ಸುರಪುರದಲ್ಲಿ ಬುಧವಾರ ಆಯೋಜಿಸಿದ್ದ ಕಲ್ಯಾಣದಲ್ಲಿ ಕ್ಷೀರ ಕ್ರಾಂತಿ ಕಾರ್ಯಕ್ರಮವನ್ನು ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ, ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸಿದರು. ರಾಯಚೂರು ಕೃಷಿ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ, ಗುರುಶಾಂತಮೂರ್ತಿ, ಚನ್ನಮಲ್ಲಿಕಾರ್ಜುನ, ವಿಠ್ಠಲ್ ಯಾದವ್, ಸುರೇಶ ಸಜ್ಜನ್, ಸಿದ್ದಪ್ಪ ಹೊಟ್ಟಿ, ಯಲ್ಲಪ್ಪ ನಾಯಕ ಮಲ್ಲಿಬಾವಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ರಾಜಾ ವೇಣುಗೋಪಾಲ ನಾಯಕ ಅಭಿಮತ
ಸುರಪುರದಲ್ಲಿ ಕ್ಷೀರಕ್ರಾಂತಿಗೆ ಚಾಲನೆ
ಸುರಪುರ: ರೈತರು ಕೃಷಿಯೊಂದಿಗೆ ಹೈನುಗಾರಿಕೆಯಂತಹ ಉಪ ಕಸುಬು ಅಳವಡಿಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಸಲಹೆ ನೀಡಿದರು.
ಗರುಡಾದ್ರಿ ಕಲಾ ಮಂದಿರದಲ್ಲಿ ರಾಜಾ ವೆಂಕಟಪ್ಪ ನಾಯಕ ಸ್ಮರಣಾರ್ಥ ಕುಂಬಾರಪೇಟೆಯ ಜೈ ಸೀತಾರಾಮ ರೈತ ಉತ್ಪಾದಕ ಸಂಸ್ಥೆ ಬುಧವಾರ ಆಯೋಜಿಸಿದ್ದ ಕಲ್ಯಾಣದಲ್ಲಿ ಕ್ಷೀರ ಕ್ರಾಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಯಲ್ಲಿ ಬೆಳೆ ನಷ್ಟ ಸಂಭವಿಸಿದಾಗ ಹೈನುಗಾರಿಕೆ ರೈತರಿಗೆ ಆರ್ಥಿಕ ಆಸರೆ ಒದಗಿಸುತ್ತದೆ. ರೈತರು ಒಕ್ಕೂಟ ಅಥವಾ ಸಂಸ್ಥೆಗಳ ಮೂಲಕ ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಂಡರೆ ಸರ್ಕಾರದ ಸಬ್ಸಿಡಿ ಸೇರಿ ವಿವಿಧ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ಹೀಗಾಗಿ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು. ಜೈ ಸೀತಾರಾಮ ರೈತ ಉತ್ಪಾದಕ ಸಂಸ್ಥೆ ಲಾಂಛನ ಬಿಡುಗಡೆಗೊಳಿಸಿದ ಶಾಸಕ ಚನ್ನಾರಡ್ಡಿ ಪಾಟೀಲï ತುನ್ನೂರ ಮಾತನಾಡಿ, ರೈತರ ಆರ್ಥಿಕ ಸಬಲೀಕರಣಕ್ಕೆ ಕೃಷಿಯೊಂದಿಗೆ ಹೈನುಗಾರಿಕೆ ಉತ್ತೇಜಿಸುವ ಅಗತ್ಯವಿದೆ. ಪ್ರಕೃತಿ ವಿಕೋಪ, ಬರ ಸೇರಿ ಕೃಷಿಯಲ್ಲಿ ಎದುರಾಗುವ ಸಂಕಷ್ಟದ ಸಂದರ್ಭದಲ್ಲಿ ಹೈನುಗಾರಿಕೆ ರೈತ ಕುಟುಂಬಗಳಿಗೆ ವಿಶೇಷವಾಗಿ ಮಹಿಳೆಯರಿಗೆ ನಿರಂತರ ಆದಾಯದ ಮೂಲವಾಗಲಿದೆ ಎಂದು ಹೇಳಿದರು.
