ಕರ್ನಾಟಕ ಯಕ್ಷಗಾನ ಅಕಾಡೆಮಿಯ 2026ನೇ ಸಾಲಿನ ಪ್ರಶಸ್ತಿಗಳು ಪ್ರಕಟ

M.K. Ramesh Acharya of Thirthahalli Selected for ‘Parthisubba Award’
M.K. Ramesh Acharya of Thirthahalli Selected for ‘Parthisubba Award’
Published on

ಪ್ರಮುಖ ಮುಖ್ಯಾಂಶಗಳು

  • * ಪಾರ್ತಿಸುಬ್ಬ ಪ್ರಶಸ್ತಿಗೆ ತೀರ್ಥಹಳ್ಳಿಯ ಎಂ.ಕೆ. ರಮೇಶ್ ಆಚಾರ್ಯ ಭಾಜನ
  • * ದತ್ತಿ ಪ್ರಶಸ್ತಿಗಳಿಗೆ ಬರಗೂರಿನ ಭೀಮಣ್ಣ ಹಾಗೂ ಕುಪ್ಪಂನ ಪ್ರೊ. ಎಂ.ಎನ್. ವೆಂಕಟೇಶ ಆಯ್ಕೆ

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯು 2026ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಪ್ರತಿಷ್ಠಿತ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ತೀರ್ಥಹಳ್ಳಿಯ ಎಂ.ಕೆ. ರಮೇಶ್ ಆಚಾರ್ಯ (ತೆಂಕು ಮತ್ತು ಬಡಗುತಿಟ್ಟು ಕಲಾಪ್ರಕಾರ) ಅವರು ಭಾಜನರಾಗಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಫಲಕ ಒಳಗೊಂಡಿದೆ.


ಗೌರವ ಪ್ರಶಸ್ತಿ:


ದಕ್ಷಿಣ ಕನ್ನಡ ಜಿಲ್ಲೆಯ ಜಿಪ್ಪು ದಯಾನಂದ ಶೆಟ್ಟಿ (ತೆಂಕುತಿಟ್ಟು), ಕಾಸರಗೋಡಿನ ಸಿರಿಬಾಗಿಲು ರಾಮಕೃಷ್ಣಯ್ಯ (ತೆಂಕುತಿಟ್ಟು ಭಾಗವತರು), ಮೂಡಬಿದಿರೆಯ ಪದ್ಮನಾಭ ಉಪಾಧ್ಯಾಯ (ತೆಂಕುತಿಟ್ಟು ಮದ್ದಳೆ), ಉಡುಪಿಯ ಮಹಾಬಲ ದೇವಾಡಿಗ (ಬಡಗುತಿಟ್ಟು) ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ದೊಡ್ಡಮಲ್ಲಯ್ಯ (ಮೂಡಲಪಾಯ ಯಕ್ಷಗಾನ ಭಾಗವತರು) ಅವರು ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪ್ರಶಸ್ತಿಯು ತಲಾ 50 ಸಾವಿರ ನಗದು ಹಾಗೂ ಫಲಕ ಹೊಂದಿದೆ.

ಯಕ್ಷಸಿರಿ ವಾರ್ಷಿಕ ಪ್ರಶಸ್ತಿ:

ದಕ್ಷಿಣ ಕನ್ನಡ ಜಿಲ್ಲೆಯ ರಾಘವೇಂದ್ರ ಆಸ್ರಣ್ಣ (ತೆಂಕುತಿಟ್ಟು), ಮಂಗಳೂರಿನ ಪೂರ್ಣಿಮಾ ಯತೀಶ್ ರೈ (ತೆಂಕುತಿಟ್ಟು ವೇಷಧಾರಿ), ಬಂಟ್ವಾಳದ ದುರ್ಗಾಪರಮೇಶ್ವರಿ ಕುಕ್ಕಿಲ (ತೆಂಕುತಿಟ್ಟು ಭಾಗವತರು),ಉಜಿರೆಯ ಉಜಿರೆ ನಾರಾಯಣ ಪೂಜಾರಿ ( ತೆಂಕುತಿಟ್ಟು ಹಾಸ್ಯಕಲಾವಿದ), ಉಡುಪಿಯ ವಿದ್ವಾನ್ ಲಕ್ಷ್ಮೀ ನಾರಾಯಣ ಉಪಾಧ್ಯ (ತೆಂಕುತಿಟ್ಟು ಚೆಂಡೆವಾದಕ), ಕುಂದಾಪುರದ ಹೆರಿಯ ನಾಯ್ಕ ಮೊಗೆಬೆಟ್ಟು (ಬಡಗುತಿಟ್ಟು), ಉತ್ತರ ಕನ್ನಡ ಜಿಲ್ಲೆಯ ರಾಮಗೌಡ ಗುಣವಂತೆ (ಬಡಾಬಡಗು), ಕಟೀಲಿನ ಪಡ್ರೆ ಕುಮಾರ (ತೆಂಕುತಿಟ್ಟು), ದಕ್ಷಿಣ ಕನ್ನಡ ಜಿಲ್ಲೆಯ ಸುರೇಶ ಕುಪ್ಪೆಪದವು (ತೆಂಕುತಿಟ್ಟು ಬಣ್ಣ ವೇಷಧಾರಿ) ಹಾಗೂ ತಿಪಟೂರಿನ ಶಿವಯ್ಯ (ಮೂಡಲಪಾಯ ಯಕ್ಷಗಾನ) ಅವರನ್ನು ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ದತ್ತಿ ಪ್ರಶಸ್ತಿ:

2026ನೇ ಸಾಲಿನ ದಿ. ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಗೆ ಸಿರಾದ ಬರಗೂರಿನ ಭೀಮಣ್ಣ (ಮೂಡಲಪಾಯ) ಹಾಗೂ ಡಾ. ತಲ್ಲೂರು ಶಿವರಾಮ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ದತ್ತಿನಿಧಿ ಪ್ರಶಸ್ತಿಗೆ ಆಂದ್ರ ಪ್ರದೇಶದ ಕುಪ್ಪಂನ ಪ್ರೊ. ಎಂ.ಎನ್. ವೆಂಕಟೇಶ (ಸಂಶೋಧಕರು)ಅವರು ಭಾಜನರಾಗಿದ್ದಾರೆ. ಪ್ರಶಸ್ತಿಗಳು ತಲಾ 25 ಸಾವಿರ ನಗದು ಹಾಗೂ ಫಲಕ ಹೊಂದಿರುವುದಾಗಿ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net