ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆ ವಿವಾದದ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಿದರೆ ಅದರ ನೇರ ಪರಿಣಾಮ ಪಕ್ಷದ ಮೇಲಾಗುತ್ತದೆ ಎಂದು ಎಚ್ಚರಿಸಿರುವ ಅವರು, ಹಿಂದುಳಿದ ವರ್ಗದ (OBC) ಪ್ರಭಾವಿ ನಾಯಕರನ್ನು ಹುದ್ದೆಯಿಂದ ಕೆಳಗಿಳಿಸಿದರೆ ಆ ಸಮುದಾಯದ ಜನರಿಗೆ ತೀವ್ರ ಅಸಮಾಧಾನ ಉಂಟಾಗಲಿದೆ, ಇದು ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಭಾರಿ ಹಿನ್ನಡೆ ತರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲದೆ, ಸದ್ಯ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದ್ದು, ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಡಿ.ಕೆ. ಶಿವಕುಮಾರ್ ಅವರ ಬಳಿಯೇನು ಮಂತ್ರದಂಡವಿಲ್ಲ, ಸಿದ್ದರಾಮಯ್ಯ ಕಾಲದಲ್ಲಿ ಆರಂಭವಾದ ಆಡಳಿತದ ಕುಸಿತ ಶಿವಕುಮಾರ್ ಬಂದರೂ ಮುಂದುವರಿಯಲಿದ್ದು, ಇವರ ಅವಧಿ ಮುಗಿಯುವ ಹೊತ್ತಿಗೆ ಇಡೀ ರಾಜ್ಯದ ಸ್ಥಿತಿ ದಯನೀಯವಾಗಲಿದೆ ಎಂದು ಟೀಕಿಸಿದ್ದಾರೆ.