ಪಿಎಂ ಸೇತು ಯೋಜನೆಯಲ್ಲಿ ಕೈಗಾರಿಕೆಗಳ ಸಹಭಾಗಿತ್ವ ಅಗತ್ಯ: ಎಂ.ಬಿ. ಪಾಟೀಲ ಬೆಂಗಳೂರು, ಕಲಬುರಗಿ ಹಬ್‌ನ ತಲಾ ನಾಲ್ಕು ಐಟಿಐಗಳ ಉನ್ನತೀಕರಣಕ್ಕೆ ಚಾಲನೆ
mb patil
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರಾಜ್ಯದಲ್ಲಿ ಒಟ್ಟು 12 ಹಬ್‌ಗಳಡಿ 48 ಐಟಿಐಗಳನ್ನು ಅಭಿವೃದ್ಧಿಪಡಿಸುವ ಗುರಿ
ವಾರ್ಷಿಕ ಕನಿಷ್ಠ ₹500 ಕೋಟಿ ವಹಿವಾಟು ಮತ್ತು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಯೋಜನೆಯಲ್ಲಿ ಪಾಲ್ಗೊಳ್ಳಬಹುದು
ಬೆಂಗಳೂರು:
ರಾಜ್ಯದ 48 ಸರ್ಕಾರಿ ಐಟಿಐಗಳನ್ನು ಉನ್ನತೀಕರಿಸುವ ಮಹತ್ವಾಕಾಂಕ್ಷೆಯ ಪಿಎಂ ಸೇತು ಯೋಜನೆಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ ಕೈಗಾರಿಕೆಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಕರೆ ನೀಡಿದರು.
ಕರ್ನಾಟಕ ಉದ್ಯೋಗ ಮಿತ್ರದ ಸಭಾಂಗಣದಲ್ಲಿ ಪಿಎಂ ಸೇತು ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೈಗಾರಿಕಾ ಸಹಭಾಗಿತ್ವ ಕುರಿತ ಸಭೆಯಲ್ಲಿ ಮಾತನಾಡಿ, ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸುವ ಮೂಲಕ ಕೈಗಾರಿಕೆಗಳು ತಮಗೆ ಅಗತ್ಯವಿರುವ ಕೌಶಲ್ಯಯುತ ಮಾನವ ಸಂಪನ್ಮೂಲವನ್ನು ತಾವೇ ರೂಪಿಸಿಕೊಳ್ಳುವ ಅವಕಾಶ ಈ ಯೋಜನೆ ಒದಗಿಸುತ್ತದೆ ಎಂದರು.
ಪಿಎಂ ಸೇತು ಯೋಜನೆಯು ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಜಾರಿಯಾಗಲಿದ್ದು, ಒಂದು ಹಬ್‌ಗೆ ನಾಲ್ಕು ಐಟಿಐಗಳು ಸೇರಲಿವೆ. ರಾಜ್ಯದಲ್ಲಿ ಒಟ್ಟು 12 ಹಬ್‌ಗಳಡಿ 48 ಐಟಿಐಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರ ಮತ್ತು ಕಲಬುರಗಿ ಜಿಲ್ಲೆಗಳ ತಲಾ ಒಂದು ಹಬ್ ಆಯ್ಕೆ ಮಾಡಲಾಗಿದ್ದು, ಸ್ಥಳೀಯ ಕೈಗಾರಿಕೆಗಳು ಈ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.
ಯೋಜನೆಯ ಅನುಷ್ಠಾನಕ್ಕಾಗಿ ವಿಶೇಷ ಉದ್ದೇಶ ವಾಹನ (ಎಸ್‌ಪಿವಿ) ರಚಿಸಲಾಗುತ್ತಿದ್ದು, ಇದರಲ್ಲಿ ಆರು ಮಂದಿ ಉದ್ಯಮಿಗಳು ಸದಸ್ಯರಾಗಲಿದ್ದಾರೆ. ಕಂಪನಿಗಳ ಸಿಎಸ್‌ಆರ್ ವಿಭಾಗಗಳು ಹಾಗೂ ಪ್ರತಿಷ್ಠಾನಗಳಿಗೂ ಯೋಜನೆಯಲ್ಲಿ ಭಾಗವಹಿಸುವ ಅವಕಾಶವಿದೆ. ವಾರ್ಷಿಕ ಕನಿಷ್ಠ ₹500 ಕೋಟಿ ವಹಿವಾಟು ಮತ್ತು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಯೋಜನೆಯಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.
