ಮಕ್ಕಳ ಶೂ, ಸಾಕ್ಸ್ ಖರೀದಿಯಲ್ಲಿ ಅಕ್ರಮ

childrens shoes and socks
childrens shoes and socks
Published on

ಪ್ರಮುಖ ಮುಖ್ಯಾಂಶಗಳು

  • 16 ಜಿಲ್ಲೆಗಳಲ್ಲಿ ಲೋಕಾ ಪರಿಶೀಲನೆ
  • ಎರಡು ವಾರದಲ್ಲಿ ವರದಿ ಸಲ್ಲಿಕೆಗೆ ಸೂಚನೆ
  • ಡಿಡಿಪಿಐ, ಬಿಇಒ ವಿರುದ್ಧ ಸುಮೋಟೊ
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಸಕ್ತ ಸಾಲಿನಲ್ಲಿ ವಿತರಿಸಿರುವ ಶೂ, ಸಾಕ್ಸ್ ಗುಣಮಟ್ಟ ಕಳಪೆಯಾಗಿದ್ದರೆ ಬಗ್ಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ದಾಖಲಿಸಿಕೊಂಡಿದ್ದ ಸುಮೋಟೊ ಪ್ರಕರಣದ ಸಂಬಂಧ ಶನಿವಾರ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಬಾಗಲಕೋಟೆ, ಬೀದರ್, ಹಾವೇರಿ, ಬೆಳಗಾವಿ, ಮಂಡ್ಯ, ದಕ್ಷಿಣ ಕನ್ನಡ, ದಾವಣಗೆರೆ, ಕಲಬುರಗಿ, ತುಮಕೂರು, ಉಡುಪಿ, ವಿಜಯನಗರ, ಕೊಪ್ಪಳ ಸೇರಿ 16 ಜಿಲ್ಲೆಗಳಲ್ಲಿ ಲೋಕಾಯುಕ್ತರು ದಾಳಿ ನಡೆಸಿ, ಶೂ ಮತ್ತು ಸಾಕ್ಷ ವಿತರಣೆ ಮಾಡಿರುವ ಖಾಸಗಿ ಸಂಸ್ಥೆಗಳು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಪರಿಶೀಲನೆ ನಡೆಸಿದ್ದಾರೆ.
ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಲಾದ ಶೂ, ಸಾಕ್ಷಗಳು ಕಳಪೆ ಗುಣಮಟ್ಟದ ಕಚ್ಚಾ ವಸ್ತುಗಳಿಂದ ತಯಾರಾಗಿದ್ದು, ಕೆಲವೇ ದಿನಗಳ ಬಳಕೆಯಲ್ಲೇ ಹರಿದು ಹೋಗುತ್ತಿವೆ. ಕಳೆದ ವರ್ಷ ವಿತರಿಸಲಾಗಿದ್ದ ಶೂಗಳಿಗೆ ಹೋಲಿಸಿದರೆ ಈ ಬಾರಿ ನೀಡಲಾಗಿರುವ ಶೂಗಳ ಗುಣಮಟ್ಟ ಕಡಿಮೆಯಾಗಿದ್ದು, ಖರೀದಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪವೂ ಕೇಳಿಬಂದಿತ್ತು.
ಶಾಲಾ ಮಕ್ಕಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಕಳಪೆ ಗುಣಮಟ್ಟದ ಶೂ ಗಳನ್ನು ವಿತರಿಸಿರುವ ಆರೋಪವು ಮಕ್ಕಳ ಹಕ್ಕುಗಳ ವಿಚಾರಕ್ಕೂ ಸಂಬಂಧಿಸಿದೆ. ಈ ಹಿನ್ನೆಲೆಯಲ್ಲಿ ವಿಷಯವು ಸಂವಿಧಾನದ 21ಎ ವಿಧಿಯ ಆಶಯ ಹಾಗೂ ಶಿಕ್ಷಣದ ಹಕ್ಕಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಿಗೆ ವಿರುದ್ಧವಾಗಿರುವ ಸಾಧ್ಯತೆ ಇದೆ ಎಂದು ಲೋಕಾಯುಕ್ತರು ಪರಿಗಣಿಸಿದ್ದಾರೆ.
ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದ್ದಾರೆ. ಉಪಲೋಕಾಯುಕ್ತ-2ರ ವ್ಯಾಪ್ತಿಗೆ ಬರುವ 16 ಜಿಲ್ಲೆಗಳಲ್ಲಿ, ಸಂಬಂಧಪಟ್ಟ ಉಪನಿರ್ದೇಶಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಪ್ರತ್ಯೇಕ ದೂರುಗಳನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
2 ವಾರಗಳಲ್ಲಿ ಪ್ರಾಥಮಿಕ ತನಿಖಾ ವರದಿ
ಸಂಬಂಧಪಟ್ಟ ಜಿಲ್ಲೆಗಳ ಪೊಲೀಸ್ ಅಧೀಕ್ಷಕರು ಮತ್ತು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಪ್ರಾಥಮಿಕ ತನಿಖೆ ನಡೆಸಿ ಎರಡು ವಾರದಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಇದಲ್ಲದೆ, ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಈ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡುವಂತೆ ಲೋಕಾಯುಕ್ತರು ಸೂಚಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net