ಕೃಷಿ ಮೇಳದಲ್ಲಿ ಜಾಫರಾಬಾದಿ ಕೋಣ, ರಾಗಿ ತಳಿ ಆಕರ್ಷಣೆ-jafarabadi buffalo

ರಾಗಿ ಎಂಎಲ್ 322 ತಳಿ
ರಾಗಿ ಎಂಎಲ್ 322 ತಳಿ
Published on

ಪ್ರಮುಖ ಮುಖ್ಯಾಂಶಗಳು

  • ಮೇಳದಲ್ಲಿ ರೈತರ ಗಮನ ಸೆಳೆದ ಬರ ತಡೆಯುವ ರಾಗಿ ಎಂಎಲ್ 322 ತಳಿ, ಜಾಫರಾಬಾದಿ ಕೋಣ
  • ರಾಗಿ ಎಂಎಲ್ 322 ತಳಿಯನ್ನು ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲೂ ಬೆಳೆಯಬಹುದು
  • ವಂಶಾಭಿವೃದ್ಧಿಗಾಗಿ ಜಾಫರಾಬಾದಿ ಕೋಣ ಸಾಕಾಲಾಗುತ್ತಿದೆ
ಬೆಂಗಳೂರು: ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಆಯೋಜಿಸಿದ್ದ ಕೃಷಿ ಮೇಳದಲ್ಲಿ ಬರ ತಡೆಯುವ ರಾಗಿ ಎಂಎಲ್ 322 ತಳಿ, ಜಾಫರಾಬಾದಿ ಕೋಣ ರೈತರ ಗಮನ ಸೆಳೆಯಿತು.
ರಾಗಿ ಎಂಎಲ್ 322 ತಳಿಯನ್ನು ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲೂ ಬೆಳೆಯಬಹುದು. ಈ ತಳಿಗೆ ಬೆಂಕಿ ರೋಗ, ಬರ ತಡೆಯುವ ಶಕ್ತಿ ಇದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಪ್ರತಿ ಎಕರೆಗೆ 15-16 ಕ್ವಿಂಟಾಲ್‌ವರೆಗೆ ಇಳುವರಿ ಬಂದರೆ, ನೀರಾವರಿ ಪ್ರದೇಶಗಳಲ್ಲಿ 17-18 ಕ್ವಿಂಟಾಲ್ ಇಳುವರಿ ಬರಲಿದೆ. ಈ ತಳಿಯ ಕುರಿತು ರೈತರಿಗೆ ಹೆಚ್ಚಿನ ಅರಿವು ಮೂಡಿಸಲಾಯಿತು. ಮೂರೂವರೆ ತಿಂಗಳ ಅವಧಿ ಬೆಳೆ ಇದಾಗಿದೆ. ತಡವಾಗಿ ಮಳೆ ಬಂದರೂ ಬೆಳೆ ಬೆಳೆಯಬಹುದು. ಇತರ ತಳಿ ರಾಗಿಯನ್ನು ಆಗಸ್ಟ್‌ದೊಳಗೆ ಬಿತ್ತನೆ ಮಾಡಬೇಕು. ಆದರೆ, ರಾಗಿ ಎಂಎಲ್ 322 ತಳಿಯ ಬಿತ್ತನೆಗೆ ಸೆಪ್ಟೆಂಬರ್‌ವರೆಗೂ ಅವಕಾಶವಿದೆ. ನೀರಾವರಿ ಇದ್ದರೆ ಡಿಸೆಂಬರ್‌ನಲ್ಲಿ ಬಿತ್ತನೆ ಮಾಡಿ ಫೆಬ್ರವರಿಯೊಳಗೆ ಕಟಾವು ಮಾಡಬಹುದು.
ಕೃಷಿ ವಿಜ್ಞಾನಿ ಡಾ. ಮೋಹನ್‌ರಾವ್ ಮಾತನಾಡಿ, ಬೆಂಗಳೂರು ಕೃಷಿ ವಿವಿ ಅಭಿವೃದ್ಧಿಪಡಿಸಿರುವ ಈ ರಾಗಿ ತಳಿಯು ರೈತರಿಗೆ ಹೆಚ್ಚು ವರದಾನವಾಗಿದೆ. ಪ್ರಸ್ತುತ 30 ಸಾವಿರ ಎಕರೆಯಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಉತ್ತಮ ತಳಿ ಹಿನ್ನೆಲೆಯಲ್ಲಿ ರೈತರಿಗೆ ಹೆಚ್ಚಿನ ಮಾಹಿತಿ ಒದಗಿಸಲಾಗುತ್ತಿದೆ. ಕಾಂಡ ಗಟ್ಟಿಯಾಗಿದ್ದು, ತುಸು ಉದ್ದವಾಗಿ ಬೆಳೆಯುವ ರಾಗಿ ಬೆಳೆ ಹೆಚ್ಚು ಮಳೆಯಾದರೂ ನೆಲಕ್ಕೆ ಬೀಳುವುದಿಲ್ಲ. ದಕ್ಷಿಣ ಕರ್ನಾಟಕದ ಭಾಗದಲ್ಲಿ ಹೆಚ್ಚು ರಾಗಿ ಬೆಳೆಯುವ ರೈತರು, ಈ ತಳಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗಮನ ಸೆಳೆದ ಜಾಫರಾಬಾದಿ ಕೋಣ:
ಕೃಷಿ ಮೇಳದಲ್ಲಿ ಮತ್ತೊಂದು ವಿಶೇಷತೆ ಎಂದರೆ ಜಾಫರಾಬಾದಿ ಕೋಣ. ಅರ್ಧ ಟನ್ ತೂಕ ಹೊಂದಿರುವ ಈ ಕೋಣಕ್ಕೆ ಮಾರುಕಟ್ಟೆಯಲ್ಲಿ 50 ಲಕ್ಷ ರೂ. ಇದೆ. ವಿಶೇಷವಾಗಿ ವಂಶಾಭಿವೃದ್ಧಿಗಾಗಿ ಇದನ್ನು ಸಾಕಾಲಾಗುತ್ತಿದೆ. ಇತರ ತಳಿಯ ಕೋಣಗಿಂತ ಅಧಿಕ ತೂಕವಿರುವ ಜಾರಾಬಾದಿ ತಳಿಯ ಗಂಡು ಕೋಣ, ಉತ್ತರ ಭಾರತದ ಹರಿಯಾಣದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಶ್ರೀಕೃಷ್ಣ ಗೋಶಾಲೆ, ಮೇಳದ ಪಶುಸಂಗೋಪನಾ ವಿಭಾಗದಲ್ಲಿ ಈ ತಳಿಯ ಹೆಣ್ಣು ಮತ್ತು ಗಂಡು ಕೋಣವನ್ನು ಪ್ರದರ್ಶನಕ್ಕಿಟ್ಟಿದ್ದರು. ದೈತ್ಯವಾಗಿದ್ದರೂ ಸೌಮ್ಯ ಸ್ವಭಾವ ಗುಣ ಹೊಂದಿದೆ. ಇದರ ಕೂದಲು ಒರಟು ಇದೆ. ಇದರ ಕೊಂಬು ದಪ್ಪ ಇದೆ. ಜಾಫರಾಬಾದಿ ತಳಿಯ ಹೆಣ್ಣಿನ ಎಮ್ಮೆ ಕೊಬ್ಬಿನ ಅಂಶ ಹೊಂದಿರುವ ಹಾಲು ನೀಡಲಿದೆ. ಗಂಡು ಕೋಣ ಸಾಕಲು ದುಬಾರಿ ವೆಚ್ಚವಾಗಲಿದೆ ಎನ್ನುತ್ತಾರೆ ಸಂಸ್ಥೆಯ ಪ್ರತಿನಿಧಿಗಳು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net