ಬರ ರಾಜ್ಯ ಸರ್ಕಾರದಿಂದ ಅನ್ಯಾಯ

ರವಿಕುಮಾರ
ರವಿಕುಮಾರ
Published on

ಪ್ರಮುಖ ಮುಖ್ಯಾಂಶಗಳು

  • ಎಂಎಲ್‌ಸಿ ಎನ್. ರವಿಕುಮಾರ ಆರೋಪ
  • ಗೃಹ ಸಚಿವರ ರಾಜೀನಾಮೆಗೆ ಒತ್ತಾಯ
ಯಾದಗಿರಿ: ರಾಜ್ಯದ ಬಹುತೇಕ ಜಿಲ್ಲಾ ಗಳಲ್ಲಿ ಬರ ಆವರಿಸಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆದರೂ ರಾಜ್ಯ ಸರ್ಕಾರ ಕೇವಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುವ ಮೂಲಕ ರೈತರಿಗೆ ಅನ್ಯಾಯ ಎಸಗಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಆರೋಪಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸಂಪೂರ್ಣ ಬರ ಪರಿಸ್ಥಿತಿ ಇದೆ ಎಂದು ಸ್ವತಃ ಸಚಿವರು, ಶಾಸಕರು ಮಾತನಾಡುತ್ತಿದ್ದಾರೆ. ಕೆರೆ-ಕಟ್ಟೆಗಳು, ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಉಕ ಪ್ರದೇಶದಲ್ಲಿ ಸಂಪೂರ್ಣ ಬರದ ತೀವ್ರತೆ ಹೆಚ್ಚಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಽಯಲ್ಲಿ ೨೦೨೨ರಲ್ಲಿ ಬರ ಪರಿಸ್ಥಿತಿ ಎದುರಾದಾಗ ಮಳೆಯಾಶ್ರೀತ ಜಮೀನಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಸೇರಿ ಪ್ರತಿ ಎಕರೆಗೆ ೧೮,೫೦೦ರೂ.ಹಾಗೂ ನೀರಾವರಿ ಜಮೀನಿಗೆ ೨೭,೫೦೦ ರೂ. ಪರಿಹಾರ ನೀಡಲಾಗಿತ್ತು. ಅದೇ ಮಾದರಿಯಲ್ಲಿ ಈಗಿನ ಸರ್ಕಾರವೂ ರೈತರಿಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ಪ್ರಕರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬಂದಿತು. ಇದೇ ರೀತಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲೂ ಅಕ್ರಮ ನಡೆದಿದೆ ಎಂಬ ಆರೋಪಗಳಿದ್ದು, ಎಇಇ ನೇಮಕಾತಿ ಪರೀಕ್ಷೆಯಲ್ಲಿ ೨೪ ಅಭ್ಯರ್ಥಿಗಳನ್ನು ರೆಸಾರ್ಟ್ನಲ್ಲಿ ಇರಿಸಿ ಪರೀಕ್ಷೆ ನಡೆಸಿರುವುದು ಗಂಭೀರ ವಿಚಾರವಾಗಿದೆ. ಹೀಗಾಗಿ ಈ ಸರ್ಕಾರ ಸಂರ್ಪೂಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಅವರು ದೂರಿದರು.
ಪ್ರತಿಯೊಬ್ಬ ಅಭ್ಯರ್ಥಿಯಿಂದ ೮೦ ಲಕ್ಷ ರೂ.ಪಡೆದಿರುವ ಆರೋಪವಿದ್ದು, ಇಂತಹ ಆರೋಪ ಬಂದಿರುವಾಗ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಸರ್ಕಾರ ತನಿಖೆ ನಡೆಸಿ ಸತ್ಯವನ್ನು ರಾಜ್ಯದ ಜನರ ಮುಂದೆ ಇಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ರಾಜ್ಯ ಬಿಜೆಪಿ ಕಾರ್ಯಕಾರಿ ಸದಸ್ಯ ಮಹೇಶರೆಡ್ಡಿ ಮುದ್ನಾಳ್, ಪ್ರಧಾನ ಕಾರ್ಯದರ್ಶಿ ಪರಶುರಾಂ ಕುರಕುಂದಾ, ಮುಖಂಡ ವೆಂಕಟರೆಡ್ಡಿ ಅಬ್ಬೆತುಮಕೂರು ಇತರರಿದ್ದರು.

ವಿಶೇಷ ಅಧಿವೇಶನದಲ್ಲಿ ಪ್ರಮುಖ ಸಮಸ್ಯೆ ಚರ್ಚೆ

ವಿಧಾನಮಂಡಲ ಮೂರು ದಿನಗಳ ವಿಶೇಷ ಅಽವೇಶನದಲ್ಲಿ ರಾಜ್ಯ ಸರ್ಕಾರದ ಪ್ರಮುಖ ವೈಫೈಲ್ಯಗಳ ಕುರಿತು ಬಿಜೆಪಿ ಚರ್ಚೆ ನಡೆಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಬರ ಪರಿಸ್ಥಿತಿ, ರೈತರ ಸಂಕಷ್ಟ, ಕುಡಿಯುವ ನೀರಿನ ಸಮಸ್ಯೆ ಹಾಗೂ ಬರ ನಿರ್ವಹಣೆಯಲ್ಲಿ ಸರ್ಕಾರದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಕೆಪಿಎಸ್‌ಸಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಪ್ರಸ್ತಾಪಿಸಲಾಗುವುದು. ನೇಮಕಾತಿ ವ್ಯವಸ್ಥೆಯಲ್ಲಿನ ಅಕ್ರಮ ಹಾಗೂ ಯುವಕರಿಗೆ ಆಗಿರುವ ಅನ್ಯಾಯದ ಕುರಿತು ಸರ್ಕಾರಕ್ಕೆ ಪ್ರಶ್ನಿಸಲಾಗುವುದು ಎಂದರು.
ಅಲ್ಲದೆ ಎಸ್‌ಸಿ-ಎಸ್‌ಟಿ ಒಳ ಮೀಸಲಾತಿ ವಿಚಾರವೂ ಚರ್ಚೆಯಾಗಲಿದೆ. ಬಿಜೆಪಿ ಸರ್ಕಾರದ ಅವಽಯಲ್ಲಿ ಎಸ್‌ಸಿ ಒಳ ಮೀಸಲಾತಿಯನ್ನು ಶೇ.೧೫ರಿಂದ ಶೇ.೧೭ಕ್ಕೆ ಹಾಗೂ ಎಸ್‌ಟಿ ಮೀಸಲಾತಿಯನ್ನು ಶೇ.೩ರಿಂದ ಶೇ.೭ಕ್ಕೆ ಹೆಚ್ಚಿಸಿದ್ದ ವಿಚಾರವನ್ನು ಪ್ರಸ್ತಾಪಿಸಿ, ನಂತರದ ಬದಲಾವಣೆಗಳ ಬಗ್ಗೆ ಸರ್ಕಾರದ ನಿಲುವು ಕೇಳಲಾಗುವುದು. ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರದ ಕ್ರಮದ ಬಗ್ಗೆ ಬಿಜೆಪಿ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದೆ ಎಂದು ರವಿಕುಮಾರ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net