ ಮೂಲ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವರ ಪೆಟ್ಟಿಗೆ ಹಾಗೂ ಪ್ರಸಾದಗಳನ್ನು ಮಂಗಳವಾರ ಬೆಳಗ್ಗೆ ಗ್ರಾಮದ ಬಸವೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಮರಳಿದರು.
ನಂತರ ಗ್ರಾಮದಲ್ಲಿ ಉತ್ಸವ ಮೂರ್ತಿ ಹಾಗೂ ಗ್ರಾಮದೇವತೆಗಳನ್ನು ದೇವರ ಬಿಜ್ಜು ಮಾಡಿ ಹೂವಿನ ಹೊದಿಕೆಯಿಂದ ಮುಚ್ಚಿದ ಪಲ್ಲಕ್ಕಿಯೊಳಗಿರಿಸಿ ಕುದುರೆ ವಾಹನದ ಮೇಲೆ ಇಟ್ಟು ಮಂಗಳವಾದ್ಯಗಳು, ನಂದಿಧ್ವಜ, ಸತ್ತಿಗೆ, ಸುರಿಪಾನಿ, ಬಿರುದು, ಬಾವಲಿಗಳೊಡನೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಗ್ರಾಮದ ಪ್ರತಿಯೊಂದು ಮನೆಯವರೂ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ತಮ್ಮ ಭಕ್ತಿಭಾವ ಮೆರೆದರು. ಹರಕೆ ಹೊತ್ತ ಭಕ್ತರು ಬಾಯಿ ಬೀಗ ಸೇರಿದಂತೆ ನಾನಾ ಸೇವೆಗಳನ್ನು ಸಲ್ಲಿಸಿದರು. ತಮ್ಮ ರಾಸುಗಳನ್ನು ರೋಗ, ರುಜಿನಗಳಿಂದ ಪಾರು ಮಾಡುವಂತೆ ಪ್ರಾರ್ಥಿಸಿ ಜಾನುವಾರುಗಳ ಕೊಂಬಿಗೆ ಪಂಜುಕಟ್ಟಿ ಮೆರವಣಿಗೆ ಮಾಡಿದರು. ಈ ಸಂದರ್ಭದಲ್ಲಿ ಅಕ್ಕಪಕ್ಕದ ಗ್ರಾಮಗಳ ಜನರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.