ಕಿತ್ತೂರು ಕರ್ನಾಟಕ ಭಾಗದಲ್ಲಿ ಜೆಡಿಎಸ್ ರಣಕಹಳೆ, ಬೆಳ್ಳಿ ಮಹೋತ್ಸವದಲ್ಲಿ ದೇವೇಗೌಡರ ಗುಡುಗು, ಕುಮಾರಸ್ವಾಮಿ ಸಿಎಂ ಆಗೋದು ಮೋದಿ-ಷಾ ಕೈಯಲಿದೆ

ವಿಜಯಪುರ ನಗರದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಬೆಳ್ಳಿ ಮಹೋತ್ಸವದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮಾತನಾಡಿದರು.
ವಿಜಯಪುರ ನಗರದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಬೆಳ್ಳಿ ಮಹೋತ್ಸವದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್ ಬೆಳ್ಳಿ ಮಹೋತ್ಸವದ ಸಂಭ್ರಮ
  • ಕಿತ್ತೂರು ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ
  • ಕಾಂಗ್ರೆಸ್ ಸರ್ಕಾರದ ವಿರುದ್ಧ ಕಟು ಟೀಕೆ
  • ಪ್ರಾದೇಶಿಕ ಪಕ್ಷ ಉಳಿಸಿ-ಬೆಳೆಸಲು ಮನವಿ
ವಿಜಯಪುರ: ‘ನನ್ನ ರಾಜಕೀಯ ಜೀವನದಲ್ಲಿ ಇಂಥ ಕೆಟ್ಟ ಆಡಳಿತ ಕೊಟ್ಟ ಸರ್ಕಾರ ನೋಡಿಲ್ಲ. ಈ ಶರೀರದಿಂದ ಆತ್ಮ ಹೊರಹೋಗುವ ಮುನ್ನ ರಾಜ್ಯದಲ್ಲಿ ಯೋಗ್ಯ ಆಡಳಿತ ಕೊಡುವ ಸನ್ನಿವೇಶ ಬರುತ್ತದೆ, ಕುಮಾರಸ್ವಾಮಿ ಸಿಎಂ ಆಗೋದು ನನ್ನ ಕೈಯಲ್ಲಿಲ್ಲ; ಮೋದಿ ಮತ್ತು ಅಮಿತ್ ಷಾ ಅವರ ಕೈಯಲ್ಲಿದೆ, ಎನ್‌ಡಿಎ ಗಟ್ಟಿಗೊಳಿಸುವ ವಿಶ್ವಾಸ ಮೋದಿ ಮತ್ತು ಅಮಿತ್ ಷಾ ಅವರ ಮೇಲಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮಾರ್ಮಿಕವಾಗಿ ನುಡಿದರು.
ಜೆಡಿಎಸ್ ಬೆಳ್ಳಿ ಮಹೋತ್ಸವದಂಗವಾಗಿ ವಿಜಯಪುರ ನಗರದ ಸಿಂದಗಿ ರಸ್ತೆಯಲ್ಲಿರುವ ಮೈದಾನವೊಂದರಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಿತ್ತೂರು ಕರ್ನಾಟಕದ ಬೃಹತ್ ಸಮಾವೇಶದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
‘ಎನ್‌ಡಿಎ ಮೈತ್ರಿಕೂಟಕ್ಕೆ ನಮ್ಮ ಶಕ್ತಿ ಏನೆಂಬುದು ಗೊತ್ತಿದೆ, ಎನ್‌ಡಿಎ ಮೈತ್ರಿ ಕೂಟಕ್ಕೆ ನಾವೇನು ಎಂಬುದು ಗೊತ್ತಿದೆ, ನಾವು ಕೊಡುವ ಶಕ್ತಿ ತೆಗೆದುಕೊಳ್ಳುವ ಜಾಣ್ಮೆ ಅಮಿತ್ ಷಾ ಹಾಗೂ ಮೋದಿ ಅವರಿದೆ. ಮತ್ತೆ ನಾವು ಬರುತ್ತೇವೆ. ನಾನು ಹೋಗುವ ಮುನ್ನ ಈ ರಾಜ್ಯದಲ್ಲಿ ಯೋಗ್ಯ ಆಡಳಿತ ಕೊಡುವ ಸನ್ನಿವೇಶ ಬರಲಿದ್ದು, ಅದನ್ನು ಮೋದಿ ಗುರುತಿಸುತ್ತಾರೆ. ನನಗೆ ವಿಶ್ವಾಸ ಇದೆ’ ಎಂದರು.

