

ಎಚ್.ಡಿ.ಕೋಟೆ:
ಕೇರಳದ ವಯನಾಡ್ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಭರ್ಜರಿ ಮಳೆ ಸುರಿಯುತ್ತಿದೆ. ಇದರಿಂದ ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಲಾಶಯದ ಭದ್ರತಾ ದೃಷ್ಟಿಯಿಂದ ಅಷ್ಟೂ ನೀರನ್ನು ನದಿಗೆ ಹರಿಸಲಾಗಿದೆ.
ಜಲಾಶಯಕ್ಕೆ 27,290 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ ಹಾಗೂ ಸುಭಾಷ್ ಪವರ್ ಸ್ಟೇಷನ್ ಮೂಲಕ ಅಷ್ಟೂ ನೀರನ್ನು ನದಿಗೆ ಹರಿಸಲಾಗುತ್ತಿದೆ.
ನದಿಗೆ ಅಪಾರ ನೀರು ಹರಿದುಹೋಗುತ್ತಿರುವ ಪರಿಣಾಮ ಜಲಾಶಯದ ಮುಂಭಾಗದ ಸೇತುವೆ ಸಂಪೂರ್ಣ ಮುಳುಗಿದ್ದು, ಹ್ಯಾಂಡ್ ಪೋಸ್ಟ್, ಎನ್. ಬೇಗೂರು ಮುಖ್ಯರಸ್ತೆ ಸಂಪರ್ಕ ಕಡಿತವಾಗಿರುವ ಹಿನ್ನೆಲೆಯಲ್ಲಿ ಬಿದರಹಳ್ಳಿ, ಹೊಸ ಬಿದರಹಳ್ಳಿ, ತೆರಣಿಮುಂಟಿ, ಮೊಸರಹಳ್ಳ, ಬಸಾಪುರ, ಕಾಳೇನಹಳ್ಳಿ, ಮೂರ್ ಬಾಂದ್, ಶ್ರೀ ಕ್ಷೇತ್ರ ಮಾದೇಶ್ವರ ಸನ್ನಿಧಿ ಇರುವ ಗ್ರಾಮವಾದ ಭೀಮನ ಕೊಲ್ಲಿ, ಕೆಂಚನಹಳ್ಳಿ, ಎನ್.ಬೇಗೂರು, ಬೀರಂಬಳ್ಳಿ ಗೆಂಡತ್ತೂರು, ಇನ್ನು ಹಲವಾರು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿರುವ ಹಿನ್ನೆಲೆಯಲ್ಲಿ, ಈ ಭಾಗದ ಜನರು ಸರಗೂರು ಮಾರ್ಗವಾಗಿ ಸಂಚರಿಸಲು ತಾಲೂಕು ಆಡಳಿತ ಮನವಿ ಮಾಡಿದೆ. ನದಿ ಪಾತ್ರದಲ್ಲಿ ಇರುವವರು ಎಚ್ಚರಿಕೆ ವಹಿಸಬೇಕು ಎಂದು ನೀರಾವರಿ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.