ಆದಾಯವಿಲ್ಲದೆ ಬಸ್​ ನಿಗಮಗಳು ಶಕ್ತಿಹೀನ! High court

KSRTC BUS
KSRTC BUS
Published on

ಪ್ರಮುಖ ಮುಖ್ಯಾಂಶಗಳು

  • ಮೃತ ನೌಕರರ ಕುಟುಂಬಗಳಿಗೆ ಪರಿಹಾರ ಪಾವತಿಸಲು ಹಣವಿಲ್ಲ.
  • ಬಾಕಿ ಮೊತ್ತದ ವರದಿ ಕೇಳಿದ ಹೈಕೋರ್ಟ್​.
ಬೆಂಗಳೂರು: ಕೋವಿಡ್​ ಸಾಂಕ್ರಾಮಿಕದ ಸಂದರ್ಭದಲ್ಲಿ ಮೃತಪಟ್ಟ ನೌಕರರ ಕುಟುಂಬಗಳಿಗೆ ಪರಿಹಾರ ನೀಡಲು ಕೆಎಸ್​ಆರ್​ಟಿಸಿ ಸೇರಿ ರಾಜ್ಯದ ನಾಲ್ಕು ಬಸ್​ ನಿಗಮಗಳ ಬಳಿ ಹಣವಿಲ್ಲ. ನೌಕರರಿಗೆ ವೇತನ ನೀಡಲೂ ಕಷ್ಟಕರವಾದ ಪರಿಸ್ಥಿತಿ ಇದೆ ಎಂದು ನಿಗಮಗಳನ್ನು ಪ್ರತಿನಿಧಿಸಿರುವ ವಕೀಲರು ಹೈಕೋರ್ಟ್​ನಲ್ಲಿ ಅಹವಾಲು ತೋಡಿಕೊಂಡಿದ್ದಾರೆ. 
ಮೃತ ನೌಕರರಿಗೆ 30 ಲಕ್ಷ ರೂ. ಪರಿಹಾರ ನೀಡಲು ನಿರ್ದೇಶನ ನೀಡಬೇಕು ಎಂದು ಕೋರಿ ದಾವಣಗೆರೆಯ ತಾಹಿರ್​ ಹುಸೇನ್​ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್​) ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಕೋವಿಡ್​ ಸಂದರ್ಭದಲ್ಲಿ ಕೆಲಸ ಮಾಡುವಂತೆ ನೌಕರರಿಗೆ ನಿಗಮಗಳು ಒತ್ತಾಯಿಸಿವೆ. ಈ ಸಂದರ್ಭದಲ್ಲಿ ಮೃತಪಟ್ಟ ಏಳು ಮಂದಿಯ ಕುಟುಂಬಗಳಿಗೆ ತಲಾ 30 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ. ಇತರರಿಗೂ ಪಾವತಿಸುವಂತೆ ನಿರ್ಣಯ ಮಾಡಲಾಗಿದೆ. ಆದರೆ, ಅದನ್ನು ಪಾಲಿಸಿಲ್ಲ. ಪರಿಹಾರ ಪಾವತಿಸಲು ಮೀನಮೇಷ ಎಣಿಸಲಾಗುತ್ತಿದೆ ಎಂದು ಆಕ್ಷೇಪಣೆಗಳನ್ನು ಸಲ್ಲಿಸಿದರು.
ನಿಗಮಗಳ ಪರ ವಾದಿಸಿದ ವಕೀಲರು, ಎಲ್ಲ ನಿಗಮಗಳು ನಷ್ಟದಲ್ಲಿ ನಡೆಯುತ್ತಿದ್ದು, ವೇತನ ನೀಡುವುದೇ ಕಷ್ಟವಾಗಿದೆ. ನಿಗಮಗಳು ಪರಿಹಾರ ನೀಡುವ ಬಗ್ಗೆ ನಿರ್ಣಯ ಮಾಡಿಲ್ಲ. ಅದನ್ನು ಸರ್ಕಾರ ಮಾಡಿರುವುದು. ಆದ್ದರಿಂದ ಪರಿಹಾರ ಪಾವತಿಸುವಂತೆ ಸರ್ಕಾರ ಹೊರಡಿಸಿರುವ ರ್ನಿಣಯವನ್ನು ಜಾರಿಗೊಳಿಸದಿರಲು ನಿಗಮಗಳು ನಿರ್ಧರಿಸಿವೆ ಎಂದರು.
ಕೋವಿಡ್​ ಸಂದರ್ಭದಲ್ಲಿ 323 ನೌಕರರು ಮೃತಪಟ್ಟಿದ್ದಾರೆ. ಅವರ ಕುಟುಂಬಗಳಿಗೆ ಸರ್ಕಾರದ ನಿರ್ಣಯದಂತೆ 30 ಲಕ್ಷ ರೂ. ಪರಿಹಾರ ಪಾವತಿಸಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದು ತಿಳಿಸಲಾಗಿದೆ. ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರಿಗೆ ಪರಿಹಾರ ನೀಡಿದಂತೆ ಸಾರಿಗೆ ನೌಕರರಿಗೂ ನೀಡುವಂತೆ ಸರ್ಕಾರದಿಂದಲೇ ಪರಿಹಾರ ಪಾವತಿಸಲು ಕೋರಲಾಗಿತ್ತು. ಆದರೆ, ಅದನ್ನು ಸರ್ಕಾರ ನಿರಾಕರಿಸಿದೆ ಎಂದು ತಿಳಿಸಿದರು. 

