ನಾನು ಕರ್ತೃವಲ್ಲ, ನಿಮಿತ್ತ ಮಾತ್ರನೆಂದು ತಿಳಿಯುವದೇ ಜೀವೋತ್ಕರ್ಷ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಎಲ್ಲಕಂ ನಿನಗಿಲ್ಲ ಕರ್ತವ್ಯದಧಿಕಾರ|

ಇಲ್ಲದೆಯುಮಿಲ್ಲ ನಿನಗಾ ಹೊರೆಯ ಪಾಲು||

ಸಲ್ಲಿಸಾದನಿತ, ಮಿಕ್ಕುದು ಪಾಲಿಗನ ಪಾಡು|

ಒಲ್ಲನವನ್ ಅರೆನೆಚ್ಚ-ಮಂಕುತಿಮ್ಮ||584||

ಎಲ್ಲದಕ್ಕೂ ನಿನಗೆ ಕರ್ತವ್ಯದ ಅಧಿಕಾರವು ಇಲ್ಲ. ಹಾಗೆಂದು ನಿನಗೆ ಆ ಹೊರೆಯ ಪಾಲು ಇಲ್ಲದೆಯೂ ಇಲ್ಲ. ನಿನಗೆಷ್ಟು ಸಾಧ್ಯವೋ ಅಷ್ಟನ್ನು ಸಲ್ಲಿಸು. ಉಳಿದುದನು ಪಾಲಿಗನ ಪಾಡು ಎಂದು ಬಿಟ್ಟು ಬಿಡು. ಅಶ್ರದ್ಧೆಯನ್ನು, ಅರೆ ನಂಬಿಕೆಯನ್ನು ಅವನು ಒಪ್ಪಲಾರ ಎನ್ನುತ್ತದೆ ಈ ಕಗ್ಗ.

ಹಲವರಿಗೆ ಸಂಸಾರವು ಬಂಧನ, ಹೊರೆ. ಬದುಕು ಭಾರ, ರಸಹೀನ. ಸಾಯಲಾರದ್ದಕ್ಕೆ ಬದುಕುವುದು ಎಂಬ ನಿರಾಶಭಾವ. ಕೊನೆಗೆ ಕಾಯುವ ದೇವರು ನಿಜಕ್ಕೂ ಇದ್ದಾನೆಯೇ? ಇದ್ದರೆ ಹೀಗೇಕೆ ಸೋಲು-ಸಂಕಟ ತಂದಿಟ್ಟ ಎಂದು ಪ್ರಶ್ನಿಸುತ್ತಾ ಕೊರಗುವುದು. ಇದು ಸಾಮಾನ್ಯರ ಪಾಡು.

ಸಾಮಾನ್ಯ ವ್ಯಕ್ತಿಗೆ ತನ್ನ ಸಂಸಾರವೇ ಒಂದು ಪುಟ್ಟ ಲೋಕ. ಕುಟುಂಬದ ಏಳಿಗೆಯು ಆತನ ಜೀವನದ ಮುಖ್ಯ ಉದ್ದೇಶ. ಅದನ್ನು ಮೀರಿ ಸಮಾಜ, ದೇಶ, ಲೋಕ ಎಂಬ ಆದರ್ಶಗಳನ್ನಾತ ಬೆನ್ನು ಹತ್ತಲಾರ. ಹೀಗಿದ್ದರೂ ಆತ ತನ್ನ ಪುಟ್ಟ ಸಂಸಾರಕ್ಕೆ ಮಾಡಬೇಕಾದ ಕರ್ತವ್ಯಗಳನ್ನು ನಿರ್ವಹಿಸಲು ಹೆಣಗಾಡುತ್ತಾನೆ. ಗೆದ್ದಾಗ ಬೀಗುತ್ತಾನೆ; ಸೋತಾಗ ಕುಸಿಯುತ್ತಾನೆ. ಕರ್ತವ್ಯಗಳೆಂಬ ಮೋಹದೆಳೆಯಲ್ಲಿ ಬಂಧಿಯಾಗಿ ಬದುಕಿನುದ್ದಕ್ಕೂ ಒದ್ದಾಡುತ್ತಾನೆ.

ದೇಹದಲ್ಲಿ ನಿರಂತರವಾಗಿ ನಡೆಯುವ ಉಸಿರಾಟ, ರಕ್ತಪರಿಚಲನೆ, ಜೀರ್ಣವೇ ಮೊದಲಾದ ಪ್ರಕ್ರಿಯೆಗಳೇ ವ್ಯಕ್ತಿಯ ನಿಯಂತ್ರಣದಲ್ಲಿಲ್ಲ. ಜೀವನದಲ್ಲಿ ಕ್ಷಣಕ್ಷಣಕ್ಕೂ ಅನಿರೀಕ್ಷಿತಗಳು, ಆಕಸ್ಮಿಕಗಳು ಸಂಭವಿಸುತ್ತಲೇ ಇರುತ್ತವೆ. ತನಗೆ ತಾನೆ ಪ್ರಶ್ನೆಯಾಗುವಂತೆ ವ್ಯಕ್ತಿಯ ಮನಸ್ಸಿನ ಓಟವಿರುತ್ತದೆ. ತನ್ನ ತನುಮನಗಳ ನಿಯಂತ್ರಣವೇ ಸಾಧ್ಯವಿಲ್ಲದಿರುವಾಗ ಮನುಷ್ಯನು ತನ್ನ ಬದುಕಿನ ಗತಿಯನ್ನು ನಿರ್ಧರಿಸುವುದು ಹೇಗೆ?

