

ಬೆಂಗಳೂರು : ಸಮಾಜದಲ್ಲಿ ಇಂಗ್ಲಿಷ್ ವ್ಯಾವಹಾರಿಕ ಭಾಷೆಯಾಗಿ ಬಳಕೆಯಲ್ಲಿದ್ದು ಕನ್ನಡ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಭಾಷೆಯಾಗಬೇಕು. ಪ್ರತಿಯೊಬ್ಬ ಕನ್ನಡಿಗನಿಗೂ ತನ್ನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅಭಿಮಾನ ಹಾಗೂ ಗೌರವ ಇರಬೇಕು ಎಂದು ಸಾಹಿತಿ ಡಾ. ಗಜಾನನ ಶರ್ಮ ಹೇಳಿದರು.
ಮತ್ತಿಕೆರೆಯ ರಾಯಲ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ರಾಯಲ್ ಕನ್ನಡ ಹಬ್ಬ’ ಉದ್ಘಾಟಿಸಿ ಮಾತನಾಡಿದರು. ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ಒಂದು ನಾಡಿನ ಇತಿಹಾಸ, ಸಂಸ್ಕೃತಿ, ಜೀವನಮೌಲ್ಯ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಪ್ರಮುಖ ಅಸ್ಮಿತೆಯಾಗಿದೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಶ್ರೀಮಂತ ಸಾಹಿತ್ಯ ಪರಂಪರೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದೆ. ಇಂತಹ ಭಾಷೆಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಹೆಮ್ಮೆ ಹಾಗೂ ಅಭಿಮಾನವಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಸೃಜನ ವಿದ್ಯಾ ಸಂಸ್ಥೆಯ ಶಿಕ್ಷಕಿ ಗೀತ ಅವರಿಗೆ ‘ಗುರು ಗೌರವ ಪುರಸ್ಕಾರ’ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಂಸ್ಥೆಯ ಅಧ್ಯಕ್ಷ ಡಾ. ದೇವರಾಜ್ ಬಿ.ಕೆ., ವ್ಯವಸ್ಥಾಪಕ ನಿರ್ದೇಶಕಿ ಸುಜಾತ ದೇವರಾಜ್, ಪ್ರಾಚಾರ್ಯ ಡಾ. ಲಕ್ಷ್ಮೀಶ್ ಹೆಗಡೆ ಸೋಂದಾ ಮತ್ತಿತರರು ಉಪಸ್ಥಿತರಿದ್ದರು.