ಸರ್ಕಾರದಿಂದ ಎಷ್ಟು ಬಾಕಿ?:

ನಿಗಮಗಳ ಬಳಿ ಪರಿಹಾರ ನೀಡಲು ಆದಾಯವಿಲ್ಲ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್​ ಸೇವೆ ನೀಡಲಾಗುತ್ತಿದೆ. ಅಲ್ಲಿ ಉಚಿತ ಟಿಕೆಟ್​ ನೀಡಲಾಗುತ್ತಿದೆಯಲ್ಲವೇ? ಅದು ಹೇಗೆ ಕೆಲಸ ಮಾಡುತ್ತಿದೆ ಎಂದು ಪ್ರಶ್ನಿಸಿತು. ಸರ್ಕಾರ ಇದುವರೆಗೆ ಶಕ್ತಿ ಯೋಜನೆ ಅಡಿಯಲ್ಲಿ ಎಷ್ಟು ಹಣ ಬಿಡುಗಡೆ ಮಾಡಿದೆ ಎಂದು ನ್ಯಾಯಪೀಠ ಕೇಳಿತು.
ಪರಿಹಾರ ಪಾವತಿಸಲು ಹಣ ಇಲ್ಲ ಎನ್ನುತ್ತಿದ್ದೀರಿ. ನಿಮಗೆ ಶಕ್ತಿ ಯೋಜನೆಯಡಿ ಬರಲು ಬಾಕಿಯಿರುವ ಹಣ ಪಡೆದು ಪರಿಹಾರ ಪಾವತಿಸಬಹುದಲ್ಲವೇ? ಎಂದು ಹೇಳಿದ ಕೋರ್ಟ್​, ಸರ್ಕಾರವು ಎಷ್ಟು ಹಣ ಬಾಕಿ ಉಳಿಸಿಕೊಂಡಿದೆ ಎಂಬ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿ ಮುಂದಿನ ವಿಚಾರಣೆಯನ್ನು ಮಾ.23ಕ್ಕೆ ಮುಂದೂಡಿತು.

2 ವರ್ಷದಿಂದ ಗ್ರ್ಯಾಚುಟಿ ನೀಡಿಲ್ಲ:  

ನಾಲ್ಕು ನಿಗಮಗಳು ನಷ್ಟದಲ್ಲಿ ನಡೆಯುತ್ತಿವೆ. ಆದಾಯವಿಲ್ಲದೆ ಕಳೆದ ಎರಡು ವರ್ಷದಿಂದ ಬಿಎಂಟಿಸಿ ನೌಕರರಿಗೆ ಗ್ರ್ಯಾಚುಟಿ ಹಣ ನೀಡಿರಲಿಲ್ಲ. ಶಕ್ತಿ ಯೋಜನೆಯಡಿ ಸರ್ಕಾರ ಬಿಡುಗಡೆ ಮಾಡುತ್ತಿರುವ ಅನುದಾನವನ್ನು ಗ್ರ್ಯಾಚುಟಿ ಮತ್ತಿತರ ವೆಚ್ಚಗಳಿಗೆ ವಿನಿಯೋಗಿಸಲಾಗುತ್ತಿದೆ. ಪರಿಹಾರ ನೀಡಲು ನಿಗಮಗಳು ಒಪ್ಪಿಕೊಂಡಿಲ್ಲ ಎಂದು ನಿಗಮಗಳ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net