ತಿಪಟೂರು :ಮದ್ಯಪಾನ ಮಾಡುವ ಕುಟುಂಬಗಳಲ್ಲಿ ನೆಮ್ಮದಿ ಅಸಾಧ್ಯ, ಚಟ, ಚಟ್ಟಕ್ಕೇರಿಸುವವರೆಗೂ ಬಿಡಲ್ಲ ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.
ನಗರದ ಒಕ್ಕಲಿಗರ ಭವನದಲ್ಲಿ ರಾಜ್ಯ ಸರ್ಕಾರ, ಜಿಲ್ಲಾ ಮತ್ತು ತಾಲ್ಲುಕು ಪೊಲೀಸ್ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಡ್ರಗ್ಸ್ಮುಕ್ತ ಕರ್ನಾಟಕ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿ, ಪೊಲೀಸ್, ಗುಪ್ತಚರ ಇಲಾಖೆ ಮತ್ತು ಕಸ್ಟಮ್ ಇಲಾಖೆ ಎಷ್ಟೇ ಎಚ್ಚರಿಕೆ ವಹಿಸಿದರೂ ವಿಮಾನಗಳ ಮೂಲಕ ಕೋಟ್ಯಾಂತರ ಮೌಲ್ಯದ ಮಾದಕ ವಸ್ತುಗಳು ದೇಶಕ್ಕೆ ಆಮದಾಗುತ್ತಿರುವುದು ಕಳವಳಕಾರಿ ಸಂಗತಿ.
ಸಮಾಜದಲ್ಲಿ ಇಂದು ಅತ್ಯಂತ ಸುಲಭವಾಗಿ ಮಾದಕ ವಸ್ತುಗಳು ಕೈಗೆಟುಕುತ್ತಿದ್ದು, ಎಸ್ಸೆಸ್ಸೆಲ್ಸಿ ನಂತರದ ಯುವಜನತೆ ಸುಲಭವಾಗಿ ಮಾದಕ ವ್ಯಸನಗಳಿಗೆ ಮಾರುಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಕರ್ಕಶ ಶಬ್ಧ ಉಂಟು ಮಾಡುವ ಸೈಲೆನ್ಸರ್ ಅಳವಡಿಸಿರುವ ಬೈಕ್ಗಳಿಗೆ 10 ಸಾವಿರ ರೂ. ದಂಡ ಹಾಕಿ ವಾಹನ ಜಪ್ತಿ ಮಾಡಬೇಕು ಎಂದು ಪೊಲೀಸರಿಗೆ ಸೂಚಿಸಿದರು.
ಡಿವೈಎಸ್ಪಿ ಎಂ.ಎಸ್ ಉಮೇಶ್ ಮಾತನಾಡಿ, ಪ್ರತಿದಿನ ದೇಶದಲ್ಲಿ 10 ಮಂದಿ ಮಾದಕ ವ್ಯಸನಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದು, ಇದರಲ್ಲಿ 16 ವರ್ಷಕ್ಕಿಂತಾ ಕಡಿಮೆ ವಯಸ್ಸಿನ ಇಬ್ಬರು ಇದ್ದಾರೆ.
ನಾಕೋರ್ಟಿಕ್ ಡ್ರಗ್ಸ್ ದಂಧೆ ನಮ್ಮ ದೇಶದಲ್ಲಿ ಅತಿ ಹೆಚ್ಚು ವಿಸ್ತರಿಸಿದೆ. ಪ್ರತಿದಿನ 6 ಕೆಜಿಗೂ ಹೆಚ್ಚು ಹೆರಾಯಿನ್ ನಮ್ಮ ದೇಶದಲ್ಲಿ ಬಳಕೆಯಗುತ್ತಿದೆ. ನಮ್ಮ ದೇಶದ ಹಳ್ಳಿಗಳಲ್ಲಿ ಗಾಂಜಾ, ಮಾರಿಜಾನ ಹೆಚ್ಚು ಬೆಳೆಯಲಾಗುತ್ತಿದ್ದು, ಸುಲಭವಾಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಎರಡೂ ಅಪರಾಧ. ಇವುಗಳ ಮಾರಾಟ ಕಂಡುಬಂದಲ್ಲಿ ಕೂಡಲೇ 112ಗೆ ಕರೆ ಮಾಡಿ ಅಥವಾ ಕೆಎಸ್ಪಿ ಆ್ಯಪ್ ಮೂಲಕ ಮಾಹಿತಿ ನೀಡಬಹುದು ಎಂದರು. drugs
ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ ಮಾತನಾಡಿ, ಡ್ರಗ್ಸ್ ಚಟ ತಮ್ಮ ಜತೆ ಇತರರನ್ನೂ ಸೆಳೆಯುತ್ತೆ. ತಾಲೂಕಿನ ಒಂದೆರೆಡು ಸರ್ಕಾರಿ ಶಾಲೆಗಳ ಕೆಲ ಮಕ್ಕಳು ನೈಲ್ ಪಾಲಿಶ್ ಮತ್ತು ಪೈಂಟ್ ವಾಸನೆ ಗ್ರಹಿಸುತ್ತಿರುವುದು ಕಂಡು ಬಂದಿದ್ದು, ಈ ನಿಟ್ಟಿನಲ್ಲಿ ಪ್ರತಿದಿನ ಪ್ರಾರ್ಥನಾ ಸಮಯದಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಅನಾಹುತಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. ಗುರಿ ವಿದ್ಯೆ ಕಡೆಗೆ ಇರಲಿ, ನಶೆ ಕಡೆಗೆ ಬೇಡ,
ಬೇಕು ಮತ್ತು ಬೇಡ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಜಾಗೃತರಾಗಿರಿ ಎಂದರು.
ಗ್ರಾಮಾಂತರ ವೃತ್ತ ನಿರೀಕ್ಷಕ ಚಂದ್ರಶೇಖರ್, ನಗರಠಾಣೆಯ ಇನ್ಸ್ಪೆಕ್ಟರ್ ರವಿಕುಮಾರ್, ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ವೆಂಕಟೇಶ್ ಇತರರು ಇದ್ದರು.
23 ಟಿಪಿಆರ್ 01