ಬೆಂಗಳೂರು: ( jaggesh) ಕನ್ನಡ ಚಿತ್ರರಂಗವನ್ನು ಪೈರಸಿ ಎಂಬ ಪೆಡಂಭೂತ ಹಂತ ಹಂತವಾಗಿ ಕೊಲ್ಲುತ್ತಿದೆ. ಈ ಬಗ್ಗೆ ಸದಾ ಧ್ವನಿ ಎತ್ತುವ ನಟ ಜಗ್ಗೇಶ್, ಇದೀಗ ಪೈರಸಿ ಕಿಡಿಗೇಡಿಗಳ ವಿರುದ್ಧ ಅಖಾಡಕ್ಕಿಳಿದಿದ್ದಾರೆ.
ನಂದಿನಿ ಲೇಔಟ್ ಪೊಲೀಸ್ ಠಾಣೆಯಿಂದಲೇ ಫೇಸ್‌ಬುಕ್ ಲೈವ್ ಬಂದ ಜಗ್ಗೇಶ್, ಪೈರಸಿ ಮಾಡುವವರನ್ನು ಕಟುವಾದ ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿದ್ದಾರೆ.
ಫೇಸ್‌ಬುಕ್ ಲೈವ್ ಬಂದ ಜಗ್ಗೇಶ್, ಕನ್ನಡ ಸಿನಿಮಾಗಳಿಗೆ ಆಗುತ್ತಿರುವ ಅನ್ಯಾಯಗಳ ಕುರಿತಾಗಿ ನಾನು ಹಲವು ಭಾರಿ ಧ್ವನಿ ಎತ್ತಿದ್ದೇನೆ. ಭಾರತೀಯ ಚಿತ್ರರಂದಲ್ಲಿ ಒಳ್ಳೆಯ ಚಿತ್ರ ಮಾಡಿದ್ರೆ ಜನ ಬಂದು ನೋಡ್ತಾರೆ. ಆದರೆ ಸಿನಿಮಾ ತೆರೆ ಕಾಣುತ್ತಿದ್ದಂತೆ ಲೀಕ್ ಆಗುತ್ತದೆ. ಎಲ್ಲಾ ಮೊಬೈಲ್ಗೆ ಬಂದಿರುತ್ತದೆ. ಇದ ದೊಡ್ಡ ಕ್ರೈಂ ಆಗಿದೆ ಎಂದಿದ್ದಾರೆ.
ನಮ್ಮ ಕಾನೂನಿನಲ್ಲಿ ಕೊಲೆ, ಸುಲಿಗೆ, ದರೋಡೆ ಮಾಡಿದರೆ ಹೇಗೆ ಕಠಿಣ ಶಿಕ್ಷೆ ಇದೆಯೋ, ಸಿನಿಮಾ ಪೈರಸಿ ಮಾಡುವುದು ಕೂಡ ಅಷ್ಟೇ ದೊಡ್ಡ ಅಪರಾಧ. ಸಿನಿಮಾ ಪೈರಸಿ ಮಾಡೊದು ಕೊಲೆಗೆ ಸಮಾನ ನಿರ್ಮಾಪಕನ ಕೊಂದಂತೆ. ಪೈರಸಿ ಮಾಡೋದು ದರೋಡೆ ಮಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳನ್ನು ಪೈರಸಿ ಮಾಡಿದ್ದ ಕಿಡಿಗೇಡಿಯನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಅಚ್ಚರಿಯ ವಿಷಯವೆಂದರೆ ಈತ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಈತನ ಬ್ಯಾಂಕ್ ಖಾತೆಯಲ್ಲಿ ಪೈರಸಿಯಿಂದ ಗಳಿಸಿದ 1 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.
ನಮ್ಮ ಸಿನಿಮಾಗಳಿಗೆ ಹೊರಗಿನವರಿಂದ ತೊಂದರೆಯಾಗುತ್ತಿಲ್ಲ. ಪೈರಸಿ ಮಾಡುತ್ತಿರುವವರು ನಮ್ಮ ಕರ್ನಾಟಕದವರೇ ಆಗಿದ್ದಾರೆ ಎಂಬುದು ದುರದೃಷ್ಟಕರ ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದರು.
ಇವತ್ತು ಒಂದು ಸಿನಿಮಾ ಮಾಡಲು ಕನಿಷ್ಠ 5 ರಿಂದ 10 ಕೋಟಿ ರೂಪಾಯಿ ಬೇಕು. ರಾಕ್‌ಲೈನ್ ವೆಂಕಟೇಶ್ ಅವರಂತಹ ದೊಡ್ಡ ನಿರ್ಮಾಪಕರೇ 'ಸಿನಿಮಾ ಮಾಡದೆ ಸುಮ್ಮನಿರುವುದೇ ಲಾಭ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪೈರಸಿ ಪಿಡುಗು ನಿಲ್ಲುವವರೆಗೂ ನಾನು ಸಿನಿಮಾ ಮಾಡಲ್ಲ ಎಂದು ನಿರ್ಧರಿಸಿದ್ದೇನೆ ಎಂದು ಜಗ್ಗೇಶ್ ಅಸಮಾಧಾನ ಹೊರಹಾಕಿದರು.