*ಕರ್ನಾಟಕ ವಿದ್ಯುಚ್ಫಕ್ತಿ ನಿಯಂತ್ರಣ ಆಯೋಗದಿಂದ ಸಾರ್ವಜನಿಕ ಅರ್ಜಿ ವಿಚಾರಣೆ: ದರ ಹೆಚ್ಚಳಕ್ಕೆ ಜೆಸ್ಕಾಂ ಕೋರಿಕೆ

Photo
Photo
Published on
ಕಲಬುರಗಿ: ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ (ಜೆಸ್ಕಾಂ) ಸಂಸ್ಥೆಯ 2024-25ನೇ ಆರ್ಥಿಕ ವರ್ಷದ ವಾರ್ಷಿಕ ಕಾರ್ಯ ಪರಿಶೀಲನೆ ಸಂಬಂಧವಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ (ಕೆಇಆರ್‌ಸಿ) ಸಾರ್ವಜನಿಕ ವಿಚಾರಣಾ ಸಭೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿತು.
ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣ ಬಾಜಪೇಯಿ ಅವರು ಕರ್ನಾಟಕ ವಿದ್ಯುಚ್ಫಕ್ತಿ ನಿಯಂತ್ರಣ ಆಯೋಗ ಗೌರವ ಅಧ್ಯಕ್ಷರಾದ ರವಿಕುಮಾರ್ ಅವರಿಗೆ ಸಲ್ಲಿಸಿದ ವಾರ್ಷಿಕ ಕಾರ್ಯನಿರ್ವಹಣಾ ವರಿದಿ ಪ್ರಸ್ತಾವನೆಯನ್ನು ಅನುಮೋದಿಸಿ, 131 ಕೋಟಿ ನಷ್ಟ ಉಂಟಾಗಿದ್ದು ಅದನ್ನು ಸರಿದೂಗಿಸುವಂತೆ ಮನವಿ ಮಾಡಿದರು.
ಕೆಇಆರ್‌ಸಿ ಅನುಮೋದಿತ ವೆಚ್ಚ ಮತ್ತು ಆದಾಯದ ನಡುವೆ ವ್ಯತ್ಯಾಸ ಉಂಟಾಗಿದ್ದು, ಸಂಸ್ಥೆಯ ಆದಾಯ ಮತ್ತು ಖರ್ಚು ಎರಡೂ ಹೆಚ್ಚಾಗಿದೆ. 131 ಕೋಟಿ ರೂಪಾಯಿ ಬಾಕಿ ಉಳಿದಿರುವುದರಿಂದ, ಅದನ್ನು ಸರಿದುಗಿಸುವುದು ಅಗತ್ಯವಿದೆ ಎಂದು ಅವರು ವಿವರಿಸಿದರು.
ಈ ಕುರಿತು ಕೆಇಆರ್‌ಸಿ ಅಧ್ಯಕ್ಷರು ವಿಷಯವನ್ನು ಪರಿಗಣಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಭೆಯಲ್ಲಿ ಕಂಪನಿಯ ಆದಾಯ-ವೆಚ್ಚ ವಿವರಗಳು, ವಿದ್ಯುತ್ ಖರೀದಿ ವೆಚ್ಚ, ವಿತರಣೆ ವ್ಯವಸ್ಥೆ ಸುಧಾರಣೆ, ಬಂಡವಾಳ ಹೂಡಿಕೆ ಯೋಜನೆಗಳು ಹಾಗೂ ನಷ್ಟ ಕಡಿತ ಕ್ರಮಗಳ ಕುರಿತು ಪ್ರಸ್ತುತಪಡಿಸಲಾಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ವಿದ್ಯುಚ್ಫಕ್ತಿ ನಿಯಂತ್ರಣ ಆಯೋಗದ ಗೌರವ ಸದಸ್ಯರಾದ ಹೆಚ್.ಕೆ. ಜಗದೀಶ್, ಜೆಸ್ಕಾಂ ಅಧ್ಯಕ್ಷರಾದ ಪ್ರವೀಣ್ ಪಾಟೀಲ ಹಾರವಾಳ, ನಿರ್ದೇಶಕರು (ತಾಂತ್ರಿಕ) ಚಂದ್ರಕಾಂತ ಪಾಟೀಲ್ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಬಿ.ಎಚ್. ಶಿವಶಂಕರ್ ಉಪಸ್ಥಿತರಿದ್ದರು.

ಗ್ರಾಹಕರ ಅಭಿಪ್ರಾಯ

ಮೊಬಿ ಮಹಮ್ಮದ್ ಮಾತನಾಡಿ, “ಕಂಪನಿಯ ಹೆಚ್ಚುವರಿ ವ್ಯತ್ಯಾಸವನ್ನು ಗ್ರಾಹಕರ ಮೇಲೆ ಹೇರುವುದು ಸಮಂಜಸವಲ್ಲ. ಇದು ಗ್ರಾಹಕರಿಗೆ ಹೊರೆಯಾಗುತ್ತದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಶ್ನೋತ್ತರ

ದೀಪಕ ಗಾಲಾ (ಸಾಮಾಜಿಕ ಕಾರ್ಯಕರ್ತರು):
ರಾಯಚೂರು ನಗರದ ಮುನಿರ್‌ವಾಡಿ ಮತ್ತು ದೇವಿನಗರ ಫೀಡರ್‌ಗಳಲ್ಲಿ ಪ್ರತಿ ವರ್ಷ 15% ನಷ್ಟವಾಗುತ್ತಿದೆ. ಸೇಫ್ಟಿ ಆಫೀಸರ್ ನೇಮಕ ಮಾಡಿ, ಸಿಬ್ಬಂದಿಗೆ ಸುರಕ್ಷತಾ ತರಬೇತಿ ನೀಡಬೇಕು. ಪ್ರತಿ 3 ತಿಂಗಳಿಗೊಮ್ಮೆ ಗ್ರಾಹಕ ಸಂವಾದ ಸಭೆ ನಡೆಸಬೇಕು.
ಉತ್ತರ: ಪ್ರತಿ 3 ತಿಂಗಳಿಗೊಮ್ಮೆ ಗ್ರಾಹಕ ಸಂವಾದ ಸಭೆ ನಡೆಸುವುದಾಗಿ ಭರವಸೆ ನೀಡಿದರು. ಮುನಿರ್‌ವಾಡಿ ಮತ್ತು ದೇವಿನಗರ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಮಲ್ಲಿಕಾರ್ಜುನ್ ರಾಂಪೂರ:

ರಾಯಚೂರು ಜಿಲ್ಲೆಯಲ್ಲಿ ವಿದ್ಯುತ್ ದೂರುಗಳಿಗೆ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಉತ್ತರ: ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಶಾಂತಗೌಡ ಜಾಗಿದಾರ:

ವಿದ್ಯುತ್ ಕಳ್ಳತನಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಸಹಿ ಮಾಡುವ ಬದಲು ಸ್ಥಳ ಪರಿಶೀಲನೆ ನಡೆಸಬೇಕು.
ಉತ್ತರ: ವಿದ್ಯುತ್ ಕಳ್ಳತನ ಪತ್ತೆ ಮಾಡಲು ಜಾಗೃತ ದಳ 24x7 ಕಾರ್ಯನಿರ್ವಹಿಸುತ್ತಿದ್ದು, ಅಪರಾಧಿಗಳಿಗೆ ದಂಡ ವಿಧಿಸಲಾಗುತ್ತದೆ. ಅಧಿಕಾರಿಗಳು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು.

ಸಿದ್ದರಾಮಯ್ಯ ಹೀರೆಮಠ:

ಜೆಸ್ಕಾಂನ ಸಾಮಾಜಿಕ ಜಾಲತಾಣಗಳು ಚುರುಕಾಗಬೇಕು. ಕುಂದುಕೊರತೆ ಸಭೆಗಳ ಮಾಹಿತಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಜಾಗೃತ ದಳಕ್ಕೆ ಪ್ರತ್ಯೇಕ ಸಹಾಯವಾಣಿ ಆರಂಭಿಸಬೇಕು.
ಉತ್ತರ: ಜಾಗೃತ ದಳಕ್ಕೆ ಪ್ರತ್ಯೇಕ ಸಹಾಯವಾಣಿ ಆರಂಭಿಸುವ ಬಗ್ಗೆ ಪರಿಗಣಿಸಲಾಗುವುದು ಎಂದು ಹೇಳಿದರು.

ಸಿದ್ದಣ್ಣ ಕಲ್ಲಶೆಟ್ಟಿ:

ಟ್ರಾನ್ಸ್ಫಾರ್ಮರ್ (ಟಿ.ಸಿ) ಸುಟ್ಟರೆ ಬದಲಾವಣೆ ವಿಳಂಬವಾಗುತ್ತಿದೆ. 1 ಲಕ್ಷ ರೂಪಾಯಿ ಬೇಡಿಕೆ ಇರುತ್ತದೆ ಎಂಬ ಆರೋಪ ಮಾಡಿದರು.
ಉತ್ತರ: ಒಂದು ಟಿ.ಸಿ ಬದಲಾವಣೆಗಾಗಿ 25 ಸಾವಿರ ರೂ. ವೆಚ್ಚವಾಗುತ್ತದೆ. 2 ದಿನಗಳೊಳಗೆ ಬದಲಾವಣೆ ಮಾಡಬೇಕು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net