ತಿಂಥಣಿ ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ ಬ್ರಹ್ಮಲೀನ! Siddaramananda Swamiji

ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕ ಗುರುಪೀಠದ ಶ್ರೀ ಸಿದ್ದರಾಮನಂದ ಸ್ವಾಮೀಜಿ
ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕ ಗುರುಪೀಠದ ಶ್ರೀ ಸಿದ್ದರಾಮನಂದ ಸ್ವಾಮೀಜಿ
Published on

ಪ್ರಮುಖ ಮುಖ್ಯಾಂಶಗಳು

  • ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕ ಗುರುಪೀಠದ ಶ್ರೀ ಸಿದ್ದರಾಮನಂದ ಸ್ವಾಮೀಜಿ ಬ್ರಹ್ಮಲೀನ
  • ಬೆಳಗಿನ ಜಾವ 3.40ರ ಸುಮಾರಿಗೆ ಹೃದಯಾಘಾತದಿಂದ ವಿಧಿವಶ
  • ತಿಂಥಣಿಯ ಕನಕ ಗುರು ಪೀಠದಲ್ಲಿ ಹಾಲುಮತದ ಪದ್ಧತಿಯಂತೆ ನಡೆಯಲಿದೆ ಅಂತ್ಯಕ್ರಿಯೆ
ರಾಯಚೂರು: ದೇವದುರ್ಗ ತಾಲೂಕಿನ ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕ ಗುರುಪೀಠದ ಶ್ರೀ ಸಿದ್ದರಾಮನಂದ ಸ್ವಾಮೀಜಿ ( Siddaramananda Swamiji ) ಅವರು ಇಂದು (ಜ.15) ಬೆಳಗಿನ ಜಾವ ಬ್ರಹ್ಮಲೀನವಾಗಿದ್ದಾರೆ.
ತಡರಾತ್ರಿ ರಕ್ತದ ಒತ್ತಡ ಕಡಿಮೆಯಾಗಿತ್ತು. ತಕ್ಷಣ ಅವರನ್ನು ಲಿಂಗಸುಗೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ಎದೆನೋವು ಕಾಣಿಸಿಕೊಂಡು, ಬೆಳಗಿನ ಜಾವ 3.40ರ ಸುಮಾರಿಗೆ ಹೃದಯಾಘಾತದಿಂದ ಬ್ರಹ್ಮಲೀನವಾಗಿದ್ದಾರೆ. ಸಿದ್ದರಾಮನಂದ ಸ್ವಾಮೀಜಿ ಅವರಿಗೆ 49 ವರ್ಷ ವಯಸ್ಸಾಗಿತ್ತು.
ಅಂದಹಾಗೆ, ಸಿದ್ದರಾಮಾನಂದ ಸ್ವಾಮೀಜಿ ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಚಳ್ಳಕೆರೆ ತಾಲೂಕಿನ ಕಲಮರಹಳ್ಳಿಯ ಮಹದೇವಯ್ಯ ಮತ್ತು ಜಯಮ್ಮ ದಂಪತಿಯ 2ನೇ ಪುತ್ರ. ಸಿದ್ದರಾಮನಂದ ಶ್ರೀಗಳ ಮೊದಲ ಹೆಸರು ಮೋಹನ್ ಪ್ರದಾನ. ಆಧ್ಯಾತ್ಮಿಕದತ್ತ ಹೆಚ್ಚಿನ ಒಲವು ಮತ್ತು ಸದಾ ಕ್ರೀಯಾಶೀಲ ಮನೋಭಾವ ಒಂದಿದ್ದ ಶ್ರೀಗಳು 18ನೇ ವಯಸ್ಸಿಗೆ ಮನೆ ಬಿಟ್ಟು ಸಂಚಾರ ಆರಂಭಿಸಿದರು.
ಮೊದಲು ಜೈನ, ಕ್ರೈಸ್ತ, ಬ್ರಹ್ಮಕುಮಾರಿ ಪಂಥಗಳ ಪ್ರಭಾವಕ್ಕೆ ಒಳಗಾಗಿದ್ದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಚಳ್ಳಕೆರೆ ತಾಲೂಕಿನಲ್ಲಿ ಮುಗಿಸಿದರು. ನಂತರ ಹಿಮಾಲಯದಲ್ಲಿ ಪಾಂಡಿತ್ಯ ಅಧ್ಯಯನ ಮುಗಿಸಿದರು. ಚಿತ್ರದುರ್ಗದ ಶ್ರೀ ಮುರುಗಾ ಮಠದಲ್ಲಿ ಅಧ್ಯಯನ ಮತ್ತು ಸೇವೆ ಸಲ್ಲಿಸಿದ್ದಾರೆ. ಶರಣ ಸಾಹಿತ್ಯದ ಜೊತೆಗೆ ಎಲ್ಲಾ ಧರ್ಮಗಳ ಅಧ್ಯಯನ ಮಾಡಿದ ಶ್ರೀಗಳು, ಮೊಟ್ಟಮೊದಲು ಸಿಂಧನೂರಿನಲ್ಲಿ ಕನಕಪೀಠ ಆರಂಭಿಸಿ, ನಾಲ್ಕು ವರ್ಷಗಳ ನಂತರ 2011ರಲ್ಲಿ ರಾಯಚೂರು ಜಿಲ್ಲೆ, ದೇವದುರ್ಗ ತಾಲೂಕಿನ ತಿಂಥಣಿ ಬ್ರಿಜ್​ನಲ್ಲಿ ಕನಕಗುರು ಪೀಠಕ್ಕೆ ಆಗಮಿಸಿ, ದಟ್ಟ ಬೆಟ್ಟದಲ್ಲಿ ಇಚ್ಚೆಯಂತೆ ಪೀಠ ಸ್ಥಾಪನೆ ಮಾಡಿದರು.

