

‘ಫ್ರಾನ್ಸ್ ಹೊತ್ತಿ ಉರಿಯುತ್ತಿದೆ! ಸಂಪೂರ್ಣ ಭಿನ್ನ ಜಗತ್ತಿನಿಂದ ಬಂದ, ಹೃದಯದಲ್ಲಿ ದ್ವೇಷ ತುಂಬಿಕೊಂಡಿರುವ ಜನರ ವಲಸೆಯು ಒಂದು ಕಾಲದಲ್ಲಿ ಮಹಾನ್ ರಾಷ್ಟ್ರವಾಗಿದ್ದ ಫ್ರಾನ್ಸ್ಅನ್ನು ಛಿದ್ರಗೊಳಿಸಿದೆ. ತಡವಾಗುವ ಮೊದಲೇ ನಿಮ್ಮ ಗಡಿಗಳನ್ನು ಮುಚ್ಚಿ, ಪರಿಸ್ಥಿತಿಯನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಿ...!’
‘ಯುರೋಪ್ ತನ್ನ ಗಡಿಗಳನ್ನು ಮುಚ್ಚಿ, ಪ್ರತಿಭಟನೆಗಳಲ್ಲಿ ಭಾಗವಹಿಸಿರುವ ಅಪರಾಧಿಗಳನ್ನು ಹೊರಹಾಕದಿದ್ದರೆ, ಯುರೋಪ್ ನಾಶವಾಗುತ್ತದೆ. ಕಳೆದ ಹತ್ತು ವರ್ಷಗಳಿಂದ ನಾನು ಹೇಳುತ್ತಲೇ ಬಂದಿರುವಂತೆ, ಯುರೋಪ್ ತನ್ನ ಗಡಿಗಳನ್ನು ಮುಚ್ಚಲೇಬೇಕು. ತಮ್ಮ ದೇಶಗಳನ್ನು ದ್ವೇಷಿಸುವ ಜನರನ್ನು ಅದು ಹೊರಹಾಕಬೇಕು. ಇಲ್ಲದಿದ್ದರೆ ಯುರೋಪ್ ನಾಶವಾಗುತ್ತದೆ. ಬದುಕುಳಿಯುವ ಯಾವುದೇ ಅವಕಾಶವೂ ಅದಕ್ಕಿರುವುದಿಲ್ಲ...’
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ನೀಡಿದ ಹೇಳಿಕೆಗಳಿವು. ಫ್ರಾನ್ಸ್, ಇಟಲಿ ಸೇರಿದಂತೆ ಯುರೋಪಿಯನ್ ದೇಶಗಳಿಗೆ ಅನ್ಯದೇಶಗಳಿಂದ ಆಗಿರುವ ಅನಿಯಂತ್ರಿತ ವಲಸೆಯ ಕುರಿತು ಅವರು ಮಾತನಾಡುತ್ತಲೇ ಬಂದಿದ್ದಾರೆ.
ಇದು ಕೇವಲ ಯುರೋಪಿಯನ್ ದೇಶಗಳ ಸಮಸ್ಯೆ ಅಲ್ಲ. ದೇಶದೇಶಗಳ ನಡುವಿನ ಸಮಸ್ಯೆ ಮಾತ್ರವಲ್ಲ. ಭಾರತ ಒಕ್ಕೂಟದಲ್ಲಿ ಹಿಂದಿ ರಾಜ್ಯಗಳಿಂದ ನಡೆಯುತ್ತಿರುವ ಮಹಾವಲಸೆ, ಹಿಂದಿಯೇತರ ರಾಜ್ಯಗಳ ಕತ್ತು ಹಿಸುಕುತ್ತಿದೆ. ಕರ್ನಾಟಕದಂಥ ರಾಜ್ಯಗಳು ಅಂತಾರಾಜ್ಯ ವಲಸೆಯಿಂದ ನರಳುತ್ತಿವೆ. ಅದು ಕ್ಯಾನ್ಸರ್ನಂತೆ ಹರಡುತ್ತಲೇ ಇದೆ. ಭಾರತೀಯ ಸಂವಿಧಾನದ 19(1)(ಡಿ) ಮತ್ತು 19(1)(ಇ) ವಿಧಿಗಳು ನಾಗರಿಕರಿಗೆ ದೇಶದೊಳಗೆ ಸಂಚರಿಸುವ ಮತ್ತು ಭಾರತದ ಯಾವುದೇ ಭಾಗದಲ್ಲಿ ನೆಲೆಸುವ ಹಕ್ಕುಗಳನ್ನು ಒದಗಿಸುತ್ತವೆ; ಇವು ಸಂವಿಧಾನದಲ್ಲಿ ಸೂಚಿಸಿರುವ ಸಮಂಜಸ ನಿರ್ಬಂಧಗಳಿಗೆ ಒಳಪಟ್ಟಿವೆ. ಅಲ್ಲಿಗೆ ಒಂದು ರಾಜ್ಯದವರು ಇನ್ನೊಂದು ರಾಜ್ಯಕ್ಕೆ ಹೋಗಿ ನೆಲೆಸುವುದು ಇಲ್ಲಿ ಕಾನೂನುಬದ್ಧ. ಸಮಸ್ಯೆಯ ಮೂಲವೇ ಇಲ್ಲಿದೆ.
ಭಾರತ ಹಲವು ರಾಜ್ಯಗಳ ಒಕ್ಕೂಟ. ಭಾಷೆಗಳ ಆಧಾರದಲ್ಲಿ ಭಾರತ ಒಕ್ಕೂಟ ರೂಪುಗೊಂಡಿದೆ. ಎಲ್ಲ ರಾಜ್ಯಗಳು ತಮ್ಮದೇ ಆದ ಭಾಷೆ, ಸಂಸ್ಕೃತಿ, ಜನಜೀವನಗಳನ್ನು ಒಳಗೊಂಡಿವೆ. ಅಂತಾರಾಜ್ಯ ವಲಸೆಗೆ ನಮ್ಮ ಸಂವಿಧಾನದಲ್ಲಿ ಯಾವುದೇ ಕಡಿವಾಣ ಇಲ್ಲದಿರುವುದು ಬಹುತ್ವ ಭಾರತದ ಬೇರುಗಳನ್ನೇ ಅಲ್ಲಾಡಿಸುತ್ತಿದೆ. ಜನಸಂಖ್ಯೆ ನಿಯಂತ್ರಣವಿಲ್ಲದ, ಅಭಿವೃದ್ಧಿ ಹೊಂದದ, ದುರ್ಬಲ ರಾಜ್ಯಗಳಿಂದ ಕರ್ನಾಟಕ, ಮಹಾರಾಷ್ಟ್ರದಂಥ ರಾಜ್ಯಗಳಿಗೆ ವಲಸೆ ದಿನೇದಿನೆ ಹೆಚ್ಚುತ್ತಲೇ ಇದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚಿಗೆ ನೀಡಿದ ಹೇಳಿಕೆ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ಕರ್ನಾಟಕಕ್ಕೆ ಸುಮಾರು 40 ಲಕ್ಷಕ್ಕೂ ಹೆಚ್ಚು ಅನ್ಯರಾಜ್ಯಗಳ ಜನರು ವಲಸೆ ಬಂದಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಅಥವಾ ಅಸ್ಸಾಂ ರಾಜ್ಯಗಳಿಂದ ಅತಿಹೆಚ್ಚು ಪ್ರಮಾಣದಲ್ಲಿ ವಲಸೆ ನಡೆಯುತ್ತಿದೆ.
