ಸೂಪರ್ ಫಾಸ್ಟ್ ಎಕ್ಸ್​ಪ್ರೆಸ್ ರೈಲ್ವೆ ಯೋಜನೆ ಜಾರಿ ನಿರೀಕ್ಷೆ: ತಿರುಪತಿಯಿಂದ ಮಂಗಳೂರು ಮಾರ್ಗದಲ್ಲಿ ಅನುಷ್ಠಾನ | ಜನರ ಬೇಡಿಕೆಗೆ ಕೇಂಧ್ರ ರೈಲ್ವೆ ಅಧಿಕಾರಿಗಳಿಂದ ಸ್ಪಂದನೆ

ಆಂಧ್ರದ ತಿರುಪತಿ (ರೇಣಿಕುಂಟ ಜಂಕ್ಷನ್)ಯಿಂದ ಕೋಲಾರ, ಚಿಂತಾಮಣಿ, ಚಿಕ್ಕಬಳ್ಳಾಪುರ, ಯಲಹಂಕ, ಹಾಸನ ಸೇರಿ ಹಲವು ತಾಲೂಕು, ಜಿಲ್ಲೆಗಳ ಮಾರ್ಗವಾಗಿ ಮಂಗಳೂರಿಗೆ ‘ಸೂಪರ್ ಫಾಸ್ಟ್ ಎಕ್ಸ್​ಪ್ರೆಸ್ ರೈಲು’ ಯೋಜನೆ ಅನುಷ್ಠಾನ ಸಂಬಂಧ ಕೇಂದ್ರ ರೈಲ್ವೆ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on: 

ಕಿರುವಾರ ಎಸ್.ಸುದರ್ಶನ್ ಬೆಂಗಳೂರು: ಆಂಧ್ರದ ತಿರುಪತಿ (ರೇಣಿಕುಂಟ ಜಂಕ್ಷನ್)ಯಿಂದ ಕೋಲಾರ, ಚಿಂತಾಮಣಿ, ಚಿಕ್ಕಬಳ್ಳಾಪುರ, ಯಲಹಂಕ, ಹಾಸನ ಸೇರಿ ಹಲವು ತಾಲೂಕು, ಜಿಲ್ಲೆಗಳ ಮಾರ್ಗವಾಗಿ ಮಂಗಳೂರಿಗೆ ‘ಸೂಪರ್ ಫಾಸ್ಟ್ ಎಕ್ಸ್​ಪ್ರೆಸ್ ರೈಲು’ ಯೋಜನೆ ಅನುಷ್ಠಾನ ಸಂಬಂಧ ಕೇಂದ್ರ ರೈಲ್ವೆ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಶಿಂಗನಹಳ್ಳಿ ಗುರುರಾಜು ಎಂಬುವವರು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಚಿವ ವಿ.ಸೋಮಣ್ಣ, ಸಂಸದರು ಹಾಗೂ ರೈಲ್ವೆ ಧಿಕಾರಿಗಳಿಗೆ ಪತ್ರ ಬರೆದು ಯೋಜನೆ ಜಾರಿಗೊಳಿಸಲು ಒತ್ತಾಯಿಸಿದ್ದರು. ಇದಕ್ಕೆ ಅಧಿಕಾರಿಗಳಿಂದ ಪ್ರತಿಕ್ರಿಯೆ ಬಂದಿದ್ದು, ಹೊಸ ರೈಲು ಸೇವೆಗಳ ಪರಿಚಯದ ಕುರಿತ ನಿರ್ಧಾರವನ್ನು ರೈಲ್ವೆ ಮಂಡಳಿ, ಪ್ರಧಾನ ಕಚೇರಿ ಮಟ್ಟದಲ್ಲಿ ತೆಗೆದುಕೊಂಡಿದ್ದು, ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಯೋಜನೆ ಅನುಷ್ಠಾನದ ಭರವಸೆ ಸಿಕ್ಕಿದೆ.

ಯೋಜನೆ ಕುರಿತು ನೀಲಿ ನಕ್ಷೆಯನ್ನು ತಯಾರಿಸಿ ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಪ್ರಯಾಣಿ ಸಲು ತೆಗೆದುಕೊಳ್ಳುವ ಸಮಯ, ವೇಳಾ ಪಟ್ಟಿ, ಮುಂದಿನ ಆನುಕೂಲತೆಗಳ ಬಗ್ಗೆ ಸಲಹೆ ನೀಡಲಾಗಿದೆ. ಎಕ್ಸ್​ಪ್ರೆಸ್ ರೈಲುಗಳ ಕೊರತೆಯಿಂದ ಈ ಭಾಗವು ಅತ್ಯಲ್ಪ ಬಳಕೆಗೆ ಒಳಪಟ್ಟಿದೆ. ಈ ರೈಲು ಸೇವೆಯು ಪ್ರಾರಂಭಿಸಿದರೆ ಆದಾಯವನ್ನು ಹಿಗ್ಗಿಸಿಕೊಳ್ಳುವ ನಿರೀಕ್ಷೆಯಿದೆ. ಪ್ರವಾಸೋ ದ್ಯಮ ಚಟುವಟಿಕೆಗಳ ಚುರುಕುಗೊಳ್ಳಲಿದೆ. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಎಷ್ಟರ ಮಟ್ಟಿಗೆ ಮುಂದಿನ ಕ್ರಮವಹಿಸಲಿದ್ದಾರೆಂಬುದನ್ನು ಕಾದು ನೋಡಬೇಕಿದೆ.

ಚಿನ್ನದ ನಾಡು ಕೋಲಾರ ಹೆಸರಿಡಿ: ಈ ಯೋಜನೆಗೆ ಚಿನ್ನದ ನಾಡು ಕೋಲಾರ ಸೂಪರ್ ಫಾಸ್ಟ್ ರೈಲು ಎಂದು ಹೆಸರಿಡಲು ಹಾಗೂ ರೇಣಿಕುಂಟೆ ಜಂಕ್ಷನ್​ನಿಂದ ಮಂಗಳೂರು ಕೇಂದ್ರಕ್ಕೆ 16 ಗಂಟೆ 50 ನಿಮಿಷ ಪ್ರಯಾಣದ ಸಮಯವಾಗಿದ್ದು, ಮಧ್ಯದಲ್ಲಿರುವ ನಿಲ್ದಾಣ ದಿಂದ ನಿಲ್ದಾಣದಕ್ಕೆ ಸಂಚಾರದ ಸಮಯದ ವೇಳಾ ಪಟ್ಟಿ ನೀಡಿರುವುದು ಅಧಿಕಾರಿಗಳ ಗಮನ ಸೆಳೆದಿದೆ.

ಕೇಂದ್ರ ಪ್ರತಿಕ್ರಿಯೇನು?

* ರೇಣಕುಂಟೆಯಿಂದ ಕೋಲಾರ, ಚಿಂತಾಮಣಿ, ಚಿಕ್ಕಬಳ್ಳಾಪುರ ಮತ್ತು ಹಾಸನದ ಮೂಲಕ ಮಂಗಳೂರು ನಡುವೆ ಹೊಸ ಎಕ್ಸ್​ಪ್ರೆಸ್ ರೈಲು ಸೇವೆ ಪರಿಚಯಿಸುವ ಪ್ರಸ್ತಾವನೆ ಪರಿಶೀಲಿಸಲಾಗಿದೆ.

* ರೈಲ್ವೆ ಮಂಡಳಿ, ಪ್ರಧಾನ ಕಚೇರಿಯ ಮಟ್ಟದಲ್ಲಿ ಕ್ರಮ ತೆಗೆದುಕೊಂಡಿದ್ದು, ಇದಕ್ಕೆ ಸೂಕ್ತ ಮಾರ್ಗ, ಅಗತ್ಯವಿರುವ ರೇಕ್ (ರೈಲು ಬೋಗಿಗಳ ಜೋಡಣೆ), ರೈಲು ಹೊರಡುವ ಸ್ಥಳ, ಕೊನೆಗೊಳ್ಳುವ ಸ್ಥಳಗಳಲ್ಲಿ ನಿರ್ವಹಣಾ ಸೌಲಭ್ಯಗಳ ಲಭ್ಯತೆ ಸೇರಿ ವಿವಿಧ ಕಾರ್ಯåಚರಣೆಯ ಅಂಶಗಳ ಪರಿಶೀಲನೆ ಆಗಬೇಕಿದೆ.

* ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ವಲಯಗಳ ವ್ಯಾಪ್ತಿಗೆ ಬರುವ ಮಾರ್ಗಗಳು ಒಳಗೊಂಡಿರುವುದರಿಂದ, ಆಯಾ ವಿಭಾಗ, ವಲಯ ಕಾರ್ಯಸಾಧ್ಯತೆ ಪರಿಶೀಲಿಸಲು ಪ್ರಸ್ತಾವನೆಯನ್ನು ಕಳುಹಿಸಲಾಗಿದೆ

* ಗುಂತಕಲ್ ವಿಭಾಗದ ಸಹಾಯಕ ವಾಣಿಜ್ಯ ವ್ಯವಸ್ಥಾಪಕ ಡಿ.ಕರುಣಾಕರ್ ಬಾಬು ಪ್ರತಿಕ್ರಿಯಿಸಿದ್ದಾರೆ

ಅನುಕುಲಗಳೇನು?

* ಆಂಧ್ರದಿಂದ ಮಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳ

* ಯಲಹಂಕ ಬೈಪಾಸ್ ಲೂಪ್ ಬಳಸಿಕೊಂಡರೆ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಿಗೆ ಸಂರ್ಪಸಲು ಸಾಧ್ಯ.

* ಇದು ನೈರುತ್ಯ ರೈಲ್ವೆ ಸಂಚಾರ ನಿಯಂತ್ರಕರಿಗೆ ಸುಮಗ ಸಂಚಾರಕ್ಕೆ ಅನುವಾಗಲಿದೆ.

* ದಕ್ಷಿಣ ಭಾರತದ ಪ್ರಮುಖ ಯಾತ್ರಾ ಕಾರಿಡಾರ್ ಆಗಲಿದೆ. ಪ್ರಮುಖ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ, ಕರಾವಳಿ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಸುಲಭವಾಗಲಿದೆ. (ಶ್ರವಣಬೆಳಗೊಳ, ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳಕ್ಕೆ ತ್ವರಿತ ಭೇಟಿ)

* ಹೊಸ ಮಂಗಳೂರು ಬಂದರು ಪ್ರಾಧಿಕಾರ ಮತ್ತು ಕರಾವಳಿ ಕೈಗಾರಿಕಾ ವಲಯಗಳಿಂದ ಹಾಸನ, ಕುಣಿಗಲ್, ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಕೋಲಾರದ ಕೃಷಿ ಹಾಗೂ ಉತ್ಪಾದನಾ ಕೇಂದ್ರಗಳಿಗೆ ನೇರ ಸಂಪರ್ಕ ಕಲ್ಪಿಸುವುದರ ಜತೆಗೆ ವಾಣಿಜ್ಯ ಚಟುವಟಿಕೆಗಳಿಗೆ ಬಲ ಸಿಗಲಿದೆ.

ತಿರುವತಿಯಿಂದ ಕೋಲಾರ, ಚಿಕ್ಕಬಳ್ಳಾಪುರ ಮಾರ್ಗವಾಗಿ ಸೂಪರ್ ಎಕ್ಸ್​ಪ್ರೆಸ್ ರೈಲು ಯೋಜನೆ ಅನುಷ್ಠಾನಕ್ಕೆ ತರಲು ಇರುವ ಅವಕಾಶದ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿತ್ತು. ಅಧಿಕಾರಿಗಳಿಂದ ಪ್ರತಿಕ್ರಿಯೆ ಬಂದಿದೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಕಾಳಜಿ ತೋರಿದರೆ ಯೋಜನೆ ಕಾರ್ಯರೂಪಕ್ಕೆ ಬರಲು ಸಾಧ್ಯ. | ಎನ್.ಗುರುರಾಜು ಶಿಂಗನಹಳ್ಳಿ ಯುವಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net