ಶ್ರೀಗಳ ವಿಶೇಷ ಸಾಧನೆಗಳು

* ತಿಂಥಣಿ ಬ್ರಿಜ್​ನಲ್ಲಿ ಕಲಬುರಗಿ ವಿಭಾಗದ ಕನಕ ಗುರು ಪೀಠ ಶುರು
* ಪ್ರತಿ ವರ್ಷ ಜನವರಿ 12,13,14 ಹಾಲುಮತ ಸಂಸ್ಕೃತಿ ವೈಭವ ಆಚರಣೆ
* ಈ ವೈಭವ ಕಾರ್ಯಕ್ರಮಕ್ಕೆ ಸಿಎಂ ಸೇರಿದಂತೆ ರಾಜ್ಯದ ಬಹುತೇಕ ಗಣ್ಯರು ಆಗಮನ
* ಕನಕ ಪೀಠದಲ್ಲಿ ಪ್ರಾಥಮಿಕ ಶಾಲೆಯಿಂದ ಪಿಯುವರೆಗೂ ಶಿಕ್ಷಣ ಶುರು ಮಾಡಿದ ಸ್ವಾಮೀಜಿ
* ಶಾಲಾ ಮಕ್ಕಳಿಗೆ ಉಚಿತ ದಾಸೋಹದ ವ್ಯವಸ್ಥೆ ಮಾಡಿದ ಶ್ರೀಗಳು
* ಬಾಗಲಕೋಟೆ ಜಿಲ್ಲೆಯ ಗುಡೂರಿನಲ್ಲಿ ಪದವಿ ಕಾಲೇಜು
* ಮುದ್ದೇಬಿಹಾಳದಲ್ಲಿ ಪದವಿ ಕಾಲೇಜು
* ಕೊಪ್ಪಳ ಜಿಲ್ಲೆಯ ಹಾಲವರ್ತಿ ಹಾಗೂ ಕುಷ್ಟಗಿ ತಾಲೂಕಿನ ಬಾದಿಮನಾಳದಲ್ಲಿ ಶಾಖಾಮಠ ಸ್ಥಾಪನೆ
* ಕನಕಗುರು ಪೀಠದಲ್ಲಿ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ರಕ್ತದಾನ ಆಯೋಜನೆ
* ಪ್ರತಿ ವರ್ಷ ಸಾಹಿತ್ಯ, ಸಮಾಜಸೇವೆ ಮಾಡಿದ ಗಣ್ಯರಿಗೆ ಭಾಸ್ಕರ, ಕನಕರತ್ನ, ಸಿದ್ಧಶ್ರೀ ಪ್ರಶಸ್ತಿ ನೀಡಿ ಗೌರವ
ಇದೇ ಜನವರಿ 12,13 ಹಾಗೂ 14ನೇ ತಾರೀಖಿನಂದು ಮೂರು ದಿನಗಳ ಕಾಲ ಹಾಲುಮತ ಸಾಹಿತ್ಯ ಸಮ್ಮೇಳನ ಹೆಸರಿನಲ್ಲಿ ವಿಭಿನ್ನ ಹಾಗೂ ವಿಶಿಷ್ಠ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು. ಈ ಕಾರ್ಯಕ್ರಮದ ಮೂಲಕ ನಾಡಿನಾ ಅನೇಕ ಬುಡಕಟ್ಟು ಸಮುದಾಯಗಳನ್ನು ವೇದಿಕೆಗೆ ಕರೆ ತಂದಿದ್ದರು.
ಸಿದ್ದರಾಮನಂದ ಸ್ವಾಮೀಜಿ ಅವರ ಅಂತ್ಯಕ್ರಿಯೆ ಇಂದು ತಿಂಥಣಿಯ ಕನಕ ಗುರು ಪೀಠದಲ್ಲಿ ಹಾಲುಮತದ ಪದ್ಧತಿಯಂತೆ ನಡೆಯಲಿದ್ದು, ಅನೇಕ ಗಣ್ಯರು ಬರುವ ಸಾಧ್ಯತೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net