ಅ.2ರಿಂದ ಭಾರತೀಯ ವಿದ್ಯಾಭವನದಲ್ಲಿ ‘ಕರ್ನಾಟಕ ನುಡಿ ತೋಟ’

ಕರ್ನಾಟಕದಲ್ಲಿರುವ ವಿವಿಧ ಭಾಷಾ ವೈವಿಧ್ಯತೆಯ ಪರಿಚಯ
Dr. Chiranjeev Singh released details of the ‘Karnataka Nudi Thota’ program at a press conference. H.N. Suresh, Director of Bharatiya Vidya Bhavan, and Joint Director Nagalakshmi K. Rao were present.
ಸುದ್ದಿಗೋಷ್ಠಿಯಲ್ಲಿ ‘ಕರ್ನಾಟಕ ನುಡಿ ತೋಟ’ ಕಾರ್ಯಕ್ರಮದ ವಿವರವನ್ನು ಡಾ.ಚಿರಂಜೀವ್ ಸಿಂಗ್ ಬಿಡುಗಡೆ ಮಾಡಿದರು. ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್, ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ಕೆ.ರಾವ್ ಉಪಸ್ಥಿತರಿದ್ದರು.
Published on: 

ಬೆಂಗಳೂರು : ಕರ್ನಾಟಕದಲ್ಲಿ ಕನ್ನಡದ ಜತೆಗೆ ತುಳು, ಕೊಂಕಣಿ, ಕೊಡವ, ಬ್ಯಾರಿ, ಸಂಕೇತಿ, ಅರೆಭಾಷೆ ಸೇರಿದಂತೆ ಹಲವು ಭಾಷೆಗಳು ಅಸ್ತಿತ್ವದಲ್ಲಿದ್ದು, ಅವೆಲ್ಲವುಗಳ ಸಾಹಿತ್ಯ, ಸಂಸ್ಕೃತಿ ಕುರಿತು ಚರ್ಚೆ, ಚಿಂತನವನ್ನು ನಡೆಸಲು ಭಾರತೀಯ ವಿದ್ಯಾಭವನವು ‘ಕರ್ನಾಟಕ ನುಡಿ ತೋಟ’ ಎಂಬ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಅ.2 ರಿಂದ ಮೂರು ದಿನಗಳ ಕಾಲ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಹಿತ್ಯೋತ್ಸವ, ಸಾಂಸ್ಕೃತಿಕ ಮೇಳ, ಪುಸ್ತಕ ಪ್ರದರ್ಶನ ಮತ್ತು ರಿಯಾತಿ ದರದಲ್ಲಿ ಮಾರಾಟ ಮೇಳ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ವಿದ್ಯಾಭವನದ ಉಪಾಧ್ಯಕ್ಷ ಡಾ.ಚಿರಂಜೀವ್ ಸಿಂಗ್, ಕರ್ನಾಟಕದಲ್ಲಿ ಇರುವಷ್ಟು ಭಾಷೆ, ಸಂಸ್ಕೃತಿ ಬೇರೆ ರಾಜ್ಯಗಳಲ್ಲಿ ದೊರೆಯುವುದಿಲ್ಲ. ಅಂತಹ ಭಾಷೆಗಳ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ಗುರುತಿಸಿ, ಸಂರಕ್ಷಿಸಿ ಜನರಿಗೆ ಪರಿಚಯಿಸುವ ಅಗತ್ಯವಿದೆ. ಭಾರತೀಯ ವಿದ್ಯಾಭವನದ 60ನೇ ವರ್ಷದ ವಜ್ರಮಹೋತ್ಸವ ಸರಣಿ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಎಲ್ಲ ಭಾಷೆಗಳ ಪರಿಣಿತರನ್ನು ಒಂದೇ ವೇದಿಕೆಯಲ್ಲಿ ಕರೆತಂದು ಕಾರ್ಯಕ್ರಮ ರೂಪಿಸಲಾಗಿದೆ. ಭಾಷೆ ಮತ್ತು ಉಪಭಾಷೆಗಳ ನಡುವಿನ ಸಂಬಂಧ ನಿಕಟವಾಗಿದ್ದರೂ, ಕೆಲವು ಭಾಷೆಗಳ ವೈಶಿಷ್ಟ್ಯವನ್ನು ಪ್ರತ್ಯೇಕವಾಗಿ ಗುರುತಿಸಬೇಕು. ಆ ನಿಟ್ಟಿನಲ್ಲಿ ಇದೊಂದು ಮಹತ್ವದ ಕಾರ್ಯಕ್ರಮ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ ಮಾತನಾಡಿ, ಮೂರು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ಭಾಷೆಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಅಕಾಡೆಮಿಗಳ ಮುಖ್ಯಸ್ಥರು, ವಿವಿಧ ಭಾಷೆಗಳನ್ನು ಪ್ರತಿನಿಧಿಸುವ ರಾಜಕೀಯ ಮುಖಂಡರು, ಭಾಷಾತಜ್ಞರು, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಜಾತಿ, ಧರ್ಮವನ್ನು ಮೀರಿ ಒಂದು ಭಾಷೆಯ ಉಗಮ, ಪ್ರಸಕ್ತ ಪರಿಸ್ಥಿತಿ, ಮುಂದಿನ ಭವಿಷ್ಯದ ಕುರಿತು ವಿಷಯತಜ್ಞರು ಮಂಡಿಸುವ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದರು.

ಭಾಷೆಯ ಬಗ್ಗೆ ಮಾತ್ರ ಚರ್ಚಿಸಿದರೆ ಒಂದು ಸಮುದಾಯದ ಸಮಗ್ರ ಪರಿಚಯ ಸಾಧ್ಯವಿಲ್ಲ. ಭಾಷೆ ಯಾವಾಗಲೂ ಸಂಸ್ಕೃತಿ ಹಾಗೂ ಜನಾಂಗದ ಬದುಕಿನೊಂದಿಗೆ ಬೆಸೆದುಕೊಂಡಿರುತ್ತದೆ. ಆದ್ದರಿಂದ ಆಯಾ ಭಾಷೆಯ ಲಿಪಿ, ಸಾಹಿತ್ಯ, ಪುಸ್ತಕಗಳು, ಆಚಾರವಿಚಾರ, ಸಾಂಸ್ಕೃತಿಕ ಚಟುವಟಿಕೆಗಳನ್ನು ಒಳಗೊಂಡಂತೆ ಸಮಗ್ರವಾಗಿ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ.
ನಾಗಲಕ್ಷ್ಮಿ ಕೆ.ರಾವ್, ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net