ಭಾರತದ 'ಐಸ್‌ಕ್ರೀಮ್ ರಾಜಧಾನಿ'ಯಾಗಿ ಹೊರಹೊಮ್ಮಿದ ನಗರ ಯಾವುದು ಗೊತ್ತಾ?; ಕರ್ನಾಟಕದ ಈ ಪ್ರದೇಶದಲ್ಲಿ ತಣ್ಣಗಿನ ಆಹಾರಕ್ಕೆ ಫುಲ್‌ ಡಿಮ್ಯಾಂಡ್‌..Summer Food

Summer Food
Summer Food
Published on
ಬೆಂಗಳೂರು: ಬೇಸಿಗೆಗೆ ಬಳಲಿ ಬೆಂಡಾದ ಸಿಲಿಕಾನ್​ ಸಿಟಿ ಜನರು ತಂಪಾದ ಪಾನೀಯಗಳು ಹಾಗೂ ಐಸ್‌ಕ್ರೀಮ್‌ಗಳ ಮೊರೆ ಹೋಗಿದ್ದಾರೆ. ಇದಕ್ಕೆ ಸಾಕ್ಷಿ ಪ್ರಮುಖ ಆನ್‌ಲೈನ್ ಡೆಲಿವರಿ ಪ್ಲಾಟ್‌ಫಾರ್ಮ್ 'ಇನ್‌ಸ್ಟಾಮಾರ್ಟ್' ಬಿಡುಗಡೆ ಮಾಡಿರುವ 'ಸಮ್ಮರ್ ಟ್ರೆಂಡ್ಸ್ 2026'ರ ವರದಿ. 
ಹೌದು ಈ ವರದಿ ಪ್ರಕಾರ, ಬೆಂಗಳೂರಿನಲ್ಲಿ ತಂಗಿರುವ ಜನರು ದೇಶದಲ್ಲೇ ಅತಿ ಹೆಚ್ಚು ಐಸ್‌ಕ್ರೀಮ್ ಸೇವಿಸುತ್ತಿರುವುದು ಬೆಳಕಿಗೆ ಬಂದಿದೆ. ಉದ್ಯಾನ ನಗರಿ ಈಗ 'ಭಾರತದ ಐಸ್‌ಕ್ರೀಮ್ ರಾಜಧಾನಿ'ಯಾಗಿ ಹೊರಹೊಮ್ಮಿದೆ. ಭಾರತದ ಒಟ್ಟು ಐಸ್‌ಕ್ರೀಮ್ ಬೇಡಿಕೆಯಲ್ಲಿ ಬರೋಬ್ಬರಿ ಶೇ.14ರಷ್ಟು ಪಾಲು ಕೇವಲ ಬೆಂಗಳೂರು ನಗರವೊಂದರಿಂದಲೇ ಬರುತ್ತಿದ್ದು, ಅಚ್ಚರಿ ಮೂಡಿಸಿದೆ.

ಮಾರ್ಚ್-ಏಪ್ರಿಲ್‌ನಲ್ಲಿ ದಾಖಲೆಯ ಆರ್ಡರ್

ಬೇಸಿಗೆಯ ಆರಂಭದ ತಿಂಗಳುಗಳಾದ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ತಂಪು ಪಾನೀಯಗಳು ಮತ್ತು ಐಸ್‌ಕ್ರೀಮ್‌ಗಳ ಆನ್‌ಲೈನ್ ಆರ್ಡರ್‌ಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇನ್‌ಸ್ಟಾಮಾರ್ಟ್ ವರದಿಯ ಪ್ರಕಾರ, ದೇಶಾದ್ಯಂತ ಹಣ್ಣುಗಳು, ತಂಪು ಪಾನೀಯಗಳು, ಕೋಲ್ಡ್ ಕಾಫಿ, ಫಿಜಿ ಡ್ರಿಂಕ್ಸ್ ಮತ್ತು ಪಾಪ್ಸಿಕಲ್‌ಗಳ ಬೇಡಿಕೆಯು ವಾರದಿಂದ ವಾರಕ್ಕೆ ಶೇ. 300ರಷ್ಟು ಏರಿಕೆಯಾಗಿದೆ.
ಕೇವಲ ತಿಂಡಿ-ತಿನಿಸುಗಳು ಮಾತ್ರವಲ್ಲದೆ, ಬಿಸಿಲಿನಿಂದ ರಕ್ಷಣೆ ಪಡೆಯುವ ಸಾಧನಗಳಾದ ಫ್ಯಾನ್‌ಗಳ ಮಾರಾಟದಲ್ಲಿ ಶೇ. 280ರಷ್ಟು ಏರಿಕೆ ದಾಖಲಾಗಿದ್ದರೆ, ಸನ್‌ಗ್ಲಾಸ್‌ಗಳ ಮಾರಾಟದಲ್ಲಿ ವಾರ್ಷಿಕವಾಗಿ ಬರೋಬ್ಬರಿ ಶೇ. 650ರಷ್ಟು ವೃದ್ಧಿಯಾಗಿದೆ.

ರಾತ್ರಿ ಹೊತ್ತೇ ಐಸ್‌ಕ್ರೀಮ್‌ಗೆ ಡಿಮ್ಯಾಂಡ್!