ವಲಸಿಗರಿಗೆ ಕರ್ನಾಟಕ ಸುರಕ್ಷಿತ ಸ್ವರ್ಗವಾಗಿದೆ. ಇಲ್ಲಿ ಅವರಿಗೆ ಬೇಕಾದ ಎಲ್ಲವೂ ಸಿಗುತ್ತಿದೆ. ಉದ್ಯೋಗ, ಉದ್ಯಮಗಳು ಅವರ ಪಾಲಾಗುತ್ತಿವೆ. ವಲಸಿಗರು ರಾಷ್ಟ್ರೀಯತೆಯ ಹೆಸರಿನಲ್ಲಿ, ದೇಶಭಕ್ತಿಯ ಹೆಸರಿನಲ್ಲಿ ತಮ್ಮ ಮಾತೃಭಾಷೆಯಲ್ಲೇ ಇಲ್ಲಿ ಎಲ್ಲ ಸೇವೆಗಳನ್ನು ಪಡೆಯುತ್ತಿದ್ದಾರೆ. ಈಗೀಗ ‘ಬೆಂಗಳೂರನ್ನು ಕಟ್ಟಿದ್ದು ನಾವು, ನಾವು ಇಲ್ಲಿಂದ ಹೋದರೆ ಈ ರಾಜ್ಯ ನಾಶವಾಗುತ್ತದೆ’ ಎಂಬ ಹೊಸ ನಿರೂಪಣೆಯನ್ನು ಹೊಸೆಯುತ್ತಿದ್ದಾರೆ. ಕನ್ನಡಿಗರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ಪ್ರಚಾರ ನಡೆಸಲಾಗುತ್ತಿದೆ. ಧ್ರುವ್ ರಾಠಿ ಎಂಬ ಹಿಂದಿ ಯೂಟ್ಯೂಬರ್ ತನ್ನ ಒಂದು ವಿಡಿಯೋದಲ್ಲಿ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದ. ಕನ್ನಡ ಮಾತನಾಡದೇ ಇರುವವರನ್ನು ಕರ್ನಾಟಕದಲ್ಲಿ ಥಳಿಸಲಾಗುತ್ತದೆ ಎಂದು ಅವನು ಹಸಿ ಸುಳ್ಳು ಹೇಳಿದ್ದ. ಇಂಥ ಪೊ›ಪಗಂಡಗಳು ನಿತ್ಯವೂ ನಡೆಯುತ್ತಲೇ ಇವೆ. ರಾಷ್ಟ್ರೀಯ ಮಾಧ್ಯಮಗಳು ಎಂದು ಕರೆಸಿಕೊಳ್ಳುವ ಕೆಲವು ಹಿಂದಿ ಮಾಧ್ಯಮಗಳು ಈ ಪೊ›ಪಗಂಡಕ್ಕೆ ನೀರೆರೆದು ಪೋಷಿಸುತ್ತವೆ.
ಅತಿದೊಡ್ಡ ಸಮಸ್ಯೆ ಏನೆಂದರೆ ಹೊರರಾಜ್ಯಗಳಿಂದ ಬರುತ್ತಿರುವ ವಲಸಿಗರು ಕರ್ನಾಟಕದ ನೆಲದ ಭಾಷೆ, ಆಡಳಿತ ಭಾಷೆ ಕನ್ನಡವನ್ನು ಕಲಿಯುತ್ತಿಲ್ಲ. ಅವರಿಗೆ ಕಲಿಯುವ ಮನಸು ಇಲ್ಲ. ವಲಸೆಯ ಪ್ರಮಾಣ ಹೆಚ್ಚುತ್ತಿದ್ದಂತೆ ವಲಸಿಗರ ಅಹಂಕಾರವೂ ಹೆಚ್ಚುತ್ತಿದೆ. ಕನ್ನಡಿಗರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗೆ ಮನೆಯ ಮಾಲೀಕ ಬಾಡಿಗೆ ಕೇಳಿದ ಎಂಬ ಕಾರಣಕ್ಕೆ ವಲಸಿಗ ಕಾರ್ವಿುಕರು ಆತನನ್ನು ಕೊಂದುಹಾಕಿದರು. ಇಂಥ ಪ್ರಕರಣಗಳು ಇನ್ನಷ್ಟು ಹೆಚ್ಚುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ತಮಾಶೆ ಎಂದರೆ ಕರ್ನಾಟಕಕ್ಕೆ ಬಂದವರು ಕನ್ನಡಿಗರಿಗೆ ‘ಹಿಂದಿಯಲ್ಲಿ ಮಾತನಾಡಿ’ ಎಂದು ತಾಕೀತು ಮಾಡುತ್ತಿದ್ದಾರೆ! ಬೆಂಗಳೂರು ಮಾತ್ರವಲ್ಲ, ಕರ್ನಾಟಕದ ನಗರ-ಪಟ್ಟಣಗಳಲ್ಲಿ ಈ ಸಂಘರ್ಷ ನಡೆಯುತ್ತಲೇ ಇದೆ. ಇದು ನಿಶ್ಚಿತವಾಗಿ ಬೇರೆಯದೇ ಸ್ವರೂಪ ಪಡೆದುಕೊಳ್ಳಲಿದೆ, ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾಕೆಂದರೆ ಕನ್ನಡಿಗರ ಸಹನೆಗೂ ಒಂದು ಮಿತಿ ಇರುತ್ತದೆಯಲ್ಲವೇ?