ತಾನೇ ಮಾಡಿದೆ, ತನ್ನಿಂದಲೇ ಎಲ್ಲವೂ ಎಂದು ಭಾವಿಸುವ ಹಮ್ಮು, ಕರ್ತವ್ಯ ನಿಭಾಯಿಸುವಾಗಿನ ಲೋಪ-ದೋಷಕ್ಕಾಗಿ ಕ್ಲೇಶ, ನಿರೀಕ್ಷಿತ ಪ್ರತಿಫಲವು ದೊರಕುವುದೇ ಎಂಬ ಆತಂಕಗಳು ಪ್ರತಿಯೊಬ್ಬರನ್ನೂ ಕಾಡುವುದಿದೆ. ಆದರೆ ಇದಕ್ಕೆ ಅರ್ಥವಿಲ್ಲ. ಹುಟ್ಟು-ಸಾವುಗಳನ್ನೇ ನಿರ್ಧರಿಸಲಾರದ, ಸದಾ ಸಾವೆಂಬ ತೂಗುಗತ್ತಿಯ ಅಡಿಯಲ್ಲಿ ಓಡಾಡುವ ಮನುಷ್ಯನು ಲೋಕದ ಆಗುಹೋಗುಗಳನ್ನು ಅರಿಯಬಲ್ಲನೆ? ಬದುಕಿನ ನೆಮ್ಮದಿಯು ಬಾಹ್ಯ ವಸ್ತುಗಳಿಂದ ಲಭ್ಯವಾಗುವು ದಲ್ಲ. ಆ ಕ್ಷಣಕ್ಕೆ ಹಿತವೆನ್ನಿಸಿ ಮತ್ತೆ ಬೇಕೆಂಬ ಆಸೆ ಹುಟ್ಟಿಸುವ, ಹೊಸ

ದೇನಿದೆ ಎಂದರಸುವಂತೆ ಮಾಡುವ ವಸ್ತುಗಳಿಂದ ಸಂತೃಪ್ತಿಯಿಲ್ಲ. ಅದಕ್ಕಾಗಿ ವ್ಯಕ್ತಿಯು ತಾನು ಮಾಡುವ ಕೆಲಸವನ್ನು ನಿಷ್ಕಾಮನಾಗಿ ಮಾಡಬೇಕು. ಪ್ರತಿಫಲದ ಅಪೇಕ್ಷೆ ಇಲ್ಲದೆ, ತಾನು ಮಾಡುತ್ತಿದ್ದೇನೆ ಎಂಬ ಭಾವವೂ ಇಲ್ಲದೆ, ಸೇವೆ ಎನ್ನುವುದು ಯಜ್ಞ ಎಂಬಂತೆ ಕರ್ತವ್ಯಮುಖನಾಗಬೇಕು. ನಾನು ಕರ್ತೃವಲ್ಲ, ನಿಮಿತ್ತ ಮಾತ್ರನೆಂದು ತಿಳಿಯುವದೇ ಜೀವಸಾಧನೆ, ಜೀವೋತ್ಕರ್ಷ.

