ಆಹಾರ ಪದ್ಧತಿ ಹಾಗೂ ಮೊಬೈಲ್ ಬಳಕೆಯಿಂದ ಹೆಚ್ಚಿನ ಜನರಲ್ಲಿ ಕಣ್ಣಿನ ಸಮಸ್ಯೆಗಳು ಕಂಡುಬರುತ್ತಿದ್ದು ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಅರವಿಂದ ಕಣ್ಣಾಸ್ಪತ್ರೆಯ ಸಂಪರ್ಕಾಧಿಕಾರಿ ಬಿ.ವಿಜಯಕಾಂತ್ ಹೇಳಿದರು.
ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಬುಧವಾರ ಶ್ರೀ ದಾಸಬಣಜಿಗ ಟ್ರಸ್ಟ್ ಹಾಗೂ ಯುವಕ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ಬದಲಾದ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಮೊಬೈಲ್ ಬಳಕೆಯಿಂದ ಹೆಚ್ಚಿನ ಜನರಲ್ಲಿ ಕಣ್ಣಿನ ಸಮಸ್ಯೆಗಳು ಕಂಡುಬರುತ್ತಿದ್ದು ಅದರಲ್ಲಿಯೂ ಮಕ್ಕಳು ಮತ್ತು ಯುವಕರಲ್ಲಿಯೇ ಹೆಚ್ಚಾಗಿ ಕಂಡುಬರುತ್ತಿದೆ. ಮಧುಮೇಹ ಕಣ್ಣಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತಿದ್ದು ಕೂಡಲೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ದೃಷ್ಟಿನಾಶವಾಗುವ ಅಪಾಯವಿದೆ ಎಂದರು.
ಪಟ್ಟಣ ಪ್ರದೇಶಗಳಲ್ಲಿ ಸಮಸ್ಯೆಗಳು ಎದುರಾದರೆ ಆಸ್ಪತ್ರೆಗೆ ಹೋಗಲು ಅವಕಾಶವಿದೆ. ಆದರೆ ದುಬಾರಿ ಚಿಕಿತ್ಸಾ ವೆಚ್ಚ ಹಾಗೂ ಸವಲತ್ತುಗಳ ಕೊರತೆಯಿಂದ ಗ್ರಾಮೀಣ ಜನರು ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಆದ್ದರಿಂದ ಸಂಘ-ಸಂಸ್ಥೆಗಳು ಹಾಗೂ ದಾನಿಗಳು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಶಿಬಿರಗಳನ್ನು ಆಯೋಜಿಸುವ ಮೂಲಕ ಬಡ ಹಾಗೂ ಮಧ್ಯಮವರ್ಗದ ಜನರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಅಲ್ಲದೆ 20 ವರ್ಷಗಳಿಂದ ಆಸ್ಪತ್ರೆಯಿಂದ ಈವರೆಗೆ ತಾಲೂಕಿನ ಸುಮಾರು 30 ಸಾವಿರ ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ ಎಂದು ಹೇಳಿದರು.
ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ.ಕೃತಿನ್ ಷಾ, ಡಾ.ಹರಿಕುಮಾರ್ ಹಾಗೂ ಸಿಬ್ಬಂದಿ ಪೊರೆ, ಗ್ಲಾಕೋಮಾ, ನೀರು ಸೋರುವಿಕೆ, ಗೀಜು ಬರುವುದು, ಹತ್ತಿರ ಮತ್ತು ದೂರದೃಷ್ಟಿ ದೋಷ, ವಾರೆಕಣ್ಣು, ರಾತ್ರಿ ಕುರುಡುತನದ ತೊಂದರೆಯಿದ್ದ 200 ಜನರನ್ನು ತಪಾಸಣೆ ಮಾಡಿದರು. ಶಸ್ತ್ರಚಿಕಿತ್ಸೆ ಅಗತ್ಯವಿದ್ದ 45 ರೋಗಿಗಳನ್ನು ಕೊಯಮತ್ತೂರಿಗೆ ಕರೆದೊಯ್ದರು.
ಶ್ರೀ ದಾಸಬಣಜಿಗ ಟ್ರಸ್ಟ್ ಅಧ್ಯಕ್ಷ ಟಿ.ನಾಗೇಂದ್ರ, ಉಪಾಧ್ಯಕ್ಷ ಎ.ಗಣೇಶ್, ಕಾರ್ಯದರ್ಶಿ ಟಿ.ಎಸ್.ವಿನೋದ್ ಕುಮಾರ್, ಯುವಕರ ಸಂಘದ ಅಧ್ಯಕ್ಷ ಜೆ.ಶಿವಕುಮಾರ, ಉಪಾಧ್ಯಕ್ಷ ಟಿ.ಪ್ರಕಾಶ್, ಕಾರ್ಯದರ್ಶಿ ಶ್ರೀನಿವಾಸ್, ಜಿ.ಆರ್.ರಮೇಶ್, ಪದಾದಿಕಾರಿಗಳಾದ ಆರ್.ಪ್ರಭು, ಆರ್.ಗಣೇಶ್, ಮಣಿಕಂಠ, ಶರವಣ, ಪರಮೇಶ್, ಗಣೇಶ್, ಈರೋಡ್ ಲಯನ್ಸ್ ಕ್ಲಬ್‌ನ ಎನ್.ರಘುನಾಥನ್, ಶಿವಕುಮಾರ್, ಆರತಿಕುಮಾರನ್ ಇತರರು ಇದ್ದರು.