ವಿಶ್ವ ಬ್ಯಾಂಕಿನ ನೆರವಿನೊಂದಿಗೆ ಕೇಂದ್ರ ಸರ್ಕಾರ ಆರಂಭಿಸಿರುವ ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣಾ ಯೋಜನೆ ಮೂಲಕ ಅನೇಕ ನೆರವು ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಇದರ 2ನೇ ಹಂತವನ್ನು ಜಾರಿಗೊಳಿಸಲಾಗುತ್ತಿದ್ದು, 58 ಅಣೆಕಟ್ಟುಗಳ ದುರಸ್ತಿ ಕಾಮಗಾರಿಗಳಿಗೆ 1,500 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ. ಅಣೆಕಟ್ಟುಗಳು ನಮ್ಮ ದೇಶದ ಶಕ್ತಿ ಹಾಗೂ ಪ್ರಗತಿಯ ಪ್ರತೀಕ. ಅಣೆಕಟ್ಟುಗಳು ನಮ್ಮ ಭವಿಷ್ಯವನ್ನು ಕಾಪಾಡಿ, ರೈತರನ್ನು ಸಶಕ್ತರನ್ನಾಗಿ ಮಾಡುತ್ತದೆ. ಅನೇಕ ಅಣೆಕಟ್ಟುಗಳು 60-70 ವರ್ಷಗಳ ಹಳೆಯದಾಗಿವೆ. ಹೀಗಾಗಿ, ಅಣೆಕಟ್ಟುಗಳ ಮೂಲಸೌಕರ್ಯ ದುರಸ್ತಿ ಕಾಮಗಾರಿಗಳು ಅಗತ್ಯವಾಗಿವೆ.ಅನಿರೀಕ್ಷಿತ ಹವಾಮಾನ ವೈಪರಿತ್ಯ ಹೆಚ್ಚಿನ ಸವಾಲೊಡ್ಡಿದೆ. ಅತಿಯಾದ ಮಳೆ, ಪ್ರವಾಹ ದೇಶದೆಲ್ಲೆಡೆ ಸಮಸ್ಯೆಯಾಗಿ ತಲೆದೋರಿವೆ. ನಮ್ಮ ಊಹೆಗಳ ಆಧಾರದ ಮೇಲೆ ಭವಿಷ್ಯದ ಅಣೆಕಟ್ಟುಗಳ ನಿರ್ವಹಣೆ ಅಸಾಧ್ಯ. ಹೀಗಾಗಿ ಎಲ್ಲಾ ಸವಾಲಿಗೆ ಪೂರ್ವ ತಯಾರಿ ಮಾಡಿಕೊಳ್ಳುವ ಆಯ್ಕೆಯಾಗಿ ಉಳಿದಿಲ್ಲ, ಅನಿವಾರ್ಯತೆಯಾಗಿದೆ ಎಂದು ಡಿಕೆಶಿ ತಿಳಿಸಿದರು.