ಈ ಸಹಭಾಗಿತ್ವದಿಂದ ಕೈಗಾರಿಕೆಗಳಿಗೆ ತಮ್ಮ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮ, ತರಬೇತಿ ಮತ್ತು ಕೌಶಲ್ಯಾಭಿವೃದ್ಧಿಯ ಸ್ವರೂಪ ರೂಪಿಸುವ ಅವಕಾಶ ದೊರೆಯಲಿದೆ ಎಂದು ಎಂ.ಬಿ. ಪಾಟೀಲ ಹೇಳಿದರು.
ಬೆಂಗಳೂರು ನಗರದಲ್ಲಿ ಪೀಣ್ಯ ಐಟಿಐ ಹಬ್ ಆಗಿದ್ದು, ತುಮಕೂರು ರಸ್ತೆ, ದೊಮ್ಮಲೂರು, ಹೊಸೂರು ರಸ್ತೆ ಹಾಗೂ ದೇವನಹಳ್ಳಿ ಐಟಿಐಗಳು ಸ್ಪೋಕ್ ಸಂಸ್ಥೆಗಳಾಗಿವೆ. ಕಲಬುರಗಿಯಲ್ಲಿ ಬಾಲಕರ ಐಟಿಐ ಹಬ್ ಆಗಿದ್ದು, ಸೇಡಂ, ಅಫಜಲಪುರ, ಜೇವರ್ಗಿ ಹಾಗೂ ಕಲಬುರಗಿ ಮಹಿಳಾ ಐಟಿಐಗಳು ಸ್ಪೋಕ್ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಲಿವೆ.
ಯೋಜನೆಗೆ ಕೇಂದ್ರ ಸರ್ಕಾರ ₹112 ಕೋಟಿ, ರಾಜ್ಯ ಸರ್ಕಾರ ₹98 ಕೋಟಿ ಹಾಗೂ ಕೈಗಾರಿಕಾ ವಲಯ ₹31 ಕೋಟಿ ಸೇರಿದಂತೆ ಒಟ್ಟು ₹241 ಕೋಟಿ ವೆಚ್ಚ ಮಾಡುತ್ತಿದೆ ಎಂದರು.
ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ರಾಜ್ಯದಲ್ಲಿ 270 ಸರ್ಕಾರಿ ಐಟಿಐಗಳಿದ್ದು, ಉದ್ಯಮಿಗಳು ಇವುಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಸರ್ಕಾರ ಅವಕಾಶ ಕಲ್ಪಿಸಲಿದೆ ಎಂದು ಹೇಳಿದರು.
ಸಭೆಯಲ್ಲಿ ಬೋಯಿಂಗ್, ಬಯೋಕಾನ್, ಜಿಂದಾಲ್, ಟೊಯೋಟಾ, ಲೆನ್ಸ್‌ಕಾರ್ಟ್, ಆಟೊಲಿವ್, ಸೆಂಟಮ್ ಹಾಗೂ ಎನ್‌ಟಿಟಿಎ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳ ಪ್ರತಿನಿಧಿಗಳು,
ಕರ್ನಾಟಕ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಇ.ವಿ. ರಮಣರೆಡ್ಡಿ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸುಬೋಧ್ ಯಾದವ್, ಕೈಗಾರಿಕಾ ಇಲಾಖೆ ಆಯುಕ್ತೆ ಖುಷ್ಬೂ ಗೋಯೆಲ್ ಹಾಗೂ ಕೈಗಾರಿಕಾ ತರಬೇತಿ ಇಲಾಖೆಯ ಆಯುಕ್ತೆ ಶಿಲ್ಪಾ ಉಪಸ್ಥಿತರಿದ್ದರು.
*ಯೋಜನೆಗೆ ಕೇಂದ್ರ ಸರ್ಕಾರ ₹112 ಕೋಟಿ, ರಾಜ್ಯ ಸರ್ಕಾರ ₹98 ಕೋಟಿ ಹಾಗೂ ಕೈಗಾರಿಕಾ ವಲಯ ₹31 ಕೋಟಿ ಸೇರಿದಂತೆ ಒಟ್ಟು ₹241 ಕೋಟಿ ವೆಚ್ಚ ಮಾಡುತ್ತಿದೆ .