ಪ್ರತಿದಿನ ಗುಣಮಟ್ಟದ ಹಾಲು ಸಂಗ್ರಹಿಸುವುದರ ಜತೆ ಬೆಣ್ಣೆ, ತುಪ್ಪ, ಗಿಣ್ಣ ಇತರ ಮೌಲ್ಯವಽðತ ಹಾಲಿನ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ತಲುಪಿಸುವ ಉದ್ದೇಶವನ್ನು ಈ ಸಂಸ್ಥೆ ಹೊಂದಿರುವುದು ಶ್ಲಾಘನೀಯ. ಹಾಲಿಗೆ ನ್ಯಾಯಯುತ ಬೆಲೆ ದೊರಕಿಸುವುದರ ಜತೆಗೆ ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅನೇಕ ಕಾರ್ಯ ಕೈಗೊಳ್ಳುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ. ಹನುಮಂತಪ್ಪ ಮಾತನಾಡಿದರು. ಪೂಜ್ಯರಾದ ಗುರುಶಾಂತ ಮೂರ್ತಿ ಮತ್ತು ಚನ್ನಮಲ್ಲಿಕಾರ್ಜುನ ಸಾನ್ನಿಧ್ಯ ವಹಿಸಿದ್ದರು. ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ್ ಯಾದವ್, ನಿರ್ದೇಶಕ ಸುರೇಶ ಸಜ್ಜನ್, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಜೈ ಸೀತಾರಾಮ ರೈತ ಉತ್ಪಾದಕ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಯಲ್ಲಪ್ಪ ನಾಯಕ ಮಲ್ಲಿಬಾವಿ, ನಿರ್ದೇಶಕರಾದ ಶಿವಶರಣಪ್ಪ ಸಾಹು ಹೈಯಾಳ, ಭೀಮು ನಾಯಕ ಮಲ್ಲಿಬಾವಿ ಇತರರಿದ್ದರು. ಸಂಸ್ಥೆ ನಿರ್ದೇಶಕ ಕೊಟ್ರೇಶ್ ಚೌಧರಿ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಚೌಧರಿ ನಿರೂಪಣೆ ಮಾಡಿದರು. ಮಂಜುನಾಥ ಚೆಟ್ಟಿ ಸ್ವಾಗತಿಸಿದರು. ಬಸವರೆಡ್ಡಿ ಮಾಲಿಪಾಟೀಲï ವಂದಿಸಿದರು.
ಕೃಷಿಗೆ ಹೈನುಗಾರಿಕೆಯೇ ಜೀವಾಳ
ಕೃಷಿ ಮತ್ತು ಹೈನುಗಾರಿಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೃಷಿಗೆ ಪೂರಕವಾಗಿ ಹೈನುಗಾರಿಕೆ ಕೈಗೊಂಡರೆ ರೈತರು ನಿರಂತರ ಮತ್ತು ಸ್ಥಿರ ಆದಾಯ ಗಳಿಸಲು ಸಾಧ್ಯ ಎಂದು ಕೃಷಿ ವಿವಿ ಕುಲಪತಿ ಡಾ.ಎಂ. ಹನುಮಂತಪ್ಪ ಹೇಳಿದರು. ಕನಿಷ್ಠ ೧೦ ಲೀಟರ್ ಹಾಲು ಕರೆಯುವ ಹಸುಗಳನ್ನು ಸಾಕುವುದರಿಂದ ನಿರಂತರ ಲಾಭ ಗಳಿಸಬಹುದು. ಮೇವಿನ ಕೊರತೆ ನಿವಾರಣೆಗೆ ಹೈಡ್ರೋಫ್ರೋನಿಕ್ಸ್ ಪದ್ಧತಿ ಸೇರಿ ಆಧುನಿಕ ತಂತ್ರಜ್ನಾನ ಅಳವಡಿಸಿಕೊಳ್ಳಬೇಕು. ರೈತರು ಎಫ್ ಪಿಒ ಮೂಲಕ ಸಂಘಟಿತರಾಗಿ ಮಾರುಕಟ್ಟೆ ಸೌಲಭ್ಯ ಪಡೆಯುವುದರ ಜತೆ ಸರ್ಕಾರ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು. ರಾಯಚೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ನಾನ ಕೇಂದ್ರದ ವಿಜ್ನಾನಿನಿಗಳಿಂದ ತಾಂತ್ರಿಕ ಮಾರ್ಗದರ್ಶನ ಮತ್ತು ತರಬೇತಿ ಪಡೆದು ಹೈನುಗಾರಿಕೆ, ಕೋಳಿ, ಕುರಿ ಹಾಗೂ ಮೇಕೆ ಸಾಕಣೆಯಂಥ ಪೂರಕ ಚಟುವಟಿಕೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಬರಪೀಡಿತ ತಾಲೂಕು ಘೋಷಿಸಿ
ತೀವ್ರ ಬಿಸಿಲು ಮತ್ತು ಕೃಷಿ ನಷ್ಟದಿಂದ ರೈತರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಸರ್ಕಾರ ಸುರಪುರ ಬರಪೀಡಿತ ತಾಲೂಕು ಘೋಷಿಸಿ ಸಹಕಾರ ಸಂಘಗಳ ಮೂಲಕ ರೈತರು ಪಡೆದ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ರುಕ್ಮಾಪುರ ಹಿರೇಮಠದ ಶ್ರೀ ಗುರುಶಾಂತಮೂರ್ತಿ ಶಿವಾಚಾರ್ಯರು ಆಗ್ರಹಿಸಿದರು. ರೈತರ ಕಷ್ಟ-ನಷ್ಟಗಳಿಗೆ ಸ್ಪಂದಿಸಿ ಧೈರ್ಯ ತುಂಬುವ ಮತ್ತು ಅಗತ್ಯ ನೆರವು ದೊರಕಿಸುವ ಕಾರ್ಯದಲ್ಲಿ ರೈತ ಸಂಘಟನೆಗಳು ಮುಂಚೂಣಿಯಲ್ಲಿ ನಿಲ್ಲಬೇಕು. ಸಂಘಟನೆಗಳು ಹಾಗೂ ಕಾರ್ಯಕ್ರಮಗಳು ರೈತರ ಬದುಕಿಗೆ ನೆರವಾಗುವಂತಹ ಸಾರ್ಥಕ ಕಾರ್ಯಗಳಿಗೆ ವೇದಿಕೆಯಾಗಬೇಕು ಎಂದರು.