ವಲಸಿಗರು ದಿನಗಳೆದಂತೆ ಕರ್ನಾಟಕ, ಕನ್ನಡ, ಕನ್ನಡಿಗರನ್ನು ದ್ವೇಷಿಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಆಶ್ರಯ ಕೊಟ್ಟ ಜನರೊಂದಿಗೆ ಜಗಳಕ್ಕೆ ನಿಲ್ಲುತ್ತಿದ್ದಾರೆ. ಕರ್ನಾಟಕವನ್ನು ದ್ವೇಷಿಸುವ ಜನರ ಸಂಖ್ಯೆ ಹೆಚ್ಚುತ್ತಿದೆ. ಕರ್ನಾಟಕದ ಮೂಲ ಅಸ್ತಿತ್ವಕ್ಕೇ ಧಕ್ಕೆ ಬರುವ ಕಾಲ ಹತ್ತಿರವಾಗುತ್ತಿದೆ.
ಅತಿಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರು ಈ ಅಂತಾರಾಜ್ಯ ವಲಸಿಗರು. ಕರ್ನಾಟಕದ ಒಳಗೆ ಅಪರಾಧ ಎಸಗಿ ತಮ್ಮ ರಾಜ್ಯಗಳಿಗೆ ಹೋಗಿ ಅಡಗಿಕೊಳ್ಳುವುದು ಇವರಿಗೆ ಸುಲಭವಾಗಿದೆ. ಕರ್ನಾಟಕದಲ್ಲಿ ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಮಾದಕ ವಸ್ತುಗಳ ಜಾಲ ಸಕ್ರಿಯವಾಗಿದೆ. ತಾವು ಹಾಳಾಗುವುದಲ್ಲದೆ ಇವರು ಕನ್ನಡದ ಹೊಸ ತಲೆಮಾರಿನ ಮಕ್ಕಳನ್ನೂ ಹಾಳುಗೆಡಹುತ್ತಿದ್ದಾರೆ. ನಮ್ಮ ಮಕ್ಕಳು ಡ್ರಗ್ಸ್ ಹುಚ್ಚಿಗೆ ಬಲಿಯಾಗುತ್ತಿದ್ದಾರೆ.
ಇತ್ತೀಚೆಗೆ ಐಟಿ ಉದ್ಯೋಗಿಯೊಬ್ಬರು ವಿಡಿಯೋ ಒಂದನ್ನು ಮಾಡಿ, ‘ಅರ್ಜಿಯಲ್ಲಿ ಕನ್ನಡಿಗರು ಎಂಬುದು ಗೊತ್ತಾದರೆ ಐಟಿ ಸಂಸ್ಥೆಗಳಲ್ಲಿ ಕೆಲಸ ಕೊಡುತ್ತಿಲ್ಲ’ ಎಂದು ಹೇಳಿದರು. ಆ ವಿಡಿಯೋ ವೈರಲ್ ಆಯಿತು. ಸ್ವತಃ ಮುಖ್ಯಮಂತ್ರಿಯೇ ಪ್ರತಿಕ್ರಿಯೆ ನೀಡಿದರು. ‘ಕನ್ನಡಿಗರಿಗೆ ಆಗುತ್ತಿರುವ ಈ ರೀತಿಯ ಅನ್ಯಾಯವನ್ನು ಸಹಿಸುವುದಿಲ್ಲ’ ಎಂದು ಹೇಳಿದರು.
