

ದೊಡ್ಡಬಳ್ಳಾಪುರ :
ತಾಲೂಕಿನ ಸಾಸಲು ಗ್ರಾಮ ಪಂಚಾಯಿತಿಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಯಡಿ ಜಾಬ್ ಕಾರ್ಡ್ ಮೇಳವನ್ನು ಹಮ್ಮಿಕೊಳ್ಳಲಾಯಿತು.
ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಶಿವಪ್ಪ ಮಾತನಾಡಿ, ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಮತ್ತು ಜೀವನೋಪಾಯದ ಭದ್ರತೆ ಒದಗಿಸುವ ಉದ್ದೇಶದಿಂದ ಯೋಜನೆಯನ್ನು ಅನುಷ್ಠ್ಠಾನಗೊಳಿಸಲಾಗುತ್ತಿದೆ. ಅರ್ಹ ಕುಟುಂಬಗಳು ಜಾಬ್ ಕಾರ್ಡ್ ಪಡೆದು ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು. ಜಾಬ್ ಕಾರ್ಡ್ ಇಲ್ಲದವರು ಮಾತ್ರ ಹೊಸ ಜಾಬ್ ಕಾರ್ಡ್ಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ ಅವರು, ವೈಯಕ್ತಿಕ ಕಾಮಗಾರಿಗಳ ಮಾಹಿತಿ ಹಾಗೂ ಉದ್ಯೋಗಕ್ಕಾಗಿ ಕೆಲಸದ ಬೇಡಿಕೆ ಸಲ್ಲಿಸುವ ಕುರಿತು ಮಾಹಿತಿ ನೀಡಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಕರಪತ್ರ ವಿತರಿಸುವ ಮೂಲಕ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಮೇಳದಲ್ಲಿ ಹೊಸ ಜಾಬ್ ಕಾರ್ಡ್ಗಳಿಗೆ ಅರ್ಜಿ ಸ್ವೀಕರಿಸುವುದರ ಜತೆಗೆ ವೈಯಕ್ತಿಕ ಕಾಮಗಾರಿ ಹಾಗೂ ಕೆಲಸದ ಬೇಡಿಕೆ ಸ್ವೀಕರಿಸಲಾಯಿತು.
ವಿಬಿ ಜಿ ರಾಮ್ ಜಿ ಯೋಜನೆಯಡಿ ಯಾವುದೇ ಅರ್ಹ ಗ್ರಾಮೀಣ ಕುಟುಂಬ ಜಾಬ್ ಕಾರ್ಡ್ನಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಒಂದು ತಿಂಗಳು ವಿಶೇಷ ಮನೆಮನೆ ಭೇಟಿ ಹಾಗೂ ಬೇಡಿಕೆ ಸ್ವೀಕಾರ ಅಭಿಯಾನ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಅರ್ಹ ಕುಟುಂಬಗಳನ್ನು ಗುರುತಿಸಿ, ಹೊಸ ಜಾಬ್ ಕಾರ್ಡ್, ಕುಟುಂಬದ ಸದಸ್ಯರ ಸೇರ್ಪಡೆ, ತಿದ್ದುಪಡಿ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಬೇಡಿಕೆ ಸ್ವೀಕರಿಸಲಾಗುವುದು ಎಂದು ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಇಒ ಮಂಜುನಾಥ ಹರ್ತಿ ತಿಳಿಸಿದರು.