ವರದಿಯಲ್ಲಿ ಉಲ್ಲೇಖಿಸಿರುವ ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ, ಭಾರತೀಯರು ಅತಿ ಹೆಚ್ಚು ಐಸ್‌ಕ್ರೀಮ್ ಸೇವಿಸುವ ಸಮಯ ರಾತ್ರಿ 9 ಗಂಟೆ! ಸಂಜೆ 6 ರಿಂದ 9 ಗಂಟೆಯ ನಡುವೆ ಐಸ್‌ಕ್ರೀಮ್ ಮತ್ತು ತಂಪು ಪಾನೀಯಗಳ ಬೇಡಿಕೆ ದುಪ್ಪಟ್ಟಾಗುತ್ತಿದೆ. ವಿಶೇಷವೆಂದರೆ ವಾರಾಂತ್ಯಗಳಲ್ಲಿ ಈ ಬೇಡಿಕೆ ಇನ್ನಷ್ಟು ತಾರಕಕ್ಕೇರುತ್ತದೆ.
ಐಸ್‌ಕ್ರೀಮ್ ಫ್ಲೇವರ್‌ಗಳ ವಿಚಾರಕ್ಕೆ ಬಂದರೆ, 'ಚಾಕೊಲೇಟ್ ಐಸ್‌ಕ್ರೀಮ್' ದೇಶದ ಜನರ ಅಚ್ಚುಮೆಚ್ಚಿನ ಆಯ್ಕೆಯಾಗಿದ್ದು, ಒಟ್ಟು ಆರ್ಡರ್‌ಗಳಲ್ಲಿ ಶೇ. 28ರಷ್ಟು ಪಾಲನ್ನು ಇದು ಹೊಂದಿದೆ. ಜೊತೆಗೆ, ಕುಟುಂಬ ಸಮೇತ ಸವಿಯಲು ಅನುಕೂಲವಾಗುವ 'ಫ್ಯಾಮಿಲಿ-ಸೈಸ್ ಟಬ್' ಐಸ್‌ಕ್ರೀಮ್‌ಗಳಿಗೆ ಅತಿ ಹೆಚ್ಚು ಡಿಮ್ಯಾಂಡ್ ಇದೆ.

ಮೊಸರು, ಮಾವು ಮತ್ತು ದೇಶಿ ಪಾನೀಯಗಳ ಕಮಾಲ್

ಬೇಸಿಗೆಯ ಈ ಉರಿಬಿಸಿಲಿನಲ್ಲಿ ಭಾರತೀಯರು ಕೇವಲ ಐಸ್‌ಕ್ರೀಮ್‌ಗೆ ಸೀಮಿತವಾಗಿಲ್ಲ. ಬದಲಾಗಿ, ಆರೋಗ್ಯಕರ ಮತ್ತು ದೇಶಿ ತಂಪು ಪಾನೀಯಗಳತ್ತಲೂ ಹೆಚ್ಚಿನ ಒಲವು ತೋರುತ್ತಿದ್ದಾರೆ. ಐಸ್‌ಕ್ರೀಮ್ ಮತ್ತು ಕೋಲ್ಡ್ ಡ್ರಿಂಕ್ಸ್‌ಗಳಿಗೆ ಸಮಾನವಾಗಿ ಮೊಸರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಗ್ರಾಹಕರು ಅತಿ ಹೆಚ್ಚು ಆರ್ಡರ್ ಮಾಡಿದ ಟಾಪ್ 10 ಉತ್ಪನ್ನಗಳ ಪೈಕಿ 6 ಉತ್ಪನ್ನಗಳು ಮೊಸರು ಆಧಾರಿತವಾಗಿವೆ. ಈ ಸೀಸನ್‌ನ ಪ್ರಮುಖ ಹಣ್ಣುಗಳಾದ ಕಲ್ಲಂಗಡಿ, ಕರ್ಬೂಜ ಸೇರಿದಂತೆ ತಾಜಾ ಹಣ್ಣುಗಳ ಬಳಕೆಯೂ ಗಣನೀಯವಾಗಿ ಏರಿಕೆಯಾಗಿದೆ.

ಗ್ರಾಹಕರಿಂದ ಮೆಗಾ ಆರ್ಡರ್‌, ನಗರಗಳ ನಡುವೆ ವಿಚಿತ್ರ ಟ್ರೆಂಡ್‌

ಐಸ್‌ಕ್ರೀಮ್ ಬಳಕೆಯಲ್ಲಿ ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಪುಣೆ ಮುಂಚೂಣಿಯಲ್ಲಿವೆ. ಇನ್ನು ಸೆಂಟ್ರಲ್ ಗೋವಾ, ತ್ರಿಶೂರ್‌, ತಿರುವಲ್ಲಿ, ನಾಗರ್‌ಕೋಯಿಲ್ ಮತ್ತು ಮಣಿಪಾಲದಲ್ಲಿ 'ಬಳಕೆದಾರರ ತಲಾ ಆರ್ಡರ್‌ʼಗಳ ಸಂಖ್ಯೆ ಹೆಚ್ಚಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net