ಆದರೆ ಪರಿಸ್ಥಿತಿ ಅಷ್ಟು ಸರಳವಾಗಿಲ್ಲ. ಕರ್ನಾಟಕ ಸರ್ಕಾರವೂ ಕನ್ನಡಿಗರ ಕುರಿತು ಅಷ್ಟು ಕಕ್ಕುಲಾತಿಯಿಂದ ಇದೆ ಎಂದು ಹೇಳಲು ಸಾಧ್ಯವಿಲ್ಲ. ಇತ್ತೀಚೆಗೆ ಐಟಿ ಬಿಟಿ ಇಲಾಖೆಯಡಿ ಕಾರ್ಯನಿರ್ವಹಿಸುವ ಸಂಸ್ಥೆಗಳ ಮುಖ್ಯಸ್ಥರ ಸ್ಥಾನದಲ್ಲಿ ಯಾರ್ಯಾರಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿತ್ತು. ಎಲ್ಲ ಸಂಸ್ಥೆಗಳಿಗೂ ಉತ್ತರ ಭಾರತೀಯರೇ ಮುಖ್ಯಸ್ಥರು. ಇದು ಸರ್ಕಾರದ ಮೂಗಿನ ಕೆಳಗೇ ನಡೆಯುತ್ತಿದೆ. ಐಟಿ ಇಲಾಖೆಯ ನಿರ್ಣಾಯಕ ಸ್ಥಾನಗಳಲ್ಲಿ ಉತ್ತರ ಭಾರತೀಯರೇ ತುಂಬಿಕೊಂಡರೆ ಅವರು ಕನ್ನಡಿಗರ ಉದ್ಧಾರಕ್ಕೆ ಶ್ರಮಿಸುತ್ತಾರೆಯೇ? ಇಂಥ ದಡ್ಡ ಪ್ರಶ್ನೆಗಳನ್ನು ಕೇಳಿಕೊಂಡು ನಾವು ಉತ್ತರ ಹುಡುಕಬೇಕೆ?
ಪ್ರಶ್ನೆಗಳು ಇಲ್ಲಿಗೆ ಮುಗಿಯುವುದಿಲ್ಲ. ರಾಜ್ಯ ಸರ್ಕಾರ ಯಾರಿಗಾದರೂ ಬೆದರುತ್ತದೆ ಎಂದರೆ ಇದೇ ಐಟಿ ಕಂಪನಿಗಳು, ಕಾರ್ಪೆರೇಟ್ ಕಂಪೆನಿಗಳ ಮುಖ್ಯಸ್ಥರಿಗೆ! ಅವರು ಹೇಳಿದ್ದೇ ಇವರಿಗೆ ವೇದವಾಕ್ಯ. ಹಿಂದೆ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಕಾಯ್ದೆ ಜಾರಿ ಮಾಡಬೇಕೆಂದು ಹೋರಾಟ ನಡೆಸಿತ್ತು. ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿಯನ್ನೂ ನೀಡಿದ್ದೆವು. ಕನ್ನಡಿಗರಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಾತಿ ನೀಡುವ ಕಾಯ್ದೆಗೆ ಸಚಿವ ಸಂಪುಟದ ಅನುಮೋದನೆಯೂ ದೊರೆಯಿತು. ಆಗ ಇದೇ ಐಟಿ ಸಂಸ್ಥೆಗಳ ಕೆಲವು ಕೂಗುಮಾರಿಗಳು ಎಂದಿನಂತೆ ವಿರೋಧಿಸಿದರು. ಸರ್ಕಾರ ಬೆದರಿತು. ಸಾಲದ್ದಕ್ಕೆ ಸಿದ್ಧರಾಮಯ್ಯ ಸಂಪುಟದ ಕೆಲವು ಸದಸ್ಯರು ಕೂಡ ಈ ಕಾರ್ಪೆರೇಟ್ಗಳ ತುತ್ತೂರಿಗಳಾದರು. ಈ ಕಾಯ್ದೆ ಬೇಡ, ಜಾರಿಗೆ ತಂದರೆ ಕರ್ನಾಟಕದಿಂದ ಉದ್ಯಮಗಳು ಬೇರೆ ರಾಜ್ಯಗಳಿಗೆ ಹೋಗಬಹುದು ಎಂದು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದರು. ಸರ್ಕಾರ ಕಾಯ್ದೆಯನ್ನು ಹಿಂದಕ್ಕೆ ಪಡೆಯಿತು.