ದೇವೇಗೌಡರಿಗೆ ಜಾತಿ ಇಲ್ಲ:

‘ದೇವೇಗೌಡರಿಗೆ ಜಾತಿ ಇಲ್ಲ, ಈ ಹಿಂದೆ ಮುಸಲ್ಮಾನ್ ಬಂಧುಗಳಿಗೆ ಶೇ.40 ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಿದೆ, ಗಾಣಿಗ ಸಮುದಾಯದ ಮುಖಂಡರೊಬ್ಬರು ಬಹಿರಂಗ ಸಮಾವೇಶದಲ್ಲಿ ನಮ್ಮ ಸಮಾಜಕ್ಕೆ ಏನು ಮಾಡಿದ್ದೀರಿ ಎಂದು ಎದ್ದು ನಿಂತು ಕೇಳಿದಾಗ ಆತನನ್ನು ಕರೆದೊಯ್ದು ಎಂಎಲ್‌ಸಿ ಮಾಡಿದೆ, ಲಿಂಗಾಯತ-ಒಕ್ಕಲಿಗ ತಿಕ್ಕಾಟದ ಮಧ್ಯೆ ನಾನೇನು ಮಾಡಿದ್ದೇನೆಂದು ಎಸ್.ಎಂ. ಜಾಮದಾರ ಅವರು ತಮ್ಮ ನೇಗಿಲ ಗೆರೆಗಳು ಪುಸ್ತಕದಲ್ಲಿ ಬರೆದಿದ್ದು ಅದನ್ನೊಮ್ಮೆ ಎಲ್ಲರೂ ಓದಬೇಕು. ಈ ಜಾಮದಾರ ಯಾರು? ಲಿಂಗಾಯತರಲ್ಲವೇ? ಹಿಂದೆ ಇದೇ ಜಾಮದಾರ ಅವರ ಮೂಲಕ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಯೋಜನೆ ಕೈಗೆತ್ತಿಕೊಂಡಿದ್ದು, ಅದೆಲ್ಲವನ್ನೂ ಜಾಮದಾರ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ, ಅದನ್ನೊಮ್ಮೆ ಓದಿಕೊಳ್ಳಿ’ ಎಂದರು.

ಗ್ಯಾರಂಟಿಗಳ ಟೀಕೆ

‘ಗ್ಯಾರಂಟಿ...ಗ್ಯಾರಂಟಿ...ಗ್ಯಾರಂಟಿ’ ಎನ್ನುತ್ತ ದವಡೆ ಕಚ್ಚಿದ ದೇವೇಗೌಡರು, ನಮ್ಮ ಆಡಳಿತದಲ್ಲಿ ಜನ ಕೈ ಚಾಚುವಂತೆ ಮಾಡಲಿಲ್ಲ, ಬದಲಾಗಿ ಅವರ ಕೈ ಶಾಶ್ವತವಾಗಿ ಬಲಪಡಿಸುವ ಕೆಲಸ ಮಾಡಿದೆವು. ರೈತರ ಸಾಲ ಮನ್ನಾ ಮಾಡಲಾಯಿತು. ಇಂದು ಯುವಕರು ಉದ್ಯೋಗವಕಾಶಗಳಿಗಾಗಿ ಬೀದಿಗಿಳಿದು ಹೋರಾಡುತ್ತಿದ್ದಾರೆ. ಈ ಹಿಂದೆ ನಾನು ಎರಡು ಲಕ್ಷ ಉದ್ಯೋಗಗಳನ್ನು ಸಂದರ್ಶನವಿಲ್ಲದೇ ನೀಡಲಾಗಿತ್ತು. ಸಿದ್ದರಾಮಯ್ಯ ಹಣಕಾಸು ಸಚಿವನಾಗಿದ್ದಾಗ ತಲೆ ಕೆಡಿಸಿಕೊಳ್ಳದೇ ನೀರಾವರಿಗೆ ಪಬ್ಲಿಕ್ ಬಾಂಡ್‌ಗಳ ಮೂಲಕ ಅನುದಾನ ನೀಡಿದೆ. ನಾನು ಮತ್ತು ನನ್ನ ಹೆಂಡತಿ ಖುದ್ದಾಗಿ ಎರಡು ಲಕ್ಷ ಬಾಂಡ್ ಖರೀದಿಸುವ ಮೂಲಕ ಜನರಿಗೆ ಪ್ರೇರೇಪಿಸಲಾಯಿತು. ಪರಿಣಾಮ 650 ಕೋಟಿ ರೂಪಾಯಿ ಬಂತು. ಈ ರೀತಿ ಆರ್ಥಿಕತೆ ಸುಧಾರಿಸಿದ್ದಾಗಿ ದೇವೇಗೌಡರು ನೆನಪಿಸಿಕೊಂಡರು.

ಸಾಲದ ಸುಳಿಯಲ್ಲಿ ಕರ್ನಾಟಕ

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್ ಸಾಲದ ಹೊರೆ ಹೊರೆಸುತ್ತಿದೆ. ಈ ಹಿಂದೆ 7.5 ಲಕ್ಷ ಕೋಟಿಗೂ ಅಧಿಕ ಸಾಲ ಮಾಡಿದ್ದು ಇದೀಗ ಬಜೆಟ್‌ಗೂ ಮುನ್ನ ಲಕ್ಷ ಕೋಟಿಗೂ ಅಧಿಕ ಸಾಲ ಮಾಡಲು ಹೊರಟಿದೆ. ಈ ಸಾಲ ಯಾವ ಪಕ್ಷವೂ ತೀರಿಸಲ್ಲ; ಜನರೇ ತೀರಿಸಬೇಕು. ಯುವಕರಿಗೆ ಉದ್ಯೋಗವಕಾಶ ಇಲ್ಲ, ವಿದ್ಯುತ್ ದರ ಏರಿಕೆ ಮಾಡುತ್ತಿದೆ, ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಭಾರವಾಗಿವೆ, ಸ್ಥಿತಿವಂತರು ಗ್ಯಾರಂಟಿ ಬೇಡ ಎಂದು ಬರೆದುಕೊಡು ಎಂದು ಹೇಳಲು ಸರ್ಕಾರ ಈಗ ಮುಂದಾಗಿದೆ, 2 ಸಾವಿರ ರೂ. ನೀಡಲು ಹಲವಾರು ರೀತಿಯ ತೆರಿಗೆ ಹೊರೆ ಹೊರೆಸಿದ ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಬದುಕನ್ನು ಬೀದಿಗೆ ತಂದಿದೆ, ಈ ರೀತಿ ಹಣ ಕಿತ್ತುಕೊಂಡು 2 ಸಾವಿರ ಕೋಡುವುದೇ ಆಗಿದ್ದಾರೆ ನಾನು ತಿಂಗಳಿಗೆ 5 ಸಾವಿರ ರೂಪಾಯಿ ಕೊಡುತ್ತಿದ್ದೆ ಎಂದರು.
ಪ್ರೊ.ಗೋವಿಂದರಾವ ವರದಿ ಸಹ ಉ.ಕ. ಜಿಲ್ಲೆಗಳು ತೀರಾ ಹಿಂದುಳಿದಿವೆ ಎಂದಿದೆ. ಹಾಗಾದರೆ ಆಳ್ವಿಕೆ ಮಾಡಿರುವ ಸರ್ಕಾರ ಈವರೆಗೆ ಮಾಡಿದ್ದೇನು? ಯಾದಗಿರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾಜುನ ಖರ್ಗೆ ಅವರು ಮೈಸೂರು, ಕನಕಪುರದಂತೆ ಈ ಭಾಗವನ್ನು ಅಭಿವೃದ್ದಿಪಡಿಸಿ ಎಂದು ಹೇಳಿದ್ದಾರೆ, ಆದರೆ ಖರ್ಗೆ ಅವರು ಮತ್ತು ಈಗ ಅವರ ಮಗ ಅಧಿಕಾರದಲ್ಲಿಯೇ ಇದ್ದಾರೆ, ಉತ್ತರ ಕರ್ನಾಟಕದ ಪ್ರಗತಿಗೆ ಏಕೆ ಆದ್ಯತೆ ನೀಡಲಿಲ್ಲ? ಎಂದ ಕುಮಾರಸ್ವಾಮಿ ಅವರು, ನನ್ನ ಅವಧಿಯಲ್ಲಿ ಯಾವೊಬ್ಬ ಗುತ್ತಿಗೆದಾರರು ಕುಮಾರಸ್ವಾಮಿ ಅವರಿಗೆ ಕಮೀಷನ್ ಕೊಟ್ಟಿದ್ದೇವೆ ಎಂದು ಹೇಳಲಿಲ್ಲ, ತಿಂಗಳಿಗೊಮ್ಮೆ ಪಾರದರ್ಶಕವಾಗಿ ಗುತ್ತಿಗೆದಾರರಿಗೆ ಚೆಕ್ ಮೂಲಕ ಹಣ ನೀಡಲಾಗುತ್ತಿತ್ತು ಎಂದ ಕುಮಾರಸ್ವಾಮಿ, ಜಾತಿ ಹೆಸರಿನಲ್ಲಿ ಮತ ಬೇಡ, ಪ್ರಾಮಾಣಿಕರಿಗೆ ಮತ ಕೊಡಿ, ಇಲ್ಲವೇ ಕರ್ನಾಟಕವನ್ನು ಈ ಕಾಂಗ್ರೆಸ್ ಸಂಪೂರ್ಣ ನಾಶ ಮಾಡುವ ದಿನ ದೂರವಿಲ್ಲ ಎಂದರು.

ಅಪಪ್ರಚಾರಕ್ಕೆ ಕಿವಿಗೊಡಬೇಡಿ

ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ರಾಜಕೀಯವಾಗಿ ಜೆಡಿಎಸ್ ಕೇವಲ ಹಳೆಯ ಮೈಸೂರು ಭಾಗದಲ್ಲಿ ಮಾತ್ರ ಇದೆ, ಕೇವಲ ಒಂದು ಜಾತಿಗೆ ಸೀಮಿತ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಒಂದ್ಸಲ ನೋಡಿ, ಇಲ್ಲಿ ಎಲ್ಲ ಸಮುದಾಯದವರಿಗೂ ಆದ್ಯತೆ ನೀಡಲಾಗಿದೆ ಎಂದರು.
ಯುದ್ದದಲ್ಲಿ ಸೈನಿಕರು ಎಷ್ಟು ಜನ ಎಂಬುದು ಮುಖ್ಯ ಅಲ್ಲ ಸೈನ್ಯಾಧಿಕಾರಿ ಬಳಿ ಇರುವ ಧೈರ್ಯ ಎಂಥದ್ದು ಎಂಬುದು ಮುಖ್ಯ. ಮಾರ್ಗದರ್ಶನ ಮುಖ್ಯ. ದೇವೇಗೌಡರ ಮಾರ್ಗದರ್ಶನ ಹಾಗೂ ಕುಮಾರಣ್ಣನ ನಾಯಕತ್ವದಲ್ಲಿ ಮತ್ತೆ ಪಕ್ಷ ಬಲಡಿಸೋಣ ಎಂದರು.
ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ, ಮಾಜಿ ಶಾಸಕ ದೇವಾನಂದ ಚವಾಣ್, ಬಿ.ಡಿ. ಪಾಟೀಲ, ಅಪ್ಪುಗೌಡ ಪಾಟೀಲ ಮನಗೂಳಿ, ಸುರೇಶ ಬಾಬು, ಶರಣಗೌಡ ಕಂದಕೂರ, ಮಾಜಿ ಸಚಿವರಾದ ಬಂಡೆಪ್ಪ ಕಾಶಂಪೂರ, ಆಲ್ಕೋಡ ಹನುಮಂತಪ್ಪ, ವೆಂಕಟರಾವ ನಾಡಗೌಡ, ಮಾಜಿ ಶಾಸಕ ಬಿ.ಜಿ. ಪಾಟೀಲ ಹಲಸಂಗಿ, ಮುಖಂಡರಾದ ನಾನಾಗೌಡ ಬಿರಾದಾರ, ಬಸವರಾಜ ಹೊನವಾಡ, ಬಸನಗೌಡ ಮಾಡಗಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net