ಕನ್ನಡದ ಖ್ಯಾತ ಸಾಹಿತಿ ಅಮರೇಶ ನುಗಡೋಣಿಗೆ ಒಲಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ! Kendra Sahitya Akademi Award

ಕನ್ನಡದ ಖ್ಯಾತ ಸಾಹಿತಿ ಅಮರೇಶ ನುಗಡೋಣಿಗೆ ಒಲಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ! Kendra Sahitya Akademi Award
ಕನ್ನಡದ ಖ್ಯಾತ ಸಾಹಿತಿ ಅಮರೇಶ ನುಗಡೋಣಿಗೆ ಒಲಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ! Kendra Sahitya Akademi Award
Published on
ನವದೆಹಲಿ: ಕನ್ನಡದ ಖ್ಯಾತ ಸಾಹಿತಿ ಅಮರೇಶ ನುಗಡೋಣಿ ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ( Kendra Sahitya Akademi Award ) ಲಭಿಸಿದೆ. ಅಮರೇಶ ಅವರು ಬರೆದ 'ದಡ ಸೇರಿಸು ತಂದೆ' ಎಂಬ ಕಥಾ ಸಂಕಲನಕ್ಕೆ ಈ ಅತ್ಯುನ್ನತ ಗೌರವ ಸಂದಿದೆ.
ಅಮರೇಶ ಅವರು ಬರೆದಿರುವ 'ದಡ ಸೇರಿಸು ತಂದೆ' ಕಥಾ ಸಂಕಲನದಲ್ಲಿ ಒಟ್ಟು ಎಂಟು ಕಥೆಗಳಿವೆ. ಎಲ್ಲ ಕತೆಗಳು ಗ್ರಾಮೀಣ ಭಾರತದ ಜ್ವಲಂತ ಸಮಸ್ಯೆಗಳಾದ ಮರ್ಯಾದಾ ಹತ್ಯೆ, ಗುಂಪು ಹಿಂಸಾಚಾರ ಮತ್ತು ಮಾನವೀಯ ಮೌಲ್ಯಗಳ ಕುಸಿತದ ಬಗ್ಗೆ ಬೆಳಕು ಚೆಲ್ಲುತ್ತವೆ. ಅವರ ಕತೆಗಳು ಓದುಗರನ್ನು ಚಿಂತನೆಗೆ ದೂಡುತ್ತದೆ. ಸಮಾಜದ ಬಲಾವಣೆಯತ್ತ ಚಿಂತಿಸಲು ಪ್ರೇರೆಪಿಸುತ್ತದೆ. ಅಂದಹಾಗೆ, ಈ ಕೃತಿಯನ್ನು ಪಲ್ಲವ ಪ್ರಕಾಶನ ಹೊರತಂದಿದ್ದು, 2020ರಲ್ಲಿ ರಾಯಚೂರಿನಲ್ಲಿ ಬಿಡುಗಡೆಯಾಯಿತು.
ಇನ್ನೂ ಅಮರೇಶ ನುಗಡೋಣಿ ಅವರ ಬಗ್ಗೆ ಹೇಳುವುದಾದರೆ, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನುಗಡೋಣಿ ಮೂಲದವರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅಮರೇಶ ಅವರು ಬರೆದ 'ಸವಾರಿ' ಕಥೆಯನ್ನು ಆಧರಿಸಿ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು 'ಕನಸೆಂಬೋ ಕುದುರೆಯನೇರಿ' ಎಂಬ ಚಲನಚಿತ್ರವನ್ನು ನಿರ್ದೇಶಿಸಿದ್ದು, ಆ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಲಭಿಸಿದೆ.

ಬಹುಮಾನ ಏನು ಸಿಗಲಿದೆ?

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು 1,00,000 (ಒಂದು ಲಕ್ಷ ರೂಪಾಯಿ) ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಮಾರ್ಚ್ 31 ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಪ್ರದಾನ ಮಾಡಲಾಗುವುದು. ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ. ಜಯಲಲಿತ ಮತ್ತು ಸಹನಾ ಕಾಂತಬೈಲು ಅವರಿದ್ದ ತಜ್ಞರ ಸಮಿತಿಯು ಈ ಕೃತಿಯನ್ನು ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗಿದ್ದ ಕನ್ನಡ ಕೃತಿಗಳು

ಈ ಬಾರಿ ಪ್ರಶಸ್ತಿಯ ರೇಸ್‌ನಲ್ಲಿ ಬರಗೂರು ರಾಮಚಂದ್ರಪ್ಪ (ಕಾಗೆ ಕರುಣ್ಯದ ಕಣ್ಣು), ಅನುಪಮಾ ಪ್ರಸಾದ್ (ಪಕ್ಕಿಹಳ್ಳದ ಹಾದಿಗುಂಟ), ಎಚ್.ಎಸ್. ರಾಘವೇಂದ್ರ ರಾವ್ (ನೀರಿಗೆ ಮೂಡಿದ ಆಕಾರ), ಮತ್ತು ಕೆ.ವೈ. ನಾರಾಯಣಸ್ವಾಮಿ ಸೇರಿದಂತೆ ಒಟ್ಟು 12 ಹಿರಿಯ ಸಾಹಿತಿಗಳ ಕೃತಿಗಳು ಅಂತಿಮ ಪಟ್ಟಿಯಲ್ಲಿದ್ದವು.

ಈ ಬಾರಿ ಎಷ್ಟು ಪ್ರಶಸ್ತಿಗಳು ಸಿಕ್ಕಿವೆ?

ಸಾಹಿತ್ಯ ಅಕಾಡೆಮಿಯು ತನ್ನಿಂದ ಗುರುತಿಸಲ್ಪಟ್ಟ 24 ಭಾರತೀಯ ಭಾಷೆಗಳಲ್ಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. 8 ಕವನ ಸಂಕಲನಗಳು, 4 ಕಾದಂಬರಿಗಳು, 6 ಸಣ್ಣಕಥೆ ಸಂಕಲನಗಳು, 2 ಪ್ರಬಂಧ ಸಂಕಲನಗಳು, 1 ಸಾಹಿತ್ಯ ವಿಮರ್ಶೆ, 1 ಆತ್ಮಕಥೆ ಮತ್ತು 2 ನೆನಪಿನ ಬುತ್ತಿ ಕೃತಿಗಳು 2025ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net