ವಿನೂತನ ಕಾರ್ಯಕ್ರಮಗಳು ಕಲಿಕೆಗೆ ಸಹಕಾರಿ / DODDABALLAPUR
ದೊಡ್ಡಬಳ್ಳಾಪುರದ ದಿ ನ್ಯಾಷನಲ್ ಪೆಡ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಇನೋವೆಟಿವ್ ಅರೇನಾ ಕಾರ್ಯಕ್ರಮದಲ್ಲಿ ಮಕ್ಕಳು ತಯಾರಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಶಾಸಕ ಧೀರಜ್ ಮುನಿರಾಜು ವೀಕ್ಷಿಸಿದರು. ಎಸ್ಜಿಸಿಬಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಸಿ.ನಾಗರಾಜು, ಕಾರ್ಯದರ್ಶಿ ಸತೀಶ್ ರಾಜ್, ಮುಖ್ಯ ಶಿಕ್ಷಕಿ ರಶ್ಮಿ, ವಿದ್ಯಾರ್ಥಿಗಳು, ಪಾಲಕರು ಇದ್ದರು.
ದೊಡ್ಡಬಳ್ಳಾಪುರ : ಶಾಲಾ ಮಕ್ಕಳಿಗೆ ಬಾಲ್ಯದಿಂದಲೇ ವಿಜ್ಞಾನದ ವಿನೂತನ ಕಾರ್ಯಕ್ರಮ ಆಯೋಜಿಸುವುದು ಕಲಿಕೆಗೆ ಸಹಕಾರಿಯಾಗುತ್ತದೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ನಗರದ ದಿ ನ್ಯಾಷನಲ್ ಪೆಡ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಇನೋವೆಟಿವ್ ಅರೇನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಶಾಲೆಗಳ ಪಾತ್ರ ಅಪಾರ. ಶಾಲೆಗಳು ಕೇವಲ ಓದು ಬರಹಕಷ್ಟೇ ಸೀಮಿತವಾಗೊಳ್ಳುವ ಬದಲು ಮಕ್ಕಳಿಗೆ ವಿಭಿನ್ನ ಕಲಿಕೆಯ ಜತೆಗೆ ಹೊಸ ಹೊಸ ವಿಷಯಗಳನ್ನು ಪರಿಚಯಿಸಿಬೇಕು ಎಂದರು. ವೈಜ್ಞಾನಿಕ ಮನೋಭಾವ ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು. ಆಗ ಮಾತ್ರ ಹೊಸ ಅನುಭವಗಳು ಮಕ್ಕಳಲ್ಲಿನ ಚಿಂತನಾ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ಶಾಲಾ ಕಾರ್ಯದರ್ಶಿ ಸತೀಶ್ ಮಾತನಾಡಿ, ಮಕ್ಕಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ಅಧ್ಯಯನ ಮಾಡುವುದಕ್ಕಿಂತ ಇಂತಹ ವಿನೂತನ ಕಾರ್ಯಕ್ರಮಗಳಲ್ಲಿ ಸ್ವಯಂ ಪಾಲ್ಗೊಳ್ಳುವುದರಿಂದ ಹಲವು ವಿಷಯಗಳ ಪರಿಚಯವಾಗುತ್ತದೆ. ವಿಜ್ಞಾನ ವಸ್ತುಪ್ರದರ್ಶನ ಮಕ್ಕಳ ಮೆದುಳನ್ನು ಚುರುಕುಗೊಳಿಸಲು ಸಹಕರಿಸುತ್ತವೆ. ಉತ್ತಮ ಬುನಾದಿಯನ್ನು ಬಾಲ್ಯದ ಕಲಿಕೆಯಲ್ಲೇ ಹಾಕುವುದರಿಂದ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಹೇಳಿದರು. ಶಾಲೆಯಲ್ಲಿ ಮಕ್ಕಳು ತಯಾರಿಸಿದ್ದ ವಿಭಿನ್ನ ಮಾದರಿಯ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮ ನಡೆಯಿತು.