ಆರು ಸಾಧಕರಿಗೆ ಇನ್ಫೋಸಿಸ್ ಪ್ರಶಸ್ತಿ ಪ್ರಕಟ

ತಲಾ 1 ಲಕ್ಷ ಡಾಲರ್ ನಗದು ಬಹುಮಾನ
Karthik A. Sastry, Swaroon Kumar, Gautam Bhatia, Isha Jain, Riddhipratim Basu, and Manoj Kumar Joshi were the recipients of the Infosys Prize.
ಕಾರ್ತಿಕ್ ಎ.ಶಾಸ್ತ್ರಿ, ಸ್ವರೂನ್ ಕುಮಾರ್, ಗೌತಮ್ ಭಾಟಿಯಾ, ಇಶಾ ಜೈನ್, ರಿದ್ಧಿಪ್ರತಿಮ್ ಬಸು ಹಾಗೂ ಮನೋಜ್ ಕುಮಾರ್ ಜೋಶಿ ಅವರು ಇನ್ಫೋಸಿಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ
Published on: 

ಬೆಂಗಳೂರು : ದೇಶದ ಪ್ರತಿಷ್ಠಿತ ಸಂಶೋಧನಾ ಗೌರವಗಳಲ್ಲಿ ಒಂದಾದ 2026ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ವಿಜ್ಞಾನ, ತಂತ್ರಜ್ಞಾನ, ಮಾನವಿಕ ಮತ್ತು ಸಮಾಜ ವಿಜ್ಞಾನ ಸೇರಿದಂತೆ ಆರು ಕ್ಷೇತ್ರಗಳಲ್ಲಿ ಮಹತ್ವದ ಸಂಶೋಧನೆ ನಡೆಸಿರುವ ಆರು ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದವರಿಗೆ ಚಿನ್ನದ ಪದಕ, ಪ್ರಶಸ್ತಿ ಪತ್ರ ಹಾಗೂ ತಲಾ 1 ಲಕ್ಷ ಯುಎಸ್ ಡಾಲರ್ (ಸುಮಾರು 94 ಲಕ್ಷ ರೂ.) ನಗದು ಬಹುಮಾನ ನೀಡಲಾಗುತ್ತದೆ.

ಅರ್ಥಶಾಸ್ತ್ರ ವಿಭಾಗದಲ್ಲಿ ಅಮೆರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಕಾರ್ತಿಕ್ ಎ.ಶಾಸ್ತ್ರಿ, ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯದ ಸ್ವರೂನ್ ಕುಮಾರ್, ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದಲ್ಲಿ ಕಾನೂನು ತಜ್ಞ ಗೌತಮ್ ಭಾಟಿಯಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜೀವ ವಿಜ್ಞಾನ ವಿಭಾಗದಲ್ಲಿ ಇಶಾ ಜೈನ್, ಗಣಿತ ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ರಿದ್ಧಿಪ್ರತಿಮ್ ಬಸು ಹಾಗೂ ಭೌತ ವಿಜ್ಞಾನ ವಿಭಾಗದಲ್ಲಿ ಸಿಂಗಾಪುರದ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಆ್ಯಂಡ್ ಡಿಸೈನ್‌ನ ಮನೋಜ್ ಕುಮಾರ್ ಜೋಶಿ ಆಯ್ಕೆಯಾಗಿದ್ದಾರೆ.

ಯುವ ಸಂಶೋಧಕರಿಗೆ ಆದ್ಯತೆ

2009ರಲ್ಲಿ ಸ್ಥಾಪನೆಯಾದ ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನವು ಪ್ರತಿವರ್ಷ ಈ ಪ್ರಶಸ್ತಿ ನೀಡುತ್ತಾ ಬಂದಿದ್ದು, 2024ರಿಂದ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಂಶೋಧಕರಿಗೆ ಆದ್ಯತೆ ನೀಡುತ್ತಿದೆ.

ಅಂತರರಾಷ್ಟ್ರೀಯ ತಜ್ಞರ ಸಮಿತಿ ವಿಜೇತರನ್ನು ಆಯ್ಕೆ ಮಾಡಿದ್ದು, ದೆ. ಪ್ರತಿಷ್ಠಾನದ ಅಧ್ಯಕ್ಷ ಶ್ರೀನಾಥ್ ಬಾಟ್ನಿ, ಕೆ.ದಿನೇಶ್, ಕ್ರಿಸ್ ಗೋಪಾಲಕೃಷ್ಣನ್, ಪ್ರತಿಮಾ ಮೂರ್ತಿ ಮತ್ತು ಎಸ್.ಡಿ. ಶಿಬುಲಾಲ್ ವಿಜೇತರ ಹೆಸರು ಪ್ರಕಟಿಸಿದರು. ನಾರಾಯಣ ಮೂರ್ತಿ ವಿಡಿಯೊ ಸಂದೇಶದ ಮೂಲಕ ಪುರಸ್ಕೃತರನ್ನು ಅಭಿನಂದಿಸಿದರು.

ಹವಾಮಾನ ಬದಲಾವಣೆ ಮತ್ತು ತಾಂತ್ರಿಕ ಆವಿಷ್ಕಾರಗಳ ಕುರಿತ ಸಂಶೋಧನೆ, ವೈರ್‌ಲೆಸ್ ತಂತ್ರಜ್ಞಾನ, ಸಂವಿಧಾನ ಮತ್ತು ಕಾನೂನು ಅಧ್ಯಯನ, ಜೀವಕೋಶಗಳಲ್ಲಿ ಆಮ್ಲಜನಕದ ಪಾತ್ರ, ಸಂಭವನೀಯತಾ ಸಿದ್ಧಾಂತ ಹಾಗೂ ಕ್ವಾಂಟಂ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಮಹತ್ವದ ಕೊಡುಗೆಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.