ಓಡಾಟಕ್ಕಾಗಿ ಬಸ್ಸು, ರೈಲನ್ನು ಅಶ್ರಯಿಸುವ ವ್ಯಕ್ತಿಯು ಚಾಲಕನು ಅಪರಿಚಿತನಾಗಿದ್ದರೂ ನಂಬಿ ಕುಳಿತುಕೊಳ್ಳುತ್ತಾನೆ. ವಾಹನ ಚಾಲನೆಯ ಹೊಣೆ ತನ್ನದೆಂಬಂತೆ ವರ್ತಿಸುವುದಿಲ್ಲ. ಅಂತೆಯೇ ಜೀವನವೆಂಬ ಪಯಣಕ್ಕೂ ಚಾಲಕನೊಬ್ಬನು ಅವ್ಯಕ್ತನಾಗಿ ಇದ್ದಾನೆ. ಎಲ್ಲದಕ್ಕೂ ಕರ್ತವ್ಯದ ಅಧಿಕಾರವು ವ್ಯಕ್ತಿಗೆ ಇಲ್ಲ. ಹಾಗೆಂದು ಬರಿದೆ ಕುಳ್ಳಿರುವುದಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಸಮಾಜಕ್ಕೆ, ಲೋಕಕ್ಕೆ ಮಾಡಬೇಕಾದ ಕರ್ತವ್ಯಗಳಿವೆ. ತನ್ನ ಪಾಲಿನ ಕರ್ತವ್ಯಗಳನ್ನು ಸರಿಯಾಗಿ ಅರಿತು ನಿರ್ವಂಚನೆಯಿಂದ ನಿಭಾಯಿಸಬೇಕು. ಆದರೆ ಅದರ ಫಲದ ಬಗೆಗೆ ಯೋಚನೆ, ನಿಷ್ಪಲವಾದರೆ ಚಿಂತೆ, ಫಲಿಸಿತೆಂದರೆ ಹೆಮ್ಮೆ ಇರಬಾರದು. ಕರ್ತವ್ಯದ ಅಧಿಕಾರ, ಅದರ ಆದಾಯ ಎರಡೂ ಇಲ್ಲ ಎಂದ ಮೇಲೆ ಎಷ್ಟು ಮಾಡಿದರೇನು? ಹೇಗೆ ಮಾಡಿದರೇನು? ಎಂಬ ಉದಾಸೀನವೂ ಸಲ್ಲದು.

ಎಷ್ಟೋ ಸಲ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡವರು ಪೂರ್ಣಮನಸ್ಸಿನಿಂದ ಕಾರ್ಯೋನ್ಮುಖರಾಗುವುದಿಲ್ಲ. ಸಂಬಳಕ್ಕೆ ತಕ್ಕಷ್ಟೇ ದುಡಿಮೆ, ಕಡಿಮೆ ದುಡಿಮೆ ಹೆಚ್ಚು ಸಂಬಳ ಹೀಗೆ ಯೋಚಿಸುವವರೆ ಹೆಚ್ಚು. ಅಪ್ರಾಮಾಣಿಕನಾದ ಕೆಲಸಗಾರ ನನ್ನು ಯಾವ ಯಜಮಾನನೂ ಸಹಿಸಲಾರ. ಜಗತ್ತು ಎಂಬ ಗುಡಿಯ ಊಳಿಗಕ್ಕೆ ಬಂದಿರುವ ವಿವೇಕಿಯಾದ ಮನುಷ್ಯನು ತನ್ನ ಕರ್ತವ್ಯಗಳನ್ನು ಅರಿತು, ನಿಷ್ಠೆಯಿಂದ ಕಾರ್ಯವನ್ನು ನಿರ್ವಹಿಸ ಬೇಕು. ಕರ್ವನುಸಾರಿಯಾಗಿ, ಋಣದ ಸಂಬಂಧಿಯಾಗಿ ಚಿತ್ರಿತವಾಗುವ ಜೀವನದಲ್ಲಿ ಪಾಲಿಗೆ ಬಂದ ಕರ್ತವ್ಯಗಳು ಹೊರೆ ಎನ್ನಿಸ ಬಹುದು, ಕಷ್ಟಪಡಬೇಕಾದೀತು, ಆದರೆ ಅದು ವಿಧಿಸಲ್ಪಟ್ಟದ್ದು ಎನ್ನುವ ಎಚ್ಚರವಿರಬೇಕು. ತನ್ನ ಶಕ್ತಿ, ಸಮಯ-ಸಂದರ್ಭಕ್ಕೆ ಅನು ಗುಣವಾಗಿ ವಿವೇಕದಿಂದ ಕರ್ತವ್ಯಗಳನ್ನು ಮಾಡುವ ಸ್ವಾತಂತ್ರ್ಯವು ಮನುಷ್ಯನಿಗಿದೆ. ಇದರಿಂದ ಜೀವಸಂಸ್ಕಾರವಾಗುತ್ತದೆ.

ಹಾಗಾಗಿ ವ್ಯಕ್ತಿಯು ತನ್ನದಾದ ಕರ್ತವ್ಯಗಳನ್ನು ಶಕ್ತಿಮೀರಿ ನಿಭಾಯಿಸಬೇಕು. ಯಶಸ್ಸಿಗಾಗಿ ಪ್ರಯತ್ನಶೀಲನಾಗಬೇಕು. ಯಾವುದೇ ಕೆಲಸವಾದರೂ ಆತ್ಮಸಂತೃಪ್ತಿಯನ್ನುಂಟು ಮಾಡು ವಂತೆ ಪೂರ್ಣಮನದಿಂದ ತೊಡಗಿಕೊಂಡರೆ ಒಡೆಯನಿಗದು ಇಷ್ಟವಾಗುತ್ತದೆ. ಅನುಭವವು ವಿಸ್ತರಿಸಿ, ಅರಿವಿನ ಹೂವರಳಿ ಜೀವವು ಪರಿಪಕ್ವವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net