ಹರೀಶ್ ರಾಣಾ ಮತ್ತು ಅರುಣಾ ಶಾನಭಾಗ ನೆನಪಿನಲ್ಲಿ...

ಹರೀಶ್ ರಾಣಾ ಮತ್ತು ಅರುಣ್ ಶಾನಭಾಗ್
ಹರೀಶ್ ರಾಣಾ ಮತ್ತು ಅರುಣ್ ಶಾನಭಾಗ್
Published on

ಆಗಿನಿಂದಲೂ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಮಲಗಿರಬೇಕಾದ ಸ್ಥಿತಿ. ಉಜ್ವಲ ಭವಿಷ್ಯದ ಕನಸಿನಲ್ಲಿದ್ದ ಯುವಕನೊಬ್ಬ ಹೀಗೆ ಶಾಶ್ವತವಾಗಿ ನಿಶ್ಚೇಷ್ಟಿತ ಪರಿಸ್ಥಿತಿಗೆ ಒಳಗಾಗುವುದು ನೋವಿನ ಸಂಗತಿ. ರಾಣಾ ಕುಟುಂಬ ಅಂದಿನಿಂದ ಅನುಭವಿಸುತ್ತಿರುವ ಮಾನಸಿಕ ಮತ್ತು ಆರ್ಥಿಕ ಒತ್ತಡ ಹೇಳತೀರದು. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಲ್ಲಿಗೆ ಹತ್ತಿರವಾಗುತ್ತದೆಯೆಂಬ ಕಾರಣಕ್ಕೆ ಹಾಗೂ ಚಿಕಿತ್ಸೆಗೆ ಹಣ ಹೊಂದಿಸುವ ಸಲುವಾಗಿ ಪಾಲಕರು ದೆಹಲಿಯ ಮಹಾವೀರ ಎನ್​ಕ್ಲೇವ್​ನಲ್ಲಿನ ಮನೆಯನ್ನು ಮಾರಿ ಗಾಜಿಯಾಬಾದ್​ಗೆ ಸ್ಥಳಾಂತರಗೊಂಡಿದ್ದಾರೆ. ಮೇಲೆ ಉಲ್ಲೇಖಿಸಿದ ಘಟನೆ ಮನೆಯಲ್ಲಿ ರಾಣಾಗೆ ಶಾಶ್ವತ ವಿದಾಯ ಹೇಳುವ ದಿನದ್ದು. ಏಮ್ಸ್ ಆಸ್ಪತ್ರೆಯಲ್ಲಿ ರಾಣಾರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಅಂದಹಾಗೆ ಈ ಬಗ್ಗೆ ಕಾನೂನು ಹೋರಾಟ ನಡೆಸಲು ರಾಣಾ ಕುಟುಂಬಕ್ಕೆ ನೆರವಾಗಿದ್ದು ಬ್ರಹ್ಮಕುಮಾರಿ ಸಂಸ್ಥೆ. ಆ ಕುಟುಂಬದವರು ಈ ಸಂಸ್ಥೆಯ ಅನುಯಾಯಿಗಳು.

ಇಡೀ ದೇಹ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದರಿಂದ ಮತ್ತು ಯಾವ ಚಿಕಿತ್ಸೆಗೂ ಸ್ಪಂದಿಸುವ ಸಾಧ್ಯತೆ ಇಲ್ಲವಾದುದರಿಂದ ಹರೀಶ್ ರಾಣಾ ಕುಟುಂಬದವರು ಪರೋಕ್ಷ ದಯಾಮರಣ ಕೋರಿ 2024ರಲ್ಲಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು. ಆದರೆ ರಾಣಾ ಉಸಿರಾಟಕ್ಕಾಗಿ ಯಾಂತ್ರಿಕ ವೆಂಟಿಲೇಟರ್ ಮೇಲೆ ಅವಲಂಬನೆ ಹೊಂದಿಲ್ಲ ಮತ್ತಿತರ ಕಾರಣಕ್ಕೆ ಕೋರ್ಟು ದಯಾಮರಣ ನೀಡಲು ಒಪ್ಪಲಿಲ್ಲ. ನಂತರ ಕುಟುಂಬ ಸವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು. ಪರೋಕ್ಷ ದಯಾಮರಣಕ್ಕೆ ಅನುಮತಿಸಿ ಇದೇ ಮಾರ್ಚ್ 11ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಈ ಹಿನ್ನೆಲೆಯಲ್ಲಿ ರಾಣಾರನ್ನು ಏಮ್ಸ್​ಗೆ ಸ್ಥಳಾಂತರಿಸಲಾಗಿದ್ದು, ಪ್ಯಾಲಿಯೇಟಿವ್ ಕೇರ್ ವಿಭಾಗದಲ್ಲಿ ಇರಿಸಲಾಗಿದೆ. ನ್ಯಾಯಾಲಯದ ಮಾರ್ಗಸೂಚಿಗಳ ಅನುಸಾರ, ಪರಿಣತರ ಮೇಲ್ವಿಚಾರಣೆಯಲ್ಲಿ, ಜೀವರಕ್ಷಕ ವ್ಯವಸ್ಥೆಯನ್ನು ನಿಲ್ಲಿಸಲಾಗುತ್ತದೆ. ಅಲ್ಲಿಗೆ ಈ ಜಗತ್ತಿಗೆ ಹರೀಶ್ ರಾಣಾ ಅಂತಿಮ ವಿದಾಯವಾಗುತ್ತದೆ.

ದಯಾಮರಣದಲ್ಲಿ ಎರಡು ವಿಧ ಇದೆ. ಪರೋಕ್ಷ ದಯಾಮರಣ (passive euthanasia) ಮತ್ತು ಸಕ್ರಿಯ ದಯಾಮರಣ (active euthanasia). ಪರೋಕ್ಷ ದಯಾಮರಣ ಎಂದರೆ, ಯಾವ ರೀತಿಯ ವೈದ್ಯಕೀಯ ಚಿಕಿತ್ಸೆಯಿಂದಲೂ ಪ್ರಯೋಜನ ಇಲ್ಲ ಎಂಬ ಸ್ಥಿತಿ ತಲುಪಿರುವ ರೋಗಿಗೆ ಅಳವಡಿಸಲಾಗಿರುವ ಜೀವರಕ್ಷಕ ವ್ಯವಸ್ಥೆಗಳನ್ನು ನಿಲ್ಲಿಸುವುದು. ಅಂದರೆ ಆ ವ್ಯಕ್ತಿ ಈ ಯಂತ್ರದ ಸಹಾಯದಿಂದ ಮಾತ್ರ ಉಸಿರಾಟ ನಡೆಸುತ್ತಿರುತ್ತಾನೆ ವಿನಾ ಆತನ ದೇಹ ಪೂರ್ತಿಯಾಗಿ ನಿಷ್ಕ್ರಿಯ ಸ್ಥಿತಿಗೆ ತಲುಪಿರುತ್ತದೆ. ಸಕ್ರಿಯ ದಯಾಮರಣ ಎಂದರೆ ದೇಹಕ್ಕೆ ಮಾರಕ ಇಂಜೆಕ್ಷನ್ ನೀಡುವುದು. ಭಾರತದಲ್ಲಿ ಇದಕ್ಕೆ ಅವಕಾಶ ಇಲ್ಲ.

ಹರೀಶ್ ರಾಣಾ ಪ್ರಕರಣದಲ್ಲಿ ದಯಾಮರಣ ಕುರಿತು ಸುಪ್ರೀಂ ಕೋರ್ಟ್ ಮಾಡಿರುವ ವ್ಯಾಖ್ಯಾನ ದೂರಗಾಮಿ ನೆಲೆಯಲ್ಲಿ ಗಮನಾರ್ಹ. ಪರೋಕ್ಷ ದಯಾಮರಣ ಪ್ರಕ್ರಿಯೆಯಲ್ಲಿ ಜೀವರಕ್ಷಕ ವ್ಯವಸ್ಥೆಗಳನ್ನು ನಿಲ್ಲಿಸುವುದರಿಂದ ಅದು ನಕಾರಾತ್ಮಕ ಕ್ರಿಯೆ ಎನಿಸುತ್ತದೆ. ಅದೇ ಸಕ್ರಿಯ ದಯಾಮರಣ ಪದ್ಧತಿಯಲ್ಲಿ ಇಂಜೆಕ್ಷನ್ ಅನ್ನು ದೇಹದ ಒಳಕ್ಕೆ ಸೇರಿಸುವುದರಿಂದ ಸಕಾರಾತ್ಮಕ ಕ್ರಿಯೆ ಎಂಬ ವ್ಯಾಖ್ಯಾನ ಇದೆ. ಆದರೆ ಈ ಪ್ರಕರಣದ ತೀರ್ಪು ನೀಡುವ ಸಂದರ್ಭದಲ್ಲಿ, ವೆಂಟಿಲೇಟರ್ ನಿಲ್ಲಿಸುವುದು ಸಕಾರಾತ್ಮಕ ಕ್ರಿಯೆ ಎಂದು ಕೋರ್ಟ್ ಹೇಳಿತು.

‘ಸಕ್ರಿಯ ದಯಾಮರಣದಲ್ಲಿ ಮಾರಕ ಇಂಜೆಕ್ಷನ್​ನಂತಹ ಹಾನಿಕಾರಕ ಹೊಸ ಬಾಹ್ಯ ವಸ್ತುವೊಂದನ್ನು ಬಳಸಲಾಗುತ್ತದೆ. ಪರೋಕ್ಷ ದಯಾಮರಣ ಸಂದರ್ಭದಲ್ಲಿ ಹೊಸ ರಿಸ್ಕ್ ಇರುವುದಿಲ್ಲ. ಕೃತಕ ವೆಂಟಿಲೇಟರ್ ಅನ್ನು ತೆಗೆಯುವುದರಿಂದ ಸಹಜವಾಗಿ ಕೊನೆಯ ಕ್ಷಣ ತಲುಪಲು ಅನುವಾಗುತ್ತದೆ. ವೆಂಟಿಲೇಟರ್ ಮೇಲೆ ಅವಲಂಬನೆ ಇದ್ದಾಗ ಅದನ್ನು ನಿಲ್ಲಿಸಿದಾಗ ಸಾವು ಸ್ವಲ್ಪ ಬೇಗ ಉಂಟಾಗುತ್ತದೆ’ ಎಂದು ಈ ತೀರ್ಪು ನೀಡಿದ ನ್ಯಾಯಪೀಠದಲ್ಲಿದ್ದ ನ್ಯಾ. ಜೆ.ಬಿ.ಪರ್ದಿವಾಲಾ ಅವರು ವ್ಯಾಖ್ಯಾನ ಮಾಡಿದರು. ನ್ಯಾ.ಕೆ.ವಿ.ವಿಶ್ವನಾಥನ್ ಅವರು ಪೀಠದಲ್ಲಿದ್ದ ಇನ್ನೊಬ್ಬ ನ್ಯಾಯಮೂರ್ತಿ. ಸಂವಿಧಾನದ 21ನೆಯ ಪರಿಚ್ಛೇದ ಘನತೆಯೊಂದಿಗೆ ಬದುಕುವ ಹಕ್ಕನ್ನು ನಾಗರಿಕರಿಗೆ ನೀಡುತ್ತದೆ.

ಬದುಕಲು ಸಾಧ್ಯವೇ ಇಲ್ಲದ ಸ್ಥಿತಿ ತಲುಪಿರುವ ವ್ಯಕ್ತಿಗೆ (ಬ್ರೇನ್ ಡೆಡ್ ಅಥವಾ ದೇಹ ಸಂಪೂರ್ಣವಾಗಿ ನಿಷ್ಕ್ರಿಯ ಸ್ಥಿತಿ) ಘನತೆಯೊಂದಿಗೆ ಕೊನೆಯುಸಿರೆಳೆಯುವ ಹಕ್ಕು ಕೂಡ ಈ ಪರಿಚ್ಛೇದದಡಿ ಪ್ರಾಪ್ತವಾಗುತ್ತದೆ ಎಂದು ನ್ಯಾಯಪೀಠ ಹೇಳಿದ್ದು ಗಮನಾರ್ಹ ಸಂಗತಿಯಾಗಿದೆ. ಭಾರತದಲ್ಲಿ ದಯಾಮರಣ ವಿಷಯ ಬಂದಾಗ ಆಕ್ಟಿವ್ ಯುಥನೇಸಿಯಾ ಎಂಬುದನ್ನು ಮಾತ್ರ ಬಳಸಬೇಕು; ಪ್ಯಾಸಿವ್ ಯುಥನೇಸಿಯಾ ಎಂಬ ಪದ ಗತದ ಮಾತಾಯಿತು. ಪ್ಯಾಸಿವ್ ಯುಥನೇಸಿಯಾ ಎಂಬ ಪದದ ಬದಲಿಗೆ ವೈದ್ಯಕೀಯ ಚಿಕಿತ್ಸೆಯನ್ನು ನಿಲ್ಲಿಸುವುದು ಅಥವಾ ಹಿಂಪಡೆಯುವುದು ಎಂದು ವ್ಯಾಖ್ಯಾನಿಸಬೇಕು ಎಂಬುದಾಗಿ ಕೋರ್ಟ್ ಹೇಳಿರುವುದು ಮಹತ್ವದ್ದು. ಕೇವಲ ವೈದ್ಯಕೀಯ ತಂತ್ರಜ್ಞಾನ ಮುಂದುವರಿದ ಕಾರಣಕ್ಕೆ ಬ್ರೇನ್ ಡೆಡ್ ಅಥವಾ ಪೂರ್ತಿಯಾಗಿ ನಿಷ್ಕ್ರಿಯ ಸ್ಥಿತಿ ತಲುಪಿರುವ ವ್ಯಕ್ತಿಯನ್ನು ತಾತ್ಕಾಲಿಕವಾಗಿ ಜೀವಂತ ಇರಿಸುವುದು ಸಂವಿಧಾನದಲ್ಲಿ ಹೇಳಿರುವ ಘನತೆಯ ಆದರ್ಶಕ್ಕೆ ಸಂಪೂರ್ಣವಾಗಿ ಹೊಂದಾಣಿಕೆಯಾಗುವುದಿಲ್ಲ ಎಂದು ಸಹ ಕೋರ್ಟ್ ಅಭಿಪ್ರಾಯಪಟ್ಟಿತು.

ಭಾರತದಲ್ಲಿ ದಯಾಮರಣ ಕುರಿತ ಚರ್ಚೆ ಬಹಳ ದಿನಗಳಿಂದ ಇದೆ. ಸವೋಚ್ಚ ನ್ಯಾಯಾಲಯ ಮತ್ತು ಕಾನೂನು ಆಯೋಗಗಳು ಈ ಬಗ್ಗೆ ಕಾಲಕಾಲಕ್ಕೆ ಅಭಿಪ್ರಾಯ ಹೊರಹಾಕಿವೆ. 1996ರಲ್ಲಿ ಗಿಯಾನ್ ಕೌರ್ ವರ್ಸಸ್ ಪಂಜಾಬ್ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ಹೀಗೆ ಹೇಳಿತ್ತು: ‘ರೋಗಿಯೊಬ್ಬ ಇನ್ನೇನು ಬದುಕಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಲ್ಲಿ, ಘನತೆಯೊಂದಿಗೆ ಬದುಕುವ ಹಕ್ಕು ಘನತೆಯೊಂದಿಗೆ ಸಾವಿನ ಹಕ್ಕನ್ನೂ ಒಳಗೊಂಡಿದೆ.’

ರೋಗಿಯೊಬ್ಬ ತನ್ನ ಹಿತಾಸಕ್ತಿ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಮುಂದುವರಿಸದೆ ಇರಲು ನಿರ್ಣಯ ಮಾಡಿದರೆ ಅದು ಅಪರಾಧಿಕ ಕೃತ್ಯ ಆಗುವುದಿಲ್ಲ ಎಂದು 2006 ರಲ್ಲಿ 19ನೆಯ ಕಾನೂನು ಆಯೋಗ ಶಿಫಾರಸು ಮಾಡಿತ್ತು.

ದಯಾಮರಣ ವಿಷಯ ಬಂದಾಗ ಅರುಣಾ ಶಾನಭಾಗ ನೆನಪಾಗದೆ ಇರಲು ಸಾಧ್ಯವಿಲ್ಲ. ಮೂಲತಃ ಉತ್ತರ ಕನ್ನಡದ ಹಳದಿಪುರದ ಆಕೆ ಮುಂಬೈನ ಕಿಂಗ್ ಎಡ್ವರ್ಡ್ ಸ್ಮಾರಕ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದರು. ಅದೇ ಆಸ್ಪತ್ರೆಯಲ್ಲಿನ ಶ್ವಾನ ಪ್ರಯೋಗಾಲಯದ ಸಹಾಯಕ ಸೋಹನ್​ಲಾಲ್ ಎಂಬಾತ 1973ರ ನವೆಂಬರ್ 27ರಂದು ಆಕೆಯ ಮೇಲೆ ಅತ್ಯಾಚಾರ ಎಸಗಿ ತೀವ್ರವಾಗಿ ಹಲ್ಲೆ ಮಾಡಿದ್ದ. ಇದರಿಂದ ಅರುಣಾ ಶಾಶ್ವತವಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದರು. ಕೆಲ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಅರುಣಾ ಆಸ್ಪತ್ರೆ ಮಂಚದಲ್ಲಿ ಅಸಹಾಯಕವಾಗಿ ಮಲಗಿರಬೇಕಾದ ಕರುಣಾಜನಕ ಸನ್ನಿವೇಶ ಸೃಷ್ಟಿಯಾಯಿತು. ಪತ್ರಕರ್ತೆ ಪಿಂಕಿ ಇರಾನಿ ಎಂಬುವವರು ‘ಅರುಣಾಸ್ ಸ್ಟೋರಿ’ ಎಂಬ ಪುಸ್ತಕ ಬರೆದರು.

ಅಷ್ಟೇ ಅಲ್ಲ, ಅರುಣಾಗೆ ಇಚ್ಛಾಮರಣ ಕೋರಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ಆದರೆ ಭಾರತದಲ್ಲಿ ಈ ಬಗ್ಗೆ ಸ್ಪಷ್ಟ ಕಾನೂನು ಇಲ್ಲವಾದ ಕಾರಣ ಸಂದಿಗ್ಧ ಎದುರಾಯಿತು. ನ್ಯಾಯಶಾಸ್ತ್ರ ಹಾಗೂ ಇತರ ದೇಶಗಳಲ್ಲಿನ ಕಾನೂನು ಚೌಕಟ್ಟನ್ನು ಪರಾಮಶಿಸಿ, ನ್ಯಾಯಾಲಯವು 2011 ರಲ್ಲಿ ಮಾರ್ಗಸೂಚಿ ರಚಿಸಿತು. ಅದರ ಪ್ರಕಾರ, ಚೇತರಿಕೆಯ ಸಾಧ್ಯತೆ ಇಲ್ಲದ ರೋಗಿಗೆ ವೈದ್ಯಕೀಯ ಚಿಕಿತ್ಸೆಯನ್ನು ನಿಲ್ಲಿಸುವ ಅವಕಾಶವನ್ನು ನೀಡಿತು. ಆದರೆ ಈ ನಡುವೆ, ನ್ಯುಮೋನಿಯಾ ಉಲ್ಬಣಿಸಿ, ಅರುಣಾ ಶಾನಭಾಗ ಅವರು ಸುದೀರ್ಘ 42 ವರ್ಷಗಳ ಹಾಸಿಗೆವಾಸದ ಬಳಿಕ 2015ರ ಮೇ 18ರಂದು ಕೊನೆಯುಸಿರೆಳೆದರು. ಹೀಗಾಗಿ ಅವರಿಗೆ ದಯಾಮರಣ ಅನ್ವಯಿಸುವ ಸನ್ನಿವೇಶ ಬರಲಿಲ್ಲವಾದರೂ, ಈ ಬಗೆಗಿನ ಚರ್ಚೆ ಮತ್ತೊಮ್ಮೆ ದೇಶದಲ್ಲಿ ನಡೆಯಿತು.

2012ರಲ್ಲಿ ಕಾನೂನು ಆಯೋಗವು 2006ರ ತನ್ನ ಶಿಫಾರಸನ್ನು ಪುನರುಚ್ಚರಿಸಿತು. 2016ರಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಗುಣಪಡಿಸಲಾಗದ ಕಾಯಿಲೆಯಿಂದಾಗಿ, ಮರಣಶಯ್ಯೆಯಲ್ಲಿರುವ ರೋಗಿಗಳ (ರೋಗಿಗಳ ಮತ್ತು ವೈದ್ಯರ ರಕ್ಷಣೆ) ಮಸೂದೆಯ ಕರಡು ಪ್ರತಿಯನ್ನು ಪ್ರಕಟಿಸಿತು. ಆದರೆ ಈ ನಿಟ್ಟಿನಲ್ಲಿ ಮುಂದೆ ಯಾವುದೇ ಬೆಳವಣಿಗೆ ಆಗಲಿಲ್ಲ.

2018ರಲ್ಲಿ ಸವೋಚ್ಚ ನ್ಯಾಯಾಲಯವು ಕಾಮನ್ ಕಾಸ್ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿ, ಜೀವರಕ್ಷಕ ವ್ಯವಸ್ಥೆ ಮತ್ತು ಆಧುನಿಕ ವೈದ್ಯಕೀಯ ನಿರ್ದೇಶನಗಳನ್ನು (ಎಎಂಡಿ) ನಿಲ್ಲಿಸುವ ಅರ್ಜಿಗಳಿಗೆ ಸಂಬಂಧಿಸಿ ವೈದ್ಯಕೀಯ ಮಂಡಳಿ ರಚನೆಯೂ ಸೇರಿ ಹೊಸ ಮಾರ್ಗಸೂಚಿಯನ್ನು ಹೊರಡಿಸಿತು. ಎಎಂಡಿ ಪ್ರಕ್ರಿಯೆ ಸರಳೀಕರಣ ಕುರಿತು 2023 ರಲ್ಲಿ ಕೋರ್ಟ್ ಮತ್ತೆ ನಿರ್ದೇಶನ ಹೊರಡಿಸಿತು. ಕೇಂದ್ರ ಸರ್ಕಾರವು, ಜೀವರಕ್ಷಕ ವ್ಯವಸ್ಥೆಗಳನ್ನು ನಿಲ್ಲಿಸುವ ಕುರಿತಾದ ಮಾರ್ಗಸೂಚಿಯನ್ನು 2024ರಲ್ಲಿ ಸಾರ್ವಜನಿಕ ಚರ್ಚೆಗಾಗಿ ಬಿಡುಗಡೆ ಮಾಡಿದೆ. ಈ ಕುರಿತು ಮುಂದೆ ಯಾವ ನಿರ್ಣಯ ಆಗುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಈ ನಡುವೆ, ದಯಾಮರಣ ಪರಿಕಲ್ಪನೆ ಬೇಡ ಎಂಬ ವಾದವೂ ಇದೆ.

ಕೆಲವರು ತಮ್ಮ ಬೇಡಿಕೆ ಬಹಳ ವರ್ಷಗಳಿಂದ ಈಡೇರದೇ ಇದ್ದಾಗ ದಯಾಮರಣ ಕಲ್ಪಿಸುವಂತೆ ರಾಷ್ಟ್ರಪತಿ ಅಥವಾ ಸರ್ಕಾರಕ್ಕೆ ಮನವಿ ಮಾಡುವ ಸುದ್ದಿ ಆಗುವುದಿದೆ. ಆದರೆ ಹೀಗೆಲ್ಲ ದಯಾಮರಣಕ್ಕೆ ಅವಕಾಶ ನೀಡಲು ಬರುವುದಿಲ್ಲ.

ಕೊನೇ ಮಾತು: ‘ಸತ್ತವರು ಸಾಯುವುದಿಲ್ಲ. ನಾವು ಅವರನ್ನು ಮರೆತಾಗ ಸಾಯುತ್ತಾರೆ’ ಎಂಬುದು ಖ್ಯಾತ ಆಂಗ್ಲ ಬರಹಗಾರ್ತಿ ಜಾರ್ಜ್ ಎಲಿಯಟ್ (ಮೇರಿ ಆನ್ ಇವಾನ್ಸ್) ಅವರ ಒಂದು ಪ್ರಸಿದ್ಧ ಹೇಳಿಕೆ. ಅಂದರೆ ಭೌತಿಕವಾಗಿ ಇಲ್ಲವಾದರೂ ಸ್ಮರಣೆಯಲ್ಲಿ ಇರುತ್ತಾರೆ ಎಂದರ್ಥ. ಯಾವಾಗ ಆ ನೆನಪು ವಿಸ್ಮೃ ಆಗುತ್ತದೆಯೋ ಆಗ ನಿಜವಾಗಿ ಕಣ್ಮರೆಯಾದಂತೆ. ಪತಿಯನ್ನು ಕಳೆದುಕೊಂಡ ಪತ್ನಿ, ಪತ್ನಿವಿಯೋಗವಾದ ಪತಿ, ಪುತ್ರ/ಪುತ್ರಿಶೋಕದ ಪಾಲಕರು, ಜೀವದ ಗೆಳೆಯನನ್ನು ಕಳೆದುಕೊಂಡ ಸ್ನೇಹಿತ... ಇವರಿಗೆಲ್ಲ ನೆನಪೇ ಊರುಗೋಲು. ಭಾರತೀಯ ಸಂಪ್ರದಾಯದಲ್ಲಿ ಲೌಕಿಕ ಬದುಕಿನಷ್ಟೇ- ಅಥವಾ ಒಂದು ತೂಕ ಹೆಚ್ಚೇ- ಅಲೌಕಿಕ ಬದುಕಿಗೂ ಆದ್ಯತೆ ನೀಡಲಾಗಿದೆ. ಹೀಗಾಗಿ, ವ್ಯಕ್ತಿಯ ಮರಣಾನಂತರದ ವಿಧಿಗಳಿಗೂ ಮಹತ್ವವಿದೆ. ಮೃತರಿಗಾಗಿ ವಾರ್ಷಿಕ ಶ್ರಾದ್ಧ ನಡೆಸುವ ರೂಢಿ ಇದೆ. ಇದು ಕೂಡ ಅಗಲಿದ ಹಿರಿಯರನ್ನು, ಪ್ರೀತಿಪಾತ್ರರನ್ನು ಸ್ಮರಿಸುವ ಒಂದು ಸಂದರ್ಭ; ಅವರ ನೆನಪುಗಳನ್ನು ಮತ್ತೆ ತಂದುಕೊಳ್ಳುವ ಅವಕಾಶ.

-(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net