ಐದಾರು ತಿಂಗಳಾದರೂ ರಾಜಧಾನಿಯಲ್ಲಿ ರಭಸವಾಗಿ ಸುರಿದಿಲ್ಲ ಮಳೆ-rain deficit

ರಾಜಧಾನಿಯಲ್ಲಿ ರಭಸವಾಗಿ ಮಳೆ ಸುರಿದಿಲ್ಲ
ರಾಜಧಾನಿಯಲ್ಲಿ ರಭಸವಾಗಿ ಮಳೆ ಸುರಿದಿಲ್ಲ
Published on
ಬೆಂಗಳೂರು:ಐದಾರು ತಿಂಗಳು ಕಳೆದರೂ ರಾಜಧಾನಿಯಲ್ಲಿ ರಭಸವಾಗಿ ಮಳೆ ಸುರಿದಿಲ್ಲ. ಕಳೆದ ವರ್ಷ ನೈಋತ್ಯ ಮಾನ್ಸೂನ್ ಮುಗಿದ ಬಳಿಕ ಈಶಾನ್ಯ ಮಾನ್ಸೂನ್ ಶುರುವಾಗಿತ್ತು. ಈ ಸಂದರ್ಭದಲ್ಲಿ ಅಂದರೆ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಒಂದೆರೆಡು ಬಾರಿ ಜೋರಾಗಿ ಮಳೆಯಾಗಿತ್ತು. ಅಲ್ಲಿಂದ ಇದುವರೆಗೆ ಸಿಲಿಕಾನ್ ಸಿಟಿಯಲ್ಲಿ ಬಿರುಸಾಗಿ ಮಳೆಯಾಗಿಲ್ಲ.
ಇದೀಗ ನಗರದಲ್ಲಿ ಬೇಸಿಗೆ ಬಿಸಿಲು ಹೆಚ್ಚಾಗುತ್ತಿದೆ. ಬೆಳಗ್ಗಿನ ವೇಳೆ ಕೆಂಡದಂತಹ ಬಿಸಿಲಿಗೆ ಜನರು ಬಸವಳಿಯುತ್ತಿದ್ದಾರೆ. ಗರಿಷ್ಠ ತಾಪಮಾನದಲ್ಲಿ ವಾಡಿಕೆಯಂತೆ 34.7 ಡಿ.ಸೆ. ಉಷ್ಣಾಂಶ ದಾಖಲಾಗಬೇಕಿತ್ತು. ಆದರೆ, 36.8 ಡಿ.ಸೆ. ಉಷ್ಣಾಂಶ ದಾಖಲಾಗುತ್ತಿದೆ. ಕನಿಷ್ಠ ತಾಪಮಾನದಲ್ಲಿ ವಾಡಿಕೆಯಂತೆ 22.2 ಡಿ.ಸೆ. ಉಷ್ಣಾಂಶ ಇರಬೇಕಿತ್ತು. ಆದರೆ, 24.2 ಡಿ.ಸೆ. ಉಷ್ಣಾಂಶ ವರದಿಯಾಗುತ್ತಿದೆ.
ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ ಸರಾಸರಿ 2-3 ಡಿ.ಸೆ. ಅಧಿಕವಾಗಿದೆ. ಇದರಿಂದಾಗಿ ನಗರದಲ್ಲಿ ಬಿಸಿಲಿನ ಪ್ರಖರತೆ ನೆತ್ತಿ ಸುಡುತ್ತಿದ್ದು, ನೂರು ಮೀಟರ್ ನಡೆಯುವಷ್ಟರಲ್ಲೇ ಜನರು ಆಯಾಸಗೊಳ್ಳುತ್ತಿದ್ದಾರೆ. ಜೊತೆಗೆ,ಬೆವರುನಿಂದ ಬಟ್ಟೆ ಒದ್ದೆಯಾಗಿಸಿದೆ. ರಾತ್ರಿ ವೇಳೆ ಸರಿಯಾಗಿ ನಿದ್ದೆ ಬಾರದೆ ಜನರು ಸಂಕಷ್ಟಪಡುವಂತಾಗಿದೆ. ಮುಂದಿನ 5 ದಿನ ನಗರದಲ್ಲಿ ಶುಭ್ರ ವಾತಾವರಣ ಕಂಡುಬರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 36 ಡಿ.ಸೆ. ಮತ್ತು 24 ಡಿ.ಸೆ.ಇರುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನವು ವಾಡಿಕೆಗಿಂತ 2-3 ಡಿ.ಸೆ. ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ತಲೆಸುತ್ತು, ವಾಕರಿಕೆದಂತಹ ಸಮಸ್ಯೆ:
ಉರಿ ಬಿಸಿಲುನಿಂದ ತಲೆಸುತ್ತು, ವಾಕರಿಕೆ, ಅತಿಯಾಗಿ ಬೆವರು ಅಥವಾ ಸ್ನಾಯು ಸೆಳೆತದಂತಹ ಸಮಸ್ಯೆಗಳು ಜನರಿಗೆ ಕಾಡುತ್ತಿವೆ. ವಿಪರೀತ ಶಾಖದಿಂದ ಹಗಲಿನ ವೇಳೆ ಓಡಾಡುವುದನ್ನು ಕಡಿಮೆ ಮಾಡಬೇಕು. ಸಾಧ್ಯವಾದಷ್ಟು ಹಗುರ ಅಥವಾ ಸಡಿಲವಾದ ಹತ್ತಿ ಬಟ್ಟೆ ಧರಿಸಬೇಕು. ಹೊರಗಡೆ ಓಡಾಡುವ ವೇಳೆ ಛತ್ರಿ, ಟೋಪಿ ಅಥವಾ ಕನ್ನಡಕ ಬಳಸಬೇಕು. ದೇಹ ತಂಪಾಗಿಸಲು ಎಳನೀರು, ಮಜ್ಜಿಗೆ, ನಿಂಬೆ ಪಾನೀಯ ಅಥವಾ ಓಆರ್‌ಎಸ್ ಸೇವಿಸಬೇಕು. ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ, ಸೊಪ್ಪು ಸೇರಿ ಇತರ ತರಕಾರಿ ಹೆಚ್ಚಾಗಿ ಸೇವಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ಆಗಾಗ್ಗೆ ನೀರು ಕುಡಿಯಬೇಕು.ಕಾಫಿ, ಟೀ, ಮದ್ಯಪಾನ ಮತ್ತು ಹೆಚ್ಚು ಸಕ್ಕರೆ ಅಂಶವಿರುವ ತಂಪುಪಾನೀಯಗಳಿಂದ ದೂರವಿರಬೇಕು. ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಅತಿಯಾದ ದೈಹಿಕ ಶ್ರಮದ ಕೆಲಸ ಮಾಡಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಮಳೆ ಮುನ್ಸೂಚನೆ ಇಲ್ಲ
ಬಿಸಿಲು ಜಾಸ್ತಿಯಾಗುತ್ತಿದ್ದಂತೆ ನಗರದಲ್ಲಿ ಮಳೆಯಾಗಬೇಕಿತ್ತು. ಆದರೆ, ಶುಷ್ಕ ವಾತಾವರಣ ಇರುವ ಕಾರಣ ಮಳೆ ಸುರಿಯುವ ಯಾವುದೇ ಲಕ್ಷಣಗಳು ಸದ್ಯಕ್ಕಿಲ್ಲ.ಪೂರ್ವ ಮುಂಗಾರಿನಲ್ಲಿ ಪ್ರಬಲವಾದ ಮಾರುತ ಇಲ್ಲದಿರುವುದು, ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿ ಅಥವಾ ತೇವಾಂಶ ಭರಿತ ಮೋಡ ಇಲ್ಲದಿರುವ ಕಾರಣದಿಂದ ಬೆಂಗಳೂರು ನಗರ, ಅದರ ಸುತ್ತಲಿನ ಪ್ರದೇಶಗಳಲ್ಲಿ ಮಳೆ ಬರುತ್ತಿಲ್ಲ. ದಕ್ಷಿಣ ಒಳನಾಡಿನಲ್ಲಿ ಮಳೆ ತರುವಂತಹ ಯಾವುದೇ ಸುಳಿಗಾಳಿ ಇಲ್ಲ.ಹಾಗಾಗಿ, ಉಷ್ಣಾಂಶ ಹೆಚ್ಚಳವಾಗಿದ್ದರೂ ವರುಣನ ಆಗಮನವಾಗುತ್ತಿಲ್ಲ. ನಗರದಲ್ಲಿ ಏ.27ರವರೆಗೆ ಮಳೆ ಮುನ್ಸೂಚನೆ ಇಲ್ಲ ಎನ್ನುತ್ತಾರೆ ಹಿರಿಯ ಹವಾಮಾನತಜ್ಞ ಡಾ. ಶ್ರೀನಿವಾಸರೆಡ್ಡಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net