ಚಿಕ್ಕಬಳ್ಳಾಪುರ: ಕಡಿಮೆ ಖರ್ಚಿನಲ್ಲಿ ಬೆಳೆಯುವ ಸಿರಿಧ್ಯಾನಗಳು ಹೆಚ್ಚು ಲಾಭ ನೀಡುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಎಸ್.ಎಸ್.ಆಬೀದ್ ತಿಳಿಸಿದರು.cereals
ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ- ಅಂಗವಾಗಿ ಜಿಲ್ಲಾಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ವಿವಿಧ ರೀತಿಯ ಸಿರಿಧಾನ್ಯ ಬೆಳೆಯುವ ದೇಶಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಇದು ಸಾಂಪ್ರದಾಯಿಕ ಕೃಷಿಯಾಗಿದ್ದು, ಹಿಂದೆ ಒಂದೇ ಕೃಷಿ ಜಮೀನಿನಲ್ಲಿ ಕನಿಷ್ಠ ಹತ್ತು ಬೆಳೆಗಳನ್ನು ಬೆಳೆಯುತ್ತಿದ್ದರು ಎಂದರು.
ಎಲ್ಲಕ್ಕಿಂತ ಮುಖ್ಯವಾಗಿ ಸಿರಿಧಾನ್ಯ ಬೆಳೆಯಲು ಫಲವತ್ತಾದ ಭೂಮಿಯೇ ಬೇಕು ಎಂದಿಲ್ಲ. ತೆಳ್ಳನೆಯ ಮಣ್ಣಿನ ಪದರದ ನೆಲದಲ್ಲಿಯೂ ಚೆನ್ನಾಗಿ ಸಿರಿಧಾನ್ಯ ಬೆಳೆಯಬಹುದು ಎಂದರು.
ಚಿಂತಾಮಣಿ ತಾಲೂಕಿನ ಕುರುಬೂರು ಕೃಷಿ ವಿಜ್ಞಾನ ಕೇಂದ್ರ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ವಿಜ್ಞಾನಿ ಡಾ.ಸೌಮ್ಯಾ ಮಾತನಾಡಿ, ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದ ಪೌಷ್ಟಿಕ ಸತ್ವಗಳಾದ ಮೇಗ್ನಿಷಿಯಂ, ತಾಮ್ರ, ಪಾಸ್ಪರಸ್ ಮತ್ತು ಮ್ಯಾಂಗನೀಸ್ ಇರುವುದರಿಂದ ಮನುಷ್ಯನ ಆರೋಗ್ಯವನ್ನು ಸಮತೋಲನ ಕಾಪಾಡುತ್ತದೆ ಎಂದರು.
ನವಣೆ, ಸಜ್ಜೆ ಉಂಡೆ, ನವಣೆ ಬಿಸಿ ಬೇಳೆ ಬಾತ್, ನವಣೆ ಪಾಯಸ, ಸಜ್ಜೆ ಸಂಗಟಿ, ರಾಗಿ, ಶಾವಿಗಿ ಹುಗ್ಗಿ, ಸಾವೆ ಬಿಸ್ಕತ್, ಸಜ್ಜೆ ಜಿಲೇಬಿ, ನವಣೆ ಚಕ್ಕುಲಿ, ಕೊರಲೆ ಪಾಯಸ, ನವಣೆ ಬಿರಿಯಾನಿ ಸೇರಿ ಬಗೆ ಬಗೆಯ ಖಾದ್ಯ ಮತ್ತು ತಿನಿಸುಗಳ ತಯಾರಿಕೆ ಸ್ಪರ್ಧೆ ನಡೆಯಿತು.
ಉಪ ಕೃಷಿ ನಿರ್ದೇಶಕಿ ಜಿ.ದೀಪಶ್ರೀ, ಜಿ.ಆರ್.ಭವ್ಯರಾಣಿ, ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ್, ಅಮರನಾರಾಯಣರೆಡ್ಡಿ, ಪಿ.ಆರ್.ರವಿ, ಕೃಷಿ ಅಧಿಕಾರಿಗಳಾದ ಎಂ.ಶ್ರೀನಿವಾಸ ಇದ್ದರು.