ಚಂದ್ರಯಾನ-5ಕ್ಕೆ ಇಸ್ರೋ ಸಿದ್ಧತೆ

Chandrayaan-5
Chandrayaan-5
Published on
ಬೆಂಗಳೂರು: ಚಂದ್ರನ ಅಂಗಳದಿಂದ ಮಣ್ಣು ಮತ್ತು ಕಲ್ಲುಗಳ ಮಾದರಿಯನ್ನು ಭೂಮಿಗೆ ತರುವ ಚಂದ್ರಯಾನ-4 ಯೋಜನೆಯ ಬೆನ್ನಲ್ಲೇ, ಅಧಿಕ ತೂಕದ ಲ್ಯಾಂಡರ್ ಹಾಗೂ ಸುದೀರ್ಘ ಕಾರ್ಯಾಚರಣೆಯ ಅವಧಿಯನ್ನು ಹೊಂದಿರುವ ಚಂದ್ರಯಾನ-5 ಯೋಜನೆಗೆ ಇಸ್ರೋ ಸಿದ್ಧತೆ ನಡೆಸುತ್ತಿದೆ ಎಂದು ಅಧ್ಯಕ್ಷ ವಿ. ನಾರಾಯಣನ್ ಬುಧವಾರ ತಿಳಿಸಿದ್ದಾರೆ.
ಇಸ್ರೋದ 4ನೇ ಆವೃತ್ತಿಯ ‘ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಜಾಗೃತಿ ತರಬೇತಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶುಕ್ರ ಗ್ರಹದ ಅಧ್ಯಯನ ಮತ್ತು ಮಂಗಳ ಗ್ರಹದ ಮೇಲೆ ಇಳಿಯುವ ಭವಿಷ್ಯದ ಯೋಜನೆಗಳ ಕುರಿತೂ ಮಾಹಿತಿ ಹಂಚಿಕೊಂಡರು. ಸದ್ಯ ನಾವು ಚಂದ್ರಯಾನ ಸರಣಿಯ ಮುಂದುವರಿದ ಭಾಗದ ಬಗ್ಗೆ ಕಾರ್ಯಮಗ್ನರಾಗಿದ್ದೇವೆ.
ಚಂದ್ರಯಾನ-3ರ ಲ್ಯಾಂಡರ್ ಕಾರ್ಯಾಚರಣೆ ಅವಧಿ ಕೇವಲ 14 ದಿನಗಳಾಗಿತ್ತು. ಆದರೆ ಭವಿಷ್ಯದ ಯೋಜನೆಗಳಲ್ಲಿ ಲ್ಯಾಂಡರ್ ಜೀವಿತಾವಧಿ ಸುಮಾರು 100 ದಿನ ಇರಲಿದೆ. ಮುಂದಿನ ಯೋಜನೆಗಳಲ್ಲಿ ಸುಮಾರು 350 ಕೆ.ಜಿ ತೂಕದ ಬೃಹತ್ ರೋವರ್ ಬಳಸಲಾಗುವುದು ಎಂದು ವಿ. ನಾರಾಯಣನ್ ವಿವರಿಸಿದರು.

ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣ

ಮುಂದಿನ ಎರಡು ವರ್ಷಗಳಲ್ಲಿ ಗಗನಯಾನ ಮೂಲಕ ನಮ್ಮದೇ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಸುರಕ್ಷಿತವಾಗಿ ಕರೆತರುವತ್ತ ನಾವು ಶ್ರಮಿಸುತ್ತಿದ್ದೇವೆ. 2035ರ ವೇಳೆಗೆ ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮತ್ತು 2040ರ ವೇಳೆಗೆ ಚಂದ್ರನ ಮೇಲೆ ಮಾನವನನ್ನು ಇಳಿಸುವ ನಿಟ್ಟಿನಲ್ಲಿ ಈಗಾಗಲೆ ಸಿದ್ಧತೆ, ಚಿಂತನ-ಮಂಥನ ಆರಂಭವಾಗಿದೆ. ವಿಜ್ಞಾನ, ಭದ್ರತೆ, ಸಂವಹನ, ಮತ್ತು ಕೃಷಿ ಕ್ಷೇತ್ರಕ್ಕೆ ಪೂರಕವಾದ ಹಲವು ಯೋಜನೆಗಳು ರೂಪುಗೊಳ್ಳುತ್ತಿವೆ ಎಂದು ವಿ. ನಾರಾಯಣನ್ ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net