ಗಾಂಧಿ ಮನೆತನಕ್ಕೆ ನಿಷ್ಠೆ ಜಾಧವ್​ ಟೀಕೆ

ಡಾ.ಉಮೇಶ ಜಾಧವ್
ಡಾ.ಉಮೇಶ ಜಾಧವ್
Published on

ಪ್ರಮುಖ ಮುಖ್ಯಾಂಶಗಳು

  • ರಾಹುಲ್​ ವಿದೇಶ ಪ್ರವಾಸ ಖರ್ಗೆ ಮೌನ
ಕಲಬುರಗಿ: ಪ್ರಧಾನಿಯವರ ವಿದೇಶಿ ಪ್ರವಾಸ ಟೀಕಿಸುವ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ ಅವರು ರಾಹುಲ್​ ವಿದೇಶ ಪ್ರವಾಸದ ಬಗ್ಗೆ ಮೌನ ವಹಿಸುವ ಮೂಲಕ ಗಾಂಧಿ ಮನೆತನಕ್ಕೆ ನಿಷ್ಠೆ ತೋರಿದ್ದು, ವಾಸ್ತವ ತಿಳಿಯದ ಮೌಢ್ಯತನಕ್ಕೆ ಇದು ಸಾಕ್ಷಿ ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ್​ ಟೀಕಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರಧಾನಿ ಮೋದಿ ಅವರ ವಿದೇಶಿ ಪ್ರವಾಸ ರಾಜತಾಂತ್ರಿಕ ಸಂಬಂಧ ಗಟ್ಟಿಗೊಳಿಸುತ್ತಿದ್ದು, ಆರ್ಥಿಕ ಬಲ ವೃದ್ಧಿ ಮಾಡುತ್ತಿದೆ. ಆದರೆ ವಿಪ ನಾಯಕ ರಾಹುಲ್​ ಗಾಂಧಿಯವರು ಕೈಗೊಂಡ ವಿದೇಶ ಪ್ರವಾಸ ಯಾರ ಹಣದಿಂದ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ. 11 ಕೋಟಿ ಆಸ್ತಿ ಘೋಷಣೆ ಮಾಡಿರುವ ರಾಹುಲ್​ ಗಾಂಧಿಯವರು ಈವರೆಗೆ 22 ವರ್ಷಗಳಲ್ಲಿ ಸಂಸದರಾಗಿ ಆಯ್ಕೆ ಹೊಂದಿ ಸುಮಾರು 54 ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಅದರ ಖರ್ಚು ಸುಮಾರು 60 ಕೋಟಿ ಎಂದು ಅಂದಾಜಿಸಲಾಗಿದೆ. ಇಷ್ಟೊಂದು ಹಣ ಯಾರ ಪ್ರಾಯೋಜಕತ್ವದಿಂದ ಆಗಿದೆ ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ದೇಶದ ಎಲ್ಲ ವಿದ್ಯಮಾನಗಳ ಬಗ್ಗೆ ಮಾತನಾಡುವ ಪ್ರಿಯಾಂಕ್​ ಖರ್ಗೆಯವರ ಹೇಳಿಕೆಗಳ ಭರಾಟೆ ಈಗ ನಗೆ ಪಾಟಲಿಗೀಡಾಗುತ್ತಿದೆ. ಮಧ್ಯ ಪ್ರಾಚ್ಯದಲ್ಲಿನ ಯುದ್ಧ ಬಿಕ್ಕಟ್ಟಿನ ಪರಿಣಾಮದಿಂದ ತೈಲ ಬೆಲೆ ಏರಿಕೆಗೊಂಡ ನಗ್ನ ಸತ್ಯ ಜನಸಾಮಾನ್ಯರಿಗೆ ಅರ್ಥವಾಗುತ್ತಿದ್ದರೂ ಪ್ರಿಯಾಂಕ ಖರ್ಗೆಗೆ ಮಾತ್ರ ಇದು ಅರ್ಥವಾಗದಿರುವುದು ಅವರ ಬಾಲಿಶತನಕ್ಕೆ ಸಾಕ್ಷಿ. ಪುಕ್ಕಟೆ ಹೇಳಿಕೆಗಳ ಮೂಲಕ ಹಿಟ್​ ಅಂಡ್​ ರನ್​ ಆಗುವ ಖರ್ಗೆಯವರು ನೀಟ್​ ಅಕ್ರಮವನ್ನು ಸಿಬಿಐಗೆ ಒಪ್ಪಿಸಿ ಸರಣಿ ಬಂಧನ ನಡೆಸಿ ಕಂಬಿ ಎಣಿಸುವಂತೆ ಮಾಡಿ ಕೇಂದ್ರ ಸರ್ಕಾರವು ದಿಟ್ಟ ಹೆಜ್ಜೆ ಇಟ್ಟಿರುವ ಬಗ್ಗೆ ಗಮನಕ್ಕೆ ಬಂದಿಲ್ಲವೇ? ಆದರೆ ರಾಜ್ಯದಲ್ಲಿ ಕೃಷಿ ಪರೀಕ್ಷೆ ಅಕ್ರಮ ನಡೆದು ರೈತರ ಮಕ್ಕಳ ಭವಿಷ್ಯ ಚಿವುಟಿ ಹಾಕಿದ ರಾಜ್ಯ ಸರ್ಕಾರ ಯಾರನ್ನು ಬಂಧಿಸಿದೆ? ಈ ಬಗ್ಗೆ ಸರ್ಕಾರದ ವೈಫಲ್ಯ ಪ್ರಿಯಾಂಕ ಖರ್ಗೆ ಯವರಿಗೆ ಕಾಣುತ್ತಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ನವ ಕಲಬುರಗಿ ನಿರ್ಮಾಣ ಗ್ಯಾರಂಟಿ ಘೋಷಣೆ ಮಾಡುವ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ನಗರದಲ್ಲಿ ಒಂದು ಬಾರಿ ಪ್ರದಣೆ ಹಾಕಿದರೆ ಗಬ್ಬು ವಾಸನೆ ಬೀರುವ ಚರಂಡಿಗಳು, ಧೂಳು ತಿನ್ನುತ್ತಿರುವ ರಸ್ತೆ, ಹದಗೆಟ್ಟ ಟ್ರಾಫಿಕ್​ ಸಿಗ್ನಲ್​, ಕೆಟ್ಟ ಸ್ಥಿತಿಯ ಉದ್ಯಾನವನಗಳು, ಕುಸಿದು ಬೀಳುತ್ತಿರುವ ಸರ್ಕಾರಿ ಕಟ್ಟಡಗಳು, ಕಿತ್ತು ಹೋದ ಪಾದಾಚಾರಿ ರಸ್ತೆ, ತ್ಯಾಜ್ಯದ ರಾಶಿಗಳ ದರ್ಶನವಾಗುತ್ತದೆ. ಕಲಬುರಗಿ ಸಂಸದರನ್ನು ಹುಡುಕಿಕೊಡಿ ಎಂದು ಜನತೆ ಪ್ರಶ್ನಿಸುತ್ತಿದ್ದರೂ ಈ ಬಗ್ಗೆ ರ್ಖಗೆ ಮಾತ್ರ ಚಕಾರವೆತ್ತುತ್ತಿಲ್ಲ. ಕಾಂಗ್ರೆಸ್​ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಕೊಟ್ಟ ಅಭಿವೃದ್ಧಿ ಶೂನ್ಯದ ಸಮರ್ಪಣೆ ತುಮಕೂರಿನಲ್ಲಿ ಮಾಡಿ ತನ್ನ ಪ್ರಾಯಶ್ಚಿತ ಮಾಡಿಕೊಳ್ಳುತ್ತಿದೆ ಎಂದು ದೂರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net