

ಬೆಂಗಳೂರು: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಆಕ್ರೋಶದ ಕಿಚ್ಚು ಹೆಚ್ಚಾಗುತ್ತಿರುವ ಬೆನ್ನಲ್ಲೇ, ರೈತರ ಪರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಣಕ್ಕಿಳಿದಿದ್ದಾರೆ. ಕಬ್ಬಿನ ದರ ಹೆಚ್ಚಳ, ಸಕ್ಕರೆ ಕನಿಷ್ಠ ಮಾರಾಟ ಬೆಲೆ ಏರಿಕೆ ಹಾಗೂ ಎಥನಾಲ್ ಹಂಚಿಕೆ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.
ಕೇಂದ್ರ ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ನಿರ್ಧಾರ ಕೈಗೊಂಡರೆ ಮಾತ್ರ ರೈತರ ಮುಷ್ಕರ ಶಮನವಾಗಿ, ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವ ಕೆಲಸ ಸರಾಗವಾಗಿ ನಡೆಯಲು ಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ರೈತರ ಪ್ರಮುಖ ಬೇಡಿಕೆಗಳನ್ನು ಸಿಎಂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ C2 + 50% ಸೂತ್ರದಡಿ ಕಬ್ಬಿನ ಬೆಲೆ ನಿಗದಿಪಡಿಸಬೇಕು ಎಂಬುದು ಬೆಳೆಗಾರರ ಬಲವಾದ ಬೇಡಿಕೆಯಾಗಿದೆ. ಸದ್ಯ ಶೇ. 10.25ರ ರಿಕವರಿಗೆ ಕೇಂದ್ರ ನಿಗದಿ ಮಾಡಿರುವ 3,650 ರೂ. ಎಫ್ಆರ್ಪಿ (FRP) ಸಾಲುತ್ತಿಲ್ಲ, ನಮಗೆ ಪ್ರತಿ ಟನ್ಗೆ 5,500 ರೂ. ಕೊಡಲೇಬೇಕು ಎಂದು ಅನ್ನದಾತರು ಪಟ್ಟುಹಿಡಿದಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ರೈತರ ಬೆಳೆ ಹಾನಿಯಾಗುತ್ತಿದ್ದು, ರಿಕವರಿ ಪ್ರಮಾಣ ಕುಸಿದಿದೆ. ಹೀಗಾಗಿ ಎಫ್ಆರ್ಪಿಯ ಮೂಲ ರಿಕವರಿಯನ್ನು ಹಿಂದಿನಂತೆ ಶೇ. 9.5ಕ್ಕೆ ಇಳಿಸಬೇಕು. ಶೇ. 9.5ರ ರಿಕವರಿಗೆ ಪ್ರತಿ ಟನ್ಗೆ 4,440 ರೂ. ನಿಗದಿಪಡಿಸುವಂತೆ ರಾಜ್ಯ ಸರ್ಕಾರ ಈಗಾಗಲೇ ಶಿಫಾರಸು ಮಾಡಿರುವುದನ್ನು ಸಿಎಂ ನೆನಪಿಸಿದ್ದಾರೆ.
2019ರ ಫೆಬ್ರವರಿ 14 ರಿಂದ ಇಂದಿನವರೆಗೂ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (MSP) ಪ್ರತಿ ಕೆಜಿಗೆ ಕೇವಲ 31 ರೂ. ರಲ್ಲೇ ಉಳಿದುಕೊಂಡಿದೆ. ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ ಸಕ್ಕರೆ ಬೆಲೆ ಮಾತ್ರ ಬದಲಾಗಿಲ್ಲ. ರಾಜ್ಯ ಸರ್ಕಾರವು ಪ್ರತಿ ಕೆಜಿಗೆ 41.50 ರೂ. ನಿಗದಿಪಡಿಸಲು ಈಗಾಗಲೇ ಶಿಫಾರಸು ಮಾಡಿದೆ.
ಇತ್ತೀಚೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ, "ಕೇಂದ್ರ ಸರ್ಕಾರ ಸಕ್ಕರೆ MSP ಹೆಚ್ಚಿಸಿದರೆ, ಆ ಹೆಚ್ಚುವರಿ ಲಾಭವನ್ನು ರೈತರಿಗೆ ವರ್ಗಾಯಿಸಲು ನಾವು ಸಿದ್ಧ" ಎಂದು ಕಾರ್ಖಾನೆಗಳು ಮಾತುಕೊಟ್ಟಿವೆ. ಹೀಗಾಗಿ ಕೇಂದ್ರವು ಸಕ್ಕರೆ ಎಂಎಸ್ಪಿಯನ್ನು ತಕ್ಷಣವೇ ಹೆಚ್ಚಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಕರ್ನಾಟಕದಲ್ಲಿ ಬರೋಬ್ಬರಿ 225 ಕೋಟಿ ಲೀಟರ್ ಕಬ್ಬು ಮತ್ತು ಮೋಲಾಸಸ್ ಆಧಾರಿತ ಎಥನಾಲ್ ಉತ್ಪಾದನಾ ಸಾಮರ್ಥ್ಯವಿದೆ. ಆದರೆ, 2025-26ರ ಎಥನಾಲ್ ಪೂರೈಕೆ ವರ್ಷದಲ್ಲಿ ರಾಜ್ಯಕ್ಕೆ ಕೇವಲ 117 ಕೋಟಿ ಲೀಟರ್ ಮಾತ್ರ ಹಂಚಿಕೆ ಮಾಡಲಾಗಿದೆ. ಈ ಅನ್ಯಾಯ ಸರಿಪಡಿಸಿ ರಾಜ್ಯಕ್ಕೆ ನ್ಯಾಯಯುತ ಪಾಲು ನೀಡಬೇಕು.