ಕರ್ನಾಟಕವನ್ನು ಮುನ್ನಡೆಸುತ್ತಿರುವ ರಾಜಕಾರಣಿಗಳು ಇಲ್ಲಿನ ಎಲ್ಲ ಸಂಪನ್ಮೂಲಗಳನ್ನು ಚಿನ್ನದ ತಟ್ಟೆಯಲ್ಲಿಟ್ಟು ವಲಸಿಗರ ಕೈಗೆ ಕೊಡುತ್ತಿದ್ದಾರೆ. ‘ಹೊರಗಿನಿಂದ ಜನ ಬಂದರೆ ನಾವು ಬೇಡ ಅನ್ನಕ್ಕಾಗುತ್ತಾ?’ ಎಂದು ಜಾಣ ಮುಗ್ಧರಂತೆ ಮಾತನಾಡುತ್ತಿದ್ದಾರೆ. ಬೆಂಗಳೂರು ನಗರ ಅಂಕೆ ಮೀರಿ ಬೆಳೆದರೂ ಅದನ್ನು ಎಲ್ಲಾದರೂ ಒಂದು ಹಂತದಲ್ಲಿ ನಿಲ್ಲಿಸಬೇಕು ಎಂಬ ವಿವೇಕ ಇವರಿಗೆ ಬರುತ್ತಿಲ್ಲ. ಬದಲಾಗಿ ಇನ್ನಷ್ಟು ಮೆಟ್ರೋ, ಇನ್ನಷ್ಟು ರೈಲು, ಇನ್ನಷ್ಟು ರಸ್ತೆಗಳಿಗೆ ದುಡ್ಡು ಸುರಿಯುತ್ತಿದ್ದಾರೆ. ಬೆಂಗಳೂರು ವಲಸಿಗರ ಭಾರಕ್ಕೆ ಕುಸಿದುಹೋಗುತ್ತಿದೆ. ಆದರೆ ಮೂಲ ಸಮಸ್ಯೆಯಾದ ವಲಸೆಯನ್ನು ನಿಗ್ರಹಿಸುವ ಬಗ್ಗೆ ಯಾರಿಗೂ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ.
ನಿಜ, ಭಾರತ ಸಂವಿಧಾನದ ಪ್ರಕಾರ ಕಾನೂನುಬದ್ಧವಾಗಿ ವಲಸೆಯನ್ನು ತಡೆಯಲು ಸಾಧ್ಯವಿಲ್ಲ. ಆದರೆ ನಿಯಂತ್ರಿಸುವ ಹಕ್ಕು ಮತ್ತು ಅಧಿಕಾರ ರಾಜ್ಯ ಸರ್ಕಾರಕ್ಕೆ ಇದ್ದೇ ಇದೆ. ಹೊರಗಿನಿಂದ ಬರುವ ಕಾರ್ವಿುಕರಿಗೆ ಅನ್ವಯಿಸುವ ಕಾನೂನುಗಳಲ್ಲಿ ಮಾರ್ಪಾಡು ಮಾಡುವುದೂ ಸೇರಿದಂತೆ ವಸತಿ ನಿಯಮಗಳು, ತೆರಿಗೆ ಮಾದರಿಯಲ್ಲಿ ಬದಲಾವಣೆ, ಉದ್ಯೋಗ ನೀಡುವವರಿಗೆ ಹೊಣೆಗಾರಿಕೆ ನಿಗದಿಪಡಿಸುವುದೂ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವುದು ಸೇರಿದಂತೆ ಹಲವು ಉಪಕ್ರಮಗಳ ಮೂಲಕ ವಲಸೆಯ ಮೇಲೆ ನಿಯಂತ್ರಣ ಇಡಲು ಸಾಧ್ಯವಿದೆ.
