ತುಪ್ಪ ಅಮೃತವೋ ಅಥವಾ ಕೊಲೆಸ್ಟ್ರಾಲ್ ಹೆಚ್ಚಿಸುವ ವಿಷವೋ?

ಭಾರತೀಯ ಅಡುಗೆಮನೆ ಮತ್ತು ಆಯುರ್ವೆದ ಚಿಕಿತ್ಸೆಯಲ್ಲಿ ಸಾವಿರಾರು ವರ್ಷಗಳಿಂದ ತುಪ್ಪಕ್ಕೆ ದೈವಿಕ ಹಾಗೂ ಅಗ್ರಗಣ್ಯ ಸ್ಥಾನವಿದೆ. ಆದರೆ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಹುಟ್ಟಿಕೊಂಡ ಸ್ಯಾಚುರೇಟೆಡ್ ಕೊಬ್ಬು ಹೃದಯಾಘಾತಕ್ಕೆ ಕಾರಣ, ತುಪ್ಪ ತಿಂದರೆ ಕೊಲೆಸ್ಟ್ರಾಲ್ ಜಾಸ್ತಿಯಾಗುತ್ತದೆ ಎಂಬ ಅಪಪ್ರಚಾರದಿಂದಾಗಿ ಅನೇಕರು ತುಪ್ಪವನ್ನು ವಿಷದಂತೆ ನೋಡಲು ಆರಂಭಿಸಿದರು.
ತುಪ್ಪ ಅಮೃತವೋ ಅಥವಾ ಕೊಲೆಸ್ಟ್ರಾಲ್ ಹೆಚ್ಚಿಸುವ ವಿಷವೋ?
Published on: 

ಭಾರತೀಯ ಅಡುಗೆಮನೆ ಮತ್ತು ಆಯುರ್ವೆದ ಚಿಕಿತ್ಸೆಯಲ್ಲಿ ಸಾವಿರಾರು ವರ್ಷಗಳಿಂದ ತುಪ್ಪಕ್ಕೆ ದೈವಿಕ ಹಾಗೂ ಅಗ್ರಗಣ್ಯ ಸ್ಥಾನವಿದೆ. ಆದರೆ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಹುಟ್ಟಿಕೊಂಡ ಸ್ಯಾಚುರೇಟೆಡ್ ಕೊಬ್ಬು ಹೃದಯಾಘಾತಕ್ಕೆ ಕಾರಣ, ತುಪ್ಪ ತಿಂದರೆ ಕೊಲೆಸ್ಟ್ರಾಲ್ ಜಾಸ್ತಿಯಾಗುತ್ತದೆ ಎಂಬ ಅಪಪ್ರಚಾರದಿಂದಾಗಿ ಅನೇಕರು ತುಪ್ಪವನ್ನು ವಿಷದಂತೆ ನೋಡಲು ಆರಂಭಿಸಿದರು. ಆದರೆ ವಾಸ್ತವವೇನು? ಆಧುನಿಕ ವಿಜ್ಞಾನ ಮತ್ತು ಆಯುರ್ವೆದ ಶಾಸ್ತ್ರಗಳು ತುಪ್ಪದ ಶ್ರೇಷ್ಠತೆಯನ್ನು ಹೇಗೆ ಸಾಬೀತುಪಡಿಸುತ್ತಿವೆ? ಕೊಲೆಸ್ಟ್ರಾಲ್ ಮತ್ತು ತುಪ್ಪದ ನಡುವಿನ ತಪ್ಪು ಕಲ್ಪನೆಗಳ ಹಿಂದಿರುವ ನಿಜವಾದ ಸತ್ಯಗಳೇನು?

ಆಯುರ್ವೆದದ ಪ್ರಕಾರ ತುಪ್ಪವು ಬುದ್ಧಿಶಕ್ತಿ, ಗ್ರಹಣ ಸಾಮರ್ಥ್ಯ ಮತ್ತು ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಇದು ಜೀರ್ಣಾಗ್ನಿಯನ್ನು ಮಂದಗೊಳಿಸದೆ ಪ್ರಜ್ವಲಿಸುತ್ತದೆ ಮತ್ತು ದೇಹಕ್ಕೆ ನೈಸರ್ಗಿಕ ಶಕ್ತಿಯನ್ನು (ರೋಗನಿರೋಧಕ ಬಲವನ್ನು) ನೀಡುತ್ತದೆ. ಸಂತಾನೋತ್ಪತ್ತಿಗೆ ಅಗತ್ಯವಾದ ಶುಕ್ರ ಧಾತುವನ್ನು ಪೋಷಿಸುತ್ತದೆ. ಕಣ್ಣಿನ ದೃಷ್ಟಿಗೆ ಕೂಡಾ ತುಪ್ಪ ಅತ್ಯಂತ ಹಿತಕರ. ಇದು ಶರೀರಕ್ಕೆ ತಂಪು ನೀಡುವ ಮತ್ತು ವೃದ್ಧಾಪ್ಯವನ್ನು ದೂರವಿಟ್ಟು ಯೌವನವನ್ನು ಕಾಪಾಡುವ ಅಮೃತ ಸದೃಶ ದ್ರವ್ಯ. ತುಪ್ಪಕ್ಕೆ ಸಂಸ್ಕಾರವನ್ನು ಗ್ರಹಿಸುವ ಅದ್ಭುತ ಗುಣವಿದೆ. ಇದನ್ನು ಯಾವ ಮೂಲಿಕೆಗಳೊಂದಿಗೆ ಸಂಸ್ಕರಿಸುತ್ತೇವೆಯೋ, ಆ ಔಷಧೀಯ ಸತ್ವವನ್ನು ದೇಹದ ಅತ್ಯಂತ ಆಳವಾದ ಜೀವಕೋಶಗಳಿಗೆ ತಲುಪಿಸುವ ಶಕ್ತಿ ತುಪ್ಪಕ್ಕಿದೆ. ತುಪ್ಪವು ಜಿಡ್ಡಿನಂಶದಿಂದ ವಾತವನ್ನೂ, ತಂಪು ಗುಣದಿಂದ ಪಿತ್ತವನ್ನೂ ಶಮನಗೊಳಿಸುತ್ತದೆ. ಸೂಕ್ತ ಔಷಧಗಳೊಂದಿಗೆ ಸಂಸ್ಕರಿಸಿದಾಗ ಕಫವನ್ನೂ ನಿವಾರಿಸುವ ಸಾಮರ್ಥ್ಯವನ್ನು ಇದು ಪಡೆಯುತ್ತದೆ.

ಈಗೀಗ ಆಧುನಿಕ ವಿಜ್ಞಾನವು ತುಪ್ಪವನ್ನು ಒಂದು ‘ಟೈಮ್ೆಸ್ ಸೂಪರ್​ಫುಡ್’ (ಅದ್ಭುತ ನೈಸರ್ಗಿಕ ಆಹಾರ) ಎಂದು ಒಪ್ಪಿಕೊಳ್ಳುತ್ತಿದೆ. ತುಪ್ಪದಲ್ಲಿ ಕರುಳಿಗೆ ಅತ್ಯಗತ್ಯವಾದ ಶಾರ್ಟ್-ಚೈನ್ ಫ್ಯಾಟಿ ಆಸಿಡ್ ಆದ ಬ್ಯೂಟರಿಕ್ ಆಮ್ಲವಿದೆ. ಇದು ದೊಡ್ಡ ಕರುಳಿನ ಜೀವಕೋಶಗಳಿಗೆ ನೇರ ಪೋಷಣೆ ನೀಡಿ, ಕರುಳಿನ ಒಳಪದರವನ್ನು ಬಲಪಡಿಸುತ್ತದೆ. ಇದರಿಂದಾಗಿ ಕರುಳಿನಿಂದ ಹಾನಿಕಾರಕ ವಿಷಕಾರಿ ಅಂಶಗಳು ದೇಹದ ರಕ್ತಕ್ಕೆ ಸೇರುವುದು ತಪ್ಪುತ್ತದೆ ಹಾಗೂ ದೇಹದ ಆಂತರಿಕ ಉರಿಯೂತ ಕಡಿಮೆಯಾಗುತ್ತದೆ.

ತುಪ್ಪದಲ್ಲಿ ನೈಸರ್ಗಿಕವಾಗಿ ಸಿಎಲ್​ಎ ಇದೆ. ಇದು ದೇಹದಲ್ಲಿ ಹಾನಿಕಾರಕ ಕೊಬ್ಬು ಶೇಖರಣೆಯಾಗುವುದನ್ನು ತಡೆಯುವುದಲ್ಲದೆ, ಶೇಖರವಾದ ಕೊಬ್ಬನ್ನು ಕರಗಿಸಲು ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಪ್ರತಿಬಂಧಿಸಲು ನೆರವಾಗುತ್ತದೆ. ಅಮೆರಿಕ ಮುಂತಾದ ದೇಶಗಳಲ್ಲಿ ಇಂದು ಸಿಎಲ್​ಎ ಮಾತ್ರೆಗಳನ್ನು ಅಧಿಕ ಬೆಲೆಗೆ ತೂಕ ಇಳಿಕೆಗಾಗಿ ಮಾರಾಟ ಮಾಡಲಾಗುತ್ತಿದೆ; ಆದರೆ ಇದು ನಮ್ಮ ದೇಶದ ಶುದ್ಧ ತುಪ್ಪದಲ್ಲಿ ನೈಸರ್ಗಿಕವಾಗಿಯೇ ಲಭ್ಯವಿದೆ.

ವಿಟಮಿನ್ ಎ, ಡಿ, ಇ ಮತ್ತು ಕೆ ಗಳು ನೀರಿನಲ್ಲಿ ಕರಗುವುದಿಲ್ಲ; ಅವು ದೇಹಕ್ಕೆ ಹೀರಿಕೆಯಾಗಲು ಆರೋಗ್ಯಕರ ಕೊಬ್ಬಿನ ಮಾಧ್ಯಮ ಬೇಕು. ತುಪ್ಪವು ಈ ಜೀವಸತ್ವಗಳನ್ನು ಹೀರಿಕೊಳ್ಳಲು ಅತ್ಯುತ್ತಮ ಮಾಧ್ಯಮವಾಗಿದೆ. ಒಗ್ಗರಣೆ ಅಥವಾ ಅಡುಗೆಗೆ ತುಪ್ಪವನ್ನು ಬಳಸುವುದು ಅತ್ಯಂತ ಸುರಕ್ಷಿತ.

ತಪ್ಪು ಕಲ್ಪನೆಗಳು ಮತ್ತು ನೈಜತೆ: ತುಪ್ಪ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗಿ ರಕ್ತನಾಳಗಳು ಬ್ಲಾಕ್ ಆಗುತ್ತವೆ ಎಂಬುದು ಬಹುದೊಡ್ಡ ತಪ್ಪು ಕಲ್ಪನೆ. ವೈಜ್ಞಾನಿಕವಾಗಿ ಇದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ರಕ್ತ ಪರೀಕ್ಷೆಯಲ್ಲಿ ಬರುವ ಎಲ್ ಡಿಎಲ್ ಸಂಖ್ಯೆಯಷ್ಟೇ ಮುಖ್ಯವಲ್ಲ; ಅದರಲ್ಲಿ ಪ್ಯಾಟರ್ನ್ ಎ ಮತ್ತು ಪ್ಯಾಟರ್ನ್ ಬಿ ಎಂದು ಎರಡು ವಿಧಗಳಿವೆ. ತುಪ್ಪದಂತಹ ಆರೋಗ್ಯಕರ ಸ್ಯಾಚುರೇಟೆಡ್ ಕೊಬ್ಬು ಸೇವಿಸಿದಾಗ ಈ ಪ್ಯಾಟರ್ನ್ ಎ ದಲ್ಲಿರುವ ನಿರುಪದ್ರವಿ ಕಣಗಳು ಹೆಚ್ಚಾಗುತ್ತವೆ.

ನಿಜವಾದ ಅಪರಾಧಿ ಯಾರು?: ಪ್ಯಾಟರ್ನ್ ಬಿ ಕಣಗಳು ಹೆಚ್ಚಾಗುವುದು ತುಪ್ಪದಿಂದಲ್ಲ! ಬದಲಿಗೆ ಅತಿಯಾದ ಸಕ್ಕರೆ, ಸಂಸ್ಕರಿಸಿದ ಮೈದಾ, ಪಾಲಿಶ್ ಮಾಡಿದ ಅನ್ನ, ಬೇಕರಿ ತಿನಿಸುಗಳು ಮತ್ತು ರಿಫೈನ್ಡ್ ಸೀಡ್ ಆಯಿಲ್​ಗಳನ್ನು ಸೇವಿಸುವುದರಿಂದ. ಅಧಿಕ ಕಾಬೋಹೈಡ್ರೇಟ್ ಮತ್ತು ದೈಹಿಕ ಶ್ರಮವಿಲ್ಲದ ಜೀವನಶೈಲಿಯೇ ರಕ್ತನಾಳ ಬ್ಲಾಕ್ ಆಗಲು ಮೂಲ ಕಾರಣ. ಯುರೋಪಿಯನ್ ಜರ್ನಲ್ ಆಫ್ ನ್ಯೂಟ್ರಿಷನಲ್ಲಿ ಪ್ರಕಟವಾದ ವಿಸõತ ಸಂಶೋಧನಾ ವರದಿಯ ಪ್ರಕಾರ, ಡೈರಿ ಉತ್ಪನ್ನಗಳ ಕೊಬ್ಬು (ಹಾಲು, ಬೆಣ್ಣೆ, ತುಪ್ಪ) ಬೊಜ್ಜು ಅಥವಾ ಹೃದಯರೋಗಕ್ಕೆ ಕಾರಣವಾಗುವುದಿಲ್ಲ, ಬದಲಿಗೆ ಅವು ಮೆಟಬಾಲಿಕ್ ರೋಗಗಳ ಅಪಾಯವನ್ನು ಕಡಿಮೆ ಮಾಡಲು ನೆರವಾಗುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net