ಜೊತೆಗೆ ಕಬ್ಬು ಆಧಾರಿತ ಎಥನಾಲ್ ದರವನ್ನು ಪ್ರತಿ ಲೀಟರ್ಗೆ 73, 67 ಮತ್ತು 61 ಕ್ಕೆ ಪರಿಷ್ಕರಿಸಬೇಕು. ಡಾ. ಸಿ. ರಂಗರಾಜನ್ ಸಮಿತಿಯ ಆದಾಯ ಹಂಚಿಕೆ ಸೂತ್ರವನ್ನು ಮರುಪರಿಶೀಲಿಸಿ, ಕಾರ್ಖಾನೆಗಳಿಗೆ ಎಥನಾಲ್ನಿಂದ ಬರುವ ಆದಾಯದಲ್ಲೂ ಕಬ್ಬು ಬೆಳೆಗಾರರಿಗೆ ಪಾಲು ಸಿಗುವಂತೆ ಮಾಡಬೇಕು ಎಂದು ಸಿಎಂ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರವೇ ‘ರಾಜ್ಯ ಸಲಹಾ ಬೆಲೆ’ (SAP) ನಿಗದಿ ಮಾಡುವಂತೆ ಪ್ರಹ್ಲಾದ್ ಜೋಶಿ ನೀಡಿದ್ದ ಸಲಹೆಗೆ ಅಂಕಿ-ಅಂಶಗಳ ಸಮೇತ ಡಿ.ಕೆ. ಶಿವಕುಮಾರ್ ಪ್ರತ್ಯುತ್ತರ ನೀಡಿದ್ದಾರೆ. "2013-14ರಲ್ಲಿ ಹಂಗಾಮಿಗೂ ಮುನ್ನ ಹೆಚ್ಚಿನ ದರ ಘೋಷಿಸಿದಾಗ ಕಾರ್ಖಾನೆಗಳಿಗೆ ಹಣ ನೀಡಲಾಗದೆ ಸರ್ಕಾರವೇ 1,520 ಕೋಟಿ ರೂ. ಹೊರೆ ಹೊತ್ತುಕೊಂಡಿತ್ತು. ಈಗ ತಮಿಳುನಾಡು ಮಾದರಿಯ ನೆರವು ನೀಡಲು ಹೋದರೆ ವರ್ಷಕ್ಕೆ 4,090 ಕೋಟಿ ರೂ. ಹೊರೆಯಾಗುತ್ತದೆ. ಇದು ಶಾಶ್ವತ ಪರಿಹಾರವಲ್ಲ" ಎಂದಿದ್ದಾರೆ.
ಕರ್ನಾಟಕವು ರಂಗರಾಜನ್ ಸಮಿತಿ ಮಾದರಿಯಂತೆ FRP ಜೊತೆಗೆ ಹಂಗಾಮಿನ ನಂತರದ ಆದಾಯ ಹಂಚಿಕೆ ಪದ್ಧತಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಇದರ ಫಲವಾಗಿ 2025-26ನೇ ಸಾಲಿನಲ್ಲಿ ಶೇ. 99.85 ರಷ್ಟು ಕಬ್ಬಿನ ಬಾಕಿ ಹಣವನ್ನು ರೈತರಿಗೆ ಪಾವತಿಸಲಾಗಿದೆ. ಕಾರ್ಖಾನೆಗಳು FRP ಗಿಂತ ಟನ್ಗೆ 500 ರಿಂದ 600 ರೂ. ಹೆಚ್ಚುವರಿಯಾಗಿ ನೀಡಿವೆ, ಸರ್ಕಾರವೂ ಪ್ರತಿ ಟನ್ಗೆ 100 ರಂತೆ 290 ಕೋಟಿ ರೂ. ನೀಡಿದೆ ಎಂಬುದನ್ನು ಸಿಎಂ ಉಲ್ಲೇಖಿಸಿದ್ದಾರೆ.
ಪ್ರೊ. ರಮೇಶ್ ಚಂದ್ ಸಮಿತಿಯ ಶಿಫಾರಸುಗಳು ಅಧಿಕೃತವಾಗಿ ಜಾರಿಗೆ ಬರುವವರೆಗೆ, ಪ್ರಸಕ್ತ ಹಂಗಾಮಿಗೆ ಈ ಕೆಳಗಿನ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲು ಸಿಎಂ ಕೋರಿದ್ದಾರೆ:
ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು (MSP) ತಕ್ಷಣ ಏರಿಕೆ ಮಾಡುವುದು.
ಎಥನಾಲ್ ನೀತಿ ಹಾಗೂ ಬೆಲೆಯನ್ನು ಮರುಪರಿಶೀಲಿಸಿ ಪರಿಷ್ಕರಿಸುವುದು.
ಕಟಾವು ಮತ್ತು ಸಾಗಣೆ ವೆಚ್ಚಗಳನ್ನು ಸೇರಿಸಿ ಮತ್ತು ಪ್ರತ್ಯೇಕವಾಗಿ ಎರಡೂ ಮಾದರಿಯಲ್ಲಿ ಎಫ್ಆರ್ಪಿ (FRP) ಘೋಷಿಸುವುದು.
ಕಬ್ಬು ನಿಯಂತ್ರಣ ಆದೇಶಗಳು ಕೇಂದ್ರ ಸರ್ಕಾರದ ಸುಪರ್ದಿಯಲ್ಲೇ ಇರುವುದರಿಂದ, ರೈತರು, ಕಾರ್ಖಾನೆಗಳು ಹಾಗೂ ಗ್ರಾಹಕರ ಹಿತ ಕಾಯಲು ಕೇಂದ್ರವೇ ಶೀಘ್ರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಪತ್ರದಲ್ಲಿ ವಿನಂತಿಸಿದ್ದಾರೆ.