ಒಂದು ಸಣ್ಣ ಉದಾಹರಣೆ ಕೊಡುತ್ತೇನೆ. ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರ ಇತ್ತೀಚೆಗೆ ಮೋಟಾರ್ ಡ್ರೖೆವಿಂಗ್ ಲೈಸೆನ್ಸ್ ಪಡೆಯಲು ಮರಾಠಿ ಜ್ಞಾನ ಕಡ್ಡಾಯ ಎಂಬ ನಿಯಮ ರೂಪಿಸಿ, ಜಾರಿಗೊಳಿಸಿತು. ಇದರಿಂದಾಗಿ ಇನ್ನುಮುಂದೆ ಕನಿಷ್ಠ ಪಕ್ಷ ಆಟೋ, ಟ್ಯಾಕ್ಸಿ ವಾಹನ ಚಾಲಕರು ಮರಾಠಿಗಳೇ ಆಗಿರುತ್ತಾರೆ. ಅಥವಾ ಮರಾಠಿ ಬಲ್ಲವರಾಗಿರುತ್ತಾರೆ.
ಕರ್ನಾಟಕದಲ್ಲೂ ಇಂಥ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಬಹುದು. ಸರ್ಕಾರ ವಲಸಿಗರು ಮತ್ತು ಅವರನ್ನು ಪೋಷಿಸುವ ಹಿಂದಿ ಸಾಮ್ರಾಜ್ಯಶಾಹಿಗೆ ಒಂದು ಬಗೆಯಲ್ಲಿ ಬೆದರುತ್ತದೆ. ಇಂಥ ಕ್ರಮವನ್ನೇನಾದರೂ ತೆಗೆದುಕೊಂಡರೆ ಐಟಿ ಬಿಟಿ ಕಂಪನಿಗಳ ಕನ್ನಡ ವಿರೋಧಿ ಮುಖ್ಯಸ್ಥರು ಬ್ಲ್ಯಾಕ್ವೆುೕಲ್ಗೆ ಇಳಿಯುತ್ತಾರೆ, ಸರ್ಕಾರದ ಜೊತೆ ಜಗಳಕ್ಕೆ ನಿಲ್ಲುತ್ತಾರೆ. ಅದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತದೆ. ಅಲ್ಲಿಗೆ ಕರ್ನಾಟಕ ಸರ್ಕಾರ ಈ ದೊಡ್ಡ ಲಾಬಿಗೆ ಮಣಿಯುತ್ತದೆ. ಇದು ನಿಜವಾದ ಸಮಸ್ಯೆ.
ಕರ್ನಾಟಕದ ಮೇಲೆ ನಡೆಯುತ್ತಿರುವ ವಲಸೆ ಎಂಬ ಸರ್ಜಿಕಲ್ ದಾಳಿ ಹಲವು ಪದರಗಳಲ್ಲಿ ನಡೆಯುತ್ತಿದೆ. ಊಹೆಗೂ ನಿಲುಕದ ಮಟ್ಟದಲ್ಲಿ ಈ ವಲಸೆ ಕನ್ನಡಿಗರ ಬದುಕನ್ನು ಮೂರಾಬಟ್ಟೆ ಮಾಡುತ್ತಿದೆ. ಕರ್ನಾಟಕದ ನೆಲದಲ್ಲಿ ಕನ್ನಡಿಗರೇ ಪರಕೀಯರಂತೆ ಬದುಕುವ ಸಂದರ್ಭವನ್ನು ಇದು ನಿರ್ವಿುಸುತ್ತಿದೆ.
ಡೊನಾಲ್ಡ್ ಟ್ರಂಪ್ ಯೂರೋಪಿಯನ್ ದೇಶಗಳಿಗೆ ಹೇಳಿದ ಮಾತುಗಳನ್ನು ನಮ್ಮ ರಾಜ್ಯಕ್ಕೂ ಅನ್ವಯಿಸಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ನಾವು ವಲಸಿಗರಿಗೆ ಗೇಟ್ಗಳನ್ನು ಮುಚ್ಚದೇ ಹೋದರೆ ಕರ್ನಾಟಕ ಉಳಿಯುವುದಿಲ್ಲ, ಕನ್ನಡಿಗರ ನಾಗರಿಕತೆ ಉಳಿಯುವ ಯಾವ ಅವಕಾಶವೂ ಇರುವುದಿಲ್ಲ.
-(ಲೇಖಕರು ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ)