ಮಧುಗಿರಿ: ಯುವ ಪೀಳಿಗೆ ಶಿಕ್ಷಣದ ಜತೆಗೆ ರಾಜಕೀಯ ವಿಷಯಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡು ದೇಶದ ಉಜ್ವಲ ಭವಿಷ್ಯದ ನಿರ್ವಾತೃಗಳಾಗಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕ, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಮಂಗಳವಾರ ರಾಜ್ಯ ಆರ್ಥಿಕ ಬಜೆಟ್ ಅಧಿವೇಶನ, ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪ ವೀಕ್ಷಣೆಗೆ ಬಂದಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯವೈಖರಿಯನ್ನು ನೇರವಾಗಿ ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಕಲಾಪ ವೀಕ್ಷಣೆ ಜ್ಞಾನವರ್ಧನೆಗೆ ಸಹಕಾರಿಯಾಗಲಿದೆ, ಸಾಮಾಜಿಕ ಸಮಸ್ಯೆಗಳ ಅರಿವು ಹೊಂದಿ ಪ್ರಶ್ನೆಗಳನ್ನು ಕೇಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು, ಉದ್ಯೋಗ ಆಧಾರಿತ ಶಿಕ್ಷಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಜಿಟಿಟಿಸಿ ಸ್ಥಾಪನೆ ಮಾಡಲಾಗಿದೆ, ಉದ್ಯೋಗ ಮೇಳ, ಸಾರಿಗೆ ವ್ಯವಸ್ಥೆ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಇವುಗಳನ್ನು ಬಳಸಿಕೊಂಡು ಉತ್ತಮ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದರು.
ಒಟ್ಟು 170 ವಿದ್ಯಾರ್ಥಿಗಳು, 14 ಬೋಧಕರು ಕಲಾಪ ವೀಕ್ಷಣೆಗೆ ತೆರಳಿದ್ದರು.