ಮಧ್ಯಪ್ರಾಚ್ಯದಲ್ಲಿ ಯುದ್ದ ಪರಿಣಾಮ: ಡಾ.ಶರಣಪ್ರಕಾಶ ಪಾಟೀಲ

ಡಾ.ಶರಣಪ್ರಕಾಶ ಪಾಟೀಲ
ಡಾ.ಶರಣಪ್ರಕಾಶ ಪಾಟೀಲ
Published on

ಪ್ರಮುಖ ಮುಖ್ಯಾಂಶಗಳು

  • ಅಂತರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ಉಪಕರಣಗಳ ಏರಿಳಿತ
ಕಲಬುರಗಿ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಉಂಟಾಗಬಹುದಾದ ಏರಿಳಿತಗಳ ಬಗ್ಗೆ ಸರ್ಕಾರ ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.
ಗುರುವಾರ ನಗರದ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯುದ್ಧದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ವೈದ್ಯಕೀಯ ಉಪಕರಣಗಳ (ವಿಶೇಷವಾಗಿ ಕ್ಯಾನ್ಸರ್ ಚಿಕಿತ್ಸೆ) ದರ ಏರಿಳಿತವಾಗುತ್ತಿವೆ. ಪ್ರಸ್ತುತ ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಔಷಧಿಗಳ ಕೊರತೆಯಿಲ್ಲ. ಇನ್ನು ಫಾರ್ಮಾಸ್ಯೂಟಿಕಲ್ಸ್ ಮತ್ತು ತೈಲ ಬೆಲೆಗಳ ಮೇಲಿನ ಪರಿಣಾಮವನ್ನು ನೋಡುತ್ತಿರುವೆ ಎಂದರು.
ಇಂದಿನ ಪರಿಸ್ಥಿತಿ ನೋಡಿದಾಗ ಜವಾಹರಲಾಲ್ ನೆಹರು ಮತ್ತು ಸರ್ದಾರ ವಲ್ಲಭಭಾಯಿ ಪಟೇಲ್ ಅವರು ರೂಪಿಸಿದ 'ಅಲಿಪ್ತ ನೀತಿ' ಇಂದಿಗೂ ಪ್ರಸ್ತುತವಾಗಿದ್ದು, ದೇಶದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಹಳೆಯ ವಿದೇಶಾಂಗ ನೀತಿಗಳ ಪಾಲನೆ ಮಾಡುವುದು ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ 371ಜೆ ಕಲಂ ಒಂದು ಮೈಲಿಗಲ್ಲಾಗಿದೆ. ಕಳೆದ 10 ವರ್ಷಗಳಲ್ಲಿ ಈ ಭಾಗದ ಯುವಕರಿಗೆ ಸುಮಾರು 80,000 ಸರ್ಕಾರಿ ಉದ್ಯೋಗಗಳು ಲಭ್ಯವಾಗಿವೆ. ಸುಮಾರು 10,000 ವೈದ್ಯಕೀಯ ಸೀಟುಗಳು ಈ ಭಾಗದ ವಿದ್ಯಾರ್ಥಿಗಳಿಗೆ ಮೀಸಲಾತಿ ಅಡಿಯಲ್ಲಿ ದೊರೆತಿವೆ. ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿಯೂ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.8ರಷ್ಟು ಪಾಲು ಸಿಗುತ್ತಿದೆ. ಇನ್ನು ಈ ಭಾಗದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುತ್ತಿದ್ದು, ಇದಕ್ಕೆ ಹಣಕಾಸು ಇಲಾಖೆಯ ಅನುಮತಿ ಅಗತ್ಯವಿಲ್ಲ‌ಎಂದು ಸಚಿವ‌ ಡಾ.ಶರಣಪ್ರಕಾಶ ಪಾಟೀಲ‌ ಸ್ಪಷ್ಟಪಡಿಸಿದರು.
ಬಾಗಲಕೋಟೆ ಮತ್ತು ರಾಮನಗರದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಎಂ.ಸಿ.ಐ.ಗೆ ಪ್ರಸ್ತಾವನೆ ಸಲ್ಲಿಸಿದೆ. ಇದರಿಂದ ವರ್ಷಕ್ಕೆ ಸುಮಾರು 450 ಯುಜಿ ಸೀಟುಗಳ ಹೆಚ್ಚಳ ನಿರೀಕ್ಷಿಸಲಾಗಿದೆ. ರಾಯಚೂರಿನಿಂದ ಗಡಿಕೇಶ್ವರ ರಸ್ತೆಯ ಅಭಿವೃದ್ಧಿಗಾಗಿ 6 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಸಿಆರ್