ಗ್ರಾಮೀಣ ಮೀಸಲಾತಿಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಿ

Dr Purushothama Bilimale
Dr Purushothama Bilimale
Published on

ಪ್ರಮುಖ ಮುಖ್ಯಾಂಶಗಳು

  • - ಡಾ. ಪುರುಷೋತ್ತಮ ಬಿಳಿಮಲೆ ಸರ್ಕಾರಕ್ಕೆ ಆಗ್ರಹ

ಬೆಂಗಳೂರು:

ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮೀಣ ಅಭ್ಯರ್ಥಿ ಮೀಸಲಾತಿಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ವಿಚಾರವಾಗಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಬಿಳಿಮಲೆ, 90ರ ದಶಕದಲ್ಲಿದ್ದ ಶೈಕ್ಷಣಿಕ ಪರಿಸ್ಥಿತಿಗೂ ಇಂದಿನ ವಸ್ತುಸ್ಥಿತಿಗೂ ಆಗಾಧವಾದ ಅಂತರವಿದೆ. ಸರ್ಕಾರಿ ಶಾಲೆಗಳು ಎಷ್ಟು ವೇಗವಾಗಿ ಕಣ್ಮರೆಯಾಗುತ್ತಿವೆಯೋ ಅಷ್ಟೇ ವಿಸ್ತಾರವಾಗಿ ಖಾಸಗಿ ಶಾಲೆಗಳು ಗ್ರಾಮೀಣ ಪ್ರದೇಶಗಳಲ್ಲಿ ತಲೆ ಎತ್ತುತ್ತಿವೆ. ಇದು ಮೀಸಲಾತಿಯ ಪ್ರಸ್ತುತತೆಯನ್ನೇ ಬದಲಾಯಿಸಿದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು, ಖಾಸಗಿ ಶಾಲೆಗಳು, ಕೇಂದ್ರ ಪಠ್ಯಕ್ರಮದ ಶಾಲೆಗಳು ಸೇರಿ ಹಲವು ಮಾದರಿಯ ಶಾಲೆಗಳು ಅಸ್ತಿತ್ವದಲ್ಲಿದ್ದು, ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳು ಮೂಲೆಗುಂಪಾಗುತ್ತಿವೆ. ಹಾಗಾಗಿ ಈ ಶಾಲೆಗಳಲ್ಲಿ ಕಲಿಯುವ ಮಕ್ಕಳ ಬಗ್ಗೆ ಇನ್ನಷ್ಟು ಸಹಾನುಭೂತಿಯಿಂದ ಕೆಲಸ ಮಾಡುವ ಅಗತ್ಯವಿದೆ ಎಂದಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಕಲಿಕಾ ಮಟ್ಟದ ಕುರಿತು ಅಧ್ಯಯನವನ್ನು ಕೈಗೊಂಡಿದ್ದು, ಈ ವೇಳೆ ಮಕ್ಕಳ ಆಂಗ್ಲ ಮತ್ತು ಕನ್ನಡ ಭಾಷಾ ಕಲಿಕೆಯ ಗುಣಮಟ್ಟದ ಕುರಿತಂತೆ ಆಶಾದಾಯಕವಾದ ಚಿತ್ರಣವನ್ನೇನೂ ಕಂಡು ಬಂದಿಲ್ಲ ಎಂದಿರುವ ಬಿಳಿಮಲೆ ಸದ್ಯದಲ್ಲಿಯೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗ್ರಾಮೀಣ ಅಭ್ಯರ್ಥಿ ಮೀಸಲಾತಿಯನ್ನು ವಿಶೇಷ ಒದಗಿಸಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರವು ನೀತಿ-ನಿರೂಪಣೆಗೆ ಮುಂದಾಗಬೇಕು. ಇದರಿಂದ ಕನ್ನಡ ಮಾಧ್ಯಮದ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಭರವಸೆ ತುಂಬಿದಂತಾಗುತ್ತದೆ. ಕನ್ನಡ ಭಾಷೆಯ ಪುರೋಭಿವೃದ್ಧಿಗೆ ಸರ್ಕಾರವು ಕ್ರಿಯಾಶೀಲವಾಗಿ ಸ್ಪಂದಿಸಿದಂತಾಗುತ್ತದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net