ಸಮಿತಿ ಆದೇಶ ಖಂಡಿಸಿ ಕರವೇ ಪ್ರತಿಭಟನೆ

ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆಡಳಿತ ಸಹೋದರ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಕಾವೇರಿ ನೀರು ನಿಯಂತ್ರಣ ಸಮಿತಿ 15 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸಬೇಕು ಆದೇಶವನ್ನು ರದ್ದು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆಡಳಿತ ಸಹೋದರ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಕಾವೇರಿ ನೀರು ನಿಯಂತ್ರಣ ಸಮಿತಿ 15 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸಬೇಕು ಆದೇಶವನ್ನು ರದ್ದು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
Published on

ಎಚ್.ಡಿ.ಕೋಟೆ:

ಕಾವೇರಿ ನಿಯಂತ್ರಣ ಸಮಿತಿ ನೀಡಿರುವ ಆದೇಶ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ರಾಜ್ಯದ ಪರಿಸ್ಥಿತಿಯನ್ನು ಅವಲೋಕನ ಮಾಡದೆ ಕಾವೇರಿ ನೀರು ನಿಯಂತ್ರಣ ಸಮಿತಿ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ನೀಡಿರುವ ನಿರ್ದೇಶನ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ರಾಜ್ಯದ ವಾಸ್ತವ ಪರಿಸ್ಥಿತಿ ಅರಿಯದೆ ಏಕಪಕ್ಷೀಯವಾಗಿ ತಮಿಳುನಾಡಿಗೆ ಅನುಕೂಲ ಮಾಡಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಹಾಗಾಗಿ ಈ ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ತಾಲೂಕ ಅಧ್ಯಕ್ಷ ಕ್ರಾಂತಿ ಕುಮಾರ್ ಮಾತನಾಡಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ. ಕೆಆರ್‌ಎಸ್, ಕಬಿನಿ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀರ ಕೆಳಮಟ್ಟದಲ್ಲಿದೆ. ರಾಜ್ಯದ ಜನರ ಕುಡಿಯುವ ನೀರಿನ ಪೂರೈಕೆಗೂ ಸಾಕಾಗದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ ನೀರು ಹರಿಸುವ ನಿರ್ಧಾರ ಸರಿಯಲ್ಲ ಎಂದರು.
ಜೀವಕ ಸಂಘಟನೆಯ ಜಿಲ್ಲಾ ಸಂಚಾಲಕ ಜೀವಿಕ ಬಸವರಾಜ್ ಮಾತನಾಡಿ, ಕಬಿನಿ ಜಲಾಶಯವು ಭರ್ತಿಯಾಗಿದ್ದರೂ ರೈತರ ಜಮೀನುಗಳಿಗೆ ನೀರು ಕೊಡದೆ, ತಮಿಳುನಾಡಿಗೆ ನೀರು ಹರಿಸುತ್ತಿರುವುದು ಸರಿಯಾದ ಕ್ರಮ ಅಲ್ಲ. ಕಬಿನಿ ಅಚ್ಚುಕಟ್ಟು ಸಾವಿರಾರು ಎಕರೆ ಜಮೀನಿಗೆ ನೀರು ಹರಿಸಿದರೆ ಇಲ್ಲಿನ ರೈತರ ಹಿತ ಕಾಪಾಡಿದಂತೆ ಆಗುತ್ತದೆ. ಹಾಗಾಗಿ ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ಬದಲು ತಾಲೂಕಿನ ಕೆರೆಕಟ್ಟೆಗಳನ್ನು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.
ವೇದಿಕೆಯ ಕಾರ್ಯದರ್ಶಿ ಪ್ರವೀಣ್, ಗೌರವಾಧ್ಯಕ್ಷ ಸೋಮಣ್ಣ, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಕಟ್ಟೆ ಮನಗನಹಳ್ಳಿ ಸ್ವಾಮಿ ಕುಮಾರ್, ಚೆಲುವರಾಜ್, ಚೆನ್ನಕೋಟೆ, ಕೃಷ್ಣ, ಮಹೇಶ, ಆನಂದ, ಕಾಳಪ್ಪಾಜಿ, ಶಿವಯ್ಯ, ಮಹೇಶ್, ರವಿ, ಅನಿಲ್ ಕುಮಾರ್, ಶಿವಣ್ಣ, ಸೋಮಣ್ಣ, ದೊರೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net