ದಸರಾ ಬಳಿಕ ಕಬ್ಬು ಬೆಳೆಗಾರರಿಗೆ ಬೆಲ್ಲ: ರೈತರಿಗೆ ಸಿಎಂ ಡಿ.ಕೆ. ಶಿವಕುಮಾರ್​ ಭರವಸೆ

ಬೆಳಗಾವಿ: ಕಬ್ಬು ಬೆಳೆಗಾರರು ಬದುಕುಳಿಯಬೇಕು, ಅದೇ ರೀತಿ ಸಕ್ಕರೆ ಕಾರ್ಖಾನೆಗಳೂ ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ದಸರಾ ಹಬ್ಬದ ಬಳಿಕ ಕಾರ್ಖಾನೆಗಳ ಮಾಲೀಕರು, ರೈತರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಭರವಸೆ ನೀಡಿದ್ದಾರೆ.
ಚನ್ನಮ್ಮನ ಕಿತ್ತೂರಿನಲ್ಲಿ ಶನಿವಾರ ಕಬ್ಬು ಬೆಳೆಗಾರರನ್ನು ಉದ್ದೇಶಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಮಾತನಾಡಿದರು.
ಚನ್ನಮ್ಮನ ಕಿತ್ತೂರಿನಲ್ಲಿ ಶನಿವಾರ ಕಬ್ಬು ಬೆಳೆಗಾರರನ್ನು ಉದ್ದೇಶಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಮಾತನಾಡಿದರು.
Published on: 

ಬೆಳಗಾವಿ: ಕಬ್ಬು ಬೆಳೆಗಾರರು ಬದುಕುಳಿಯಬೇಕು, ಅದೇ ರೀತಿ ಸಕ್ಕರೆ ಕಾರ್ಖಾನೆಗಳೂ ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ದಸರಾ ಹಬ್ಬದ ಬಳಿಕ ಕಾರ್ಖಾನೆಗಳ ಮಾಲೀಕರು, ರೈತರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಭರವಸೆ ನೀಡಿದ್ದಾರೆ.

ಕಿತ್ತೂರಿನ ರಾಣಿ ಚನ್ನಮ್ಮ ವೃತ್ತದಲ್ಲಿ ಶನಿವಾರ "ಹುಬ್ಬಳ್ಳಿ ಚಲೋ' ಪಾದಯಾತ್ರೆ ನಡೆಸುತ್ತಿರುವ ರೈತರನ್ನುದ್ದೇಶಿಸಿ ಮಾತನಾಡಿದರು. ಕಬ್ಬು ಬೆಳೆಗಾರರ ಸಮಸ್ಯೆ ರಾಜ್ಯಕ್ಕಷ್ಟೇ ಸೀಮಿತವಾಗಿಲ್ಲ. ಕೇಂದ್ರ ಸರ್ಕಾರವೂ ಸಮಿತಿ ರಚಿಸಿ ವಿವಿಧ ರಾಜ್ಯಗಳೊಂದಿಗೆ ಚರ್ಚೆ ನಡೆಸುತ್ತಿದೆ. ರೈತರ ಬೇಡಿಕೆಗಳ ಈಡೇರಿಕೆಗೆ ನಮ್ಮ ಕಡೆಯಿಂದಲೂ ಒತ್ತಡ ಹೇರಲಾಗುತ್ತಿದೆ. ಈ ಹಿಂದೆ ನಮ್ಮ ಸರ್ಕಾರದ ಪ್ರತಿನಿಧಿಗಳನ್ನು ಕಳುಹಿಸಿ ಮಾತುಕತೆ ನಡೆಸಿದ್ದೇವೆ. ನಾನೂ ರೈತರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ತಿಳಿದುಕೊಂಡಿದ್ದೇನೆ. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾದ ಸಮಸ್ಯೆಯಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವಿವಿಧ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ರೈತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸುತ್ತಿದ್ದೇವೆ ಎಂದರು.

ಚನ್ನಮ್ಮನ ಕಿತ್ತೂರಿನ ವೃತ್ತದಲ್ಲಿರುವ ರಾಣಿ ಚನ್ನಮ್ಮ ಪ್ರತಿಮೆಗೆ ಸಿಎಂ ಶಿವಕುಮಾರ್​ ಮಾಲಾರ್ಪಣೆ ಮಾಡಿದರು.
ಚನ್ನಮ್ಮನ ಕಿತ್ತೂರಿನ ವೃತ್ತದಲ್ಲಿರುವ ರಾಣಿ ಚನ್ನಮ್ಮ ಪ್ರತಿಮೆಗೆ ಸಿಎಂ ಶಿವಕುಮಾರ್​ ಮಾಲಾರ್ಪಣೆ ಮಾಡಿದರು.WEB

ಮುತ್ತಿಗೆ ತಡೆಯಲಾಗದು: ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಸರ್ಕಾರ ಬದ್ಧವಾಗಿದ್ದು, ದಸರಾ ಬಳಿಕ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ಅಲ್ಲಿಯವರೆಗೆ ರೈತರು ಪಾದಯಾತ್ರೆ ಕೈಬಿಡುವಂತೆ ಸಿಎಂ ಮನವಿ ಮಾಡಿದರು. ಇದಕ್ಕೆ ಒಪ್ಪದ ಹೋರಾಟಗಾರರು ಕೇಂದ್ರ ಸರ್ಕಾರ ಎಂಎಸ್​ಪಿ ಘೋಷಣೆ ಮಾಡುವವರೆಗೆ ಪಾದಯಾತ್ರೆ ಮುಂದುವರಿಯಲಿದೆ. ಕೇಂದ್ರ ಸಚಿವರು ಚನ್ನಮ್ಮನ ಕಿತ್ತೂರಿಗೆ ಬಂದು ದರ ಘೋಷಿಸಬೇಕು. ಇಲ್ಲದಿದ್ದರೆ ಹುಬ್ಬಳ್ಳಿ ಮುತ್ತಿಗೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮಣ ಸವದಿ, ಸಂತೋಷ ಲಾಡ್​, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ, ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಅಶೋಕ ಪಟ್ಟಣ ಹಾಗೂ ರೈತ ಸಂಘಟನೆಯ ಚೂನಪ್ಪ ಪೂಜೇರಿ, ಶಶಿಕಾಂತ ಗುರೂಜಿ ಇತರರಿದ್ದರು.

ರೈತರೇ ನಮ್ಮ ದೇವರು. ನಮ್ಮನ್ನು ಸಾಕಿ ಬೆಳೆಸುವ ರೈತರಿಗೆ ಸಂಬಳ, ಪಿಂಚಣಿ, ಬಡ್ತಿಯೂ ಇಲ್ಲ. ಅವರ ಬದುಕಿನ ಭದ್ರತೆಗೆ ಸರ್ಕಾರ ಕೈಜೋಡಿಸಬೇಕು. ರೈತರ ಸಮಸ್ಯೆ ಅರಿತುಕೊಳ್ಳಲು ಬೆಂಗಳೂರಿನಿಂದ ಕಿತ್ತೂರಿಗೆ ಬಂದಿದ್ದೇನೆ. ಅವರ ನೋವು, ಸಂಕಷ್ಟಗಳು ನನಗೆ ಅರ್ಥವಾಗಿವೆ.

ಡಿ.ಕೆ. ಶಿವಕುಮಾರ್​, ಮುಖ್ಯಮಂತ್ರಿ

ಸಿಎಂಗೆ ರೈತರ ಬೇಡಿಕೆಗಳು

  • ಪ್ರತಿ ಟನ್​ ಕಬ್ಬಿಗೆ 1,000 ರೂ. ಪ್ರೋತ್ಸಾಹಧನ ನೀಡಬೇಕು.

  • ಎಕರೆಗೆ 50 ಸಾವಿರ ರೂ. ಬರ ಪರಿಹಾರ ನೀಡಬೇಕು.

  • ಸಕ್ಕರೆ ಕಾರ್ಖಾನೆಗಳ ತೂಕದಲ್ಲಿನ ಮೋಸ ತಡೆಗೆ ಸರ್ಕಾರ ಯಂತ್ರ ಅಳವಡಿಸಲು 500 ಕೋಟಿ ರೂ. ಮೀಸಲಿಡಬೇಕು.

  • ಹಗಲು ಹೊತ್ತು 12 ಗಂಟೆ ವಿದ್ಯುತ್​ ಪೂರೈಕೆ ಮಾಡಬೇಕು.

  • ತಕ್ಷಣ ಸಕ್ಕರೆ ಕಾರ್ಖಾನೆ ಆರಂಭಿಸಬೇಕು.

  • ಮಹದಾಯಿ ಯೋಜನೆ ಅನುಷ್ಠಾನಗೊಳಿಸಬೇಕು.

ಟನ್​ಗೆ 1,000 ರೂ ಘೋಷಿಸಲು ಒತ್ತಾಯ

ಈಗಾಗಲೇ ತಮಿಳುನಾಡು ಸರ್ಕಾರ ಪ್ರತಿ ಟನ್​ಗೆ 709.50 ರೂ. ವಿಶೇಷ ಪ್ರೋತ್ಸಾಹ ಧನ (ರಾಜ್ಯ ಸಬ್ಸಿಡಿ) ಘೋಷಿಸಿದೆ. ಇದರಿಂದ ಕೇಂದ್ರ ಸರ್ಕಾರ ನಿಗದಿಪಡಿಸಿರುವ 3,290.50 ರೂ. ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ (ಎಫ್​ಆರ್​ಪಿ) ಜತೆಗೆ ಪ್ರತಿ ಟನ್​ ಕಬ್ಬಿಗೆ 4,000 ರೂ. ಸಿಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಟನ್​ ಕಬ್ಬಿಗೆ 1,000 ರೂ. ಪ್ರೋತ್ಸಾಹಧನ ಘೋಷಿಸಿದರೆ ರೈತರಿಗೆ 6,000 ರೂ. ಸಿಗಲಿದೆ. ಕಬ್ಬು ಹೋರಾಟಕ್ಕೆ ರಾಜಕೀಯ ಬಣ್ಣ ಲೇಪಿಸಬಾರದು. ರೈತರ ಬೇಡಿಕೆ ಈಡೇರಿಸಿದರೆ ಸಿಎಂಗೆ 1 ಲಕ್ಷ ರೂ. ವೆಚ್ಚದ ಗುಲಾಬಿ ಹೂವಿನ ಹಾರ ಹಾಕಿ ಗೌರವಿಸಲಾಗುವುದು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ಕಬ್ಬು ಬೆಳೆಗಾರರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಪ್ರಲ್ಹಾದ ಜೋಶಿ ಅವರು ಕೇಂದ್ರ ಕೃಷಿ ಸಚಿವರೊಂದಿಗೆ ಚರ್ಚಿಸಿದ್ದು, ಬೇಡಿಕೆಗಳ ಈಡೇರಿಕೆಗೆ ರಚಿಸಿರುವ ಸಮಿತಿ ದಸರಾ ನಂತರ ರಾಜ್ಯಕ್ಕೆ ಆಗಮಿಸಲಿದೆ. ರಾಜ್ಯಸರ್ಕಾರ ಎಸ್​ಎಪಿಯಂತೆ ದರ ಕೊಡಬೇಕು. ತೂಕದಲ್ಲಿ ಆಗುತ್ತಿರುವ ಮೋಸ ತಪ್ಪಿಸಬೇಕು.

ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ರೈತರು ಕಷ್ಟದಲ್ಲಿರುವಾಗ ಅವರ ನೆರವಿಗೆ ಬರುವುದು ರಾಜ್ಯ ಸರ್ಕಾರದ ಕರ್ತವ್ಯ. ಎಂಎಸ್​ಪಿ ಹಾಗೂ ಎಸ್​ಎಪಿ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡದೆ ತ್ವರಿತ ನಿರ್ಧಾರ ಕೈಗೊಳ್ಳಬೇಕು. ರೈತರು ಮತ್ತು ಕಾರ್ಖಾನೆಗಳ ನಡುವಿನ ರಿಕವರಿ ಹಾಗೂ ರೇಟ್​ ವಿಚಾರದಲ್ಲಿ ಸ್ಪಷ್ಟ ಫಾರ್ಮುಲಾ ಬಂದರೆ ಮಾತ್ರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲು ಸಾಧ್ಯ.

ಬಸವರಾಜ ಬೊಮ್ಮಾಯಿ, ಸಂಸದ, ಮಾಜಿ ಮುಖ್ಯಮಂತ್ರಿ

ಸರ್ಕಾರಕ್ಕೆ ಜವಾಬ್ದಾರಿ ಇಲ್ಲ

ಬೆಂಗಳೂರು: ಕಬ್ಬು ಬೆಳೆಗಾರರ ವಿಚಾರದಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿದೆ, ರಾಜ್ಯ ಸರ್ಕಾರವೇ ಜವಾಬ್ದಾರಿ ಮರೆತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್​. ಅಶೋಕ್​ ಹರಿಹಾಯ್ದಿದ್ದಾರೆ. ಕೇಂದ್ರ ಸರ್ಕಾರ ಬೆಳೆಗಾರರ ಪರವಾಗಿದೆ. ರೈತರು ಏಳು ಬೇಡಿಕೆಗಳನ್ನು ಇಟ್ಟಿದ್ದು, ಅವುಗಳನ್ನು ಈಡೇರಿಸಲು ಕ್ರಮ ವಹಿಸಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಜಿಎಸ್​ಟಿಯಿಂದ ಆದಾಯ ಬರುತ್ತಿದೆ. ಆದರೂ ಈ ಬಗ್ಗೆ ಮಾತಾಡದೆ ಮೌನವಾಗಿದೆ. ಒಂದೊಂದು ಕಾರ್ಖಾನೆಯಲ್ಲಿ ಒಂದೊಂದು ದರವಿದೆ. ತ್ಯಾಜ್ಯವನ್ನು ಹೆಚ್ಚಾಗಿ ತೋರಿಸಿ ವಂಚಿಸಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಪಾಲು ನೀಡಬೇಕೆಂಬ ಕಾರಣಕ್ಕೆ ಇವರು ಮಾತುಕತೆ ನಡೆಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net