ನ್ಯಾಯ ದೊರಕಿಸಿಕೊಡುವ ಜವಾಬ್ದಾರಿ ನನ್ನದು

ರಾಮಚಂದ್ರಪುರ ಗ್ರಾಮದಲ್ಲಿ ಸಚಿವ ಕೆ.ಎಂ.ಶಿವಲಿಂಗೇಗೌಡರಿಗೆ ರೈತರು ಮನವಿ ಸಲ್ಲಿಸಿದರು. ಶ್ರೇಯಸ್ ಪಟೇಲ್, ಬಿ.ಶಿವರಾಂ,  ಭೂಮೇಶ್,ಕರ್ಕಿಹಳ್ಳಿ ರಮೇಶ್, ತಾರಾನಾಥ್, ಪಡುವಳಲು ಸಚಿನ್, ಕುಮಾರ್ ಇತರರಿದ್ದರು.
ರಾಮಚಂದ್ರಪುರ ಗ್ರಾಮದಲ್ಲಿ ಸಚಿವ ಕೆ.ಎಂ.ಶಿವಲಿಂಗೇಗೌಡರಿಗೆ ರೈತರು ಮನವಿ ಸಲ್ಲಿಸಿದರು. ಶ್ರೇಯಸ್ ಪಟೇಲ್, ಬಿ.ಶಿವರಾಂ, ಭೂಮೇಶ್,ಕರ್ಕಿಹಳ್ಳಿ ರಮೇಶ್, ತಾರಾನಾಥ್, ಪಡುವಳಲು ಸಚಿನ್, ಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಕೆ.ಎಂ.ಶಿವಲಿಂಗೇಗೌಡ
  • ಬೇಲೂರು ತಾಲೂಕಿನ ಮಾದಿಹಳ್ಳಿ ಹೋಬಳಿ ಸಮೀಪದ ರಾಮಚಂದ್ರಪುರ ಗ್ರಾಮ

ಹಗರೆ:

ರೈತರ ಸಂಕಷ್ಟ ಏನೆಂಬುದು ನನಗೆ ಚನ್ನಾಗಿ ತಿಳಿದಿದ್ದು, ನ್ಯಾಯಯುತವಾಗಿ ಜಮೀನು ಮಂಜೂರಾಗಿದ್ದರೆ ಅಂತಹ ಯಾವುದೇ ರೈತರು ಹೆದರುವಂತಿಲ್ಲ. ನಿಮಗೆ ನ್ಯಾಯ ದೊರಕಿಸಿಕೊಡುವ ಜವಾಬ್ದಾರಿ ನನ್ನದು ಎಂದು ಸಚಿವ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.

ಬೇಲೂರು ತಾಲೂಕಿನ ಮಾದಿಹಳ್ಳಿ ಹೋಬಳಿ ಸಮೀಪದ ರಾಮಚಂದ್ರಪುರ ಗ್ರಾಮದಲ್ಲಿ ರೈತ ಮುಖಂಡ ಸ್ವಾಮಿಗೌಡರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ, ಬಗರ್‌ಹುಕುಂನಲ್ಲಿ ಜಮೀನು ಮಂಜುರಾದ ತಾಲೂಕಿನ ಸುಮಾರು ಎರಡು ಸಾವಿರಕ್ಕೂ ಹೆಚ್ಚು ರೈತರಿಗೆ ಸಿಐಡಿ ಮೂಲಕ ಸರ್ಕಾರ ನೋಟಿಸ್ ನೀಡುತ್ತಿದ್ದು, ವಿಚಾರಣೆಗೆ ಆಗಮಿಸುವಂತೆ ಹೇಳುತ್ತಿದೆ. ರೈತರನ್ನು ಅಧಿಕಾರಿಗಳು ಅಪರಾಧಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ಸರ್ಕಾರದ ಈ ಕ್ರಮದಿಂದ ರೈತರು ಬೀದಿಪಾಲಾಗುತ್ತಿದ್ದಾರೆ. ಕೂಡಲೇ ಮಧ್ಯಪ್ರವೇಶಿಸಿ ನ್ಯಾಯದೊರಕಿಸಿಕೊಡಬೇಕು. ಅಲ್ಲದೆ ದಿನದಂದ ದಿನಕ್ಕೆ ಆನೆಗಳ ಉಪಟಳ ಹೆಚ್ಚಾಗುತ್ತಿದ್ದು, ಶಾಶ್ವತ ಪರಿಹಾರ ದೊರಕಿಸುವಂತೆ ಮನವಿ ಮಾಡಿದರು.
ಒಬ್ಬ ವ್ಯಕ್ತಿಗೆ ನಿಗದಿತ ಭೂಮಿಗಿಂತ ಹೆಚ್ಚು ಭೂಮಿ ಮಂಜೂರು ಮಾಡುವಂತಿಲ್ಲ. ಅಲ್ಲದೆ ಭೂ ಸ್ವಾಧೀನದಲ್ಲಿದ್ದರೆ ಯಾವ ಸರ್ಕಾರಗಳೂ ಸಹ ರೈತರ ಭೂಮಿಯನ್ನು ಕಿತ್ತುಕೊಳ್ಳುವುದಿಲ್ಲ. ಕೂಡಲೇ ಮುಖ್ಯಮಂತ್ರಿಗಳೊಂದಿಗೆ ಈ ಸಂಬಂಧ ಚರ್ಚೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಸ್ಥಳೀಯ ಶಾಸಕರು ಇದನ್ನು ಸರ್ಕಾರದ ಗಮನಕ್ಕೆ ತರಬೇಕಿತ್ತು. ಯಾಕೆ ಸುಮ್ಮನಿದ್ದಾರೋ ಗೊತ್ತಿಲ್ಲ. ಶೀಘ್ರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತ ಮುಖಂಡರು, ಅಧಿಕಾರಿಗಳು ಶಾಸಕರು ಹಾಗೂ ಆಸಕ್ತಿ ಇರುವ ಎಲ್ಲರನ್ನು ಸೇರಿಸಿ ಸಭೆ ಮಾಡಲಾಗುವುದು. ಎಲ್ಲರೂ ತಪ್ಪದೆ ಹಾಜರಾಗಿ. ಅಲ್ಲಿ ಪರಿಶೀಲಿಸೋಣ ಎಂದರು.

ಹಾಸನ-ಬೇಲೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ರೈತರಿಗೆ ಪರಿಹಾರ ಬಂದಿಲ್ಲ. ಕಟ್ಟಡ ಕಟ್ಟಲು ಅನುಮತಿ ದೊರಕುತ್ತಿಲ್ಲ. ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸ್ಥಳೀಯರು ಸಚಿವರ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಂಸದ ಶ್ರೇಯಸ್ ಪಟೇಲ್, ಈಗಾಗಲೇ ದಿಲ್ಲಿಯಲ್ಲಿ ಅಧಿಕಾರಿಗಳೊಂದಿಗೆ ಸಭೆಗಳು ನೆಡೆಯುತ್ತಿವೆ. ಸಾರಿಗೆ ಸಚಿವರೊಂದಿಗೆ ಮಾತುಕತೆ ನೆಡೆಸಿದ್ದೇನೆ. ಆದಷ್ಟು ಬೇಗ ರೈತರ ಖಾತೆಗೆ ಪರಿಹಾರದ ಮೊತ್ತ ಜಮೆಯಾಗಿ ಕೆಲಸ ಪ್ರಾರಂಭವಾಗುತ್ತದೆ ಎಂದರು.

ಮಾಜಿ ಸಚಿವ ಬಿ.ಶಿವರಾಂ, ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಭೂಮೇಶ್, ಮುಖಂಡರಾದ ಕರ್ಕಿಹಳ್ಳಿ ರಮೇಶ್, ತಾರಾನಾಥ್, ಪಡುವಳಲು ಸಚಿನ್, ಕುಮಾರ್, ಸಂಗಮೇಶ್, ತಾರಾನಾಥ್, ಸುರೇಶ್, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿದ್ದೇಗೌಡ, ನಿರ್ದೇಶಕ ಮಂಜುನಾಥ್, ಪ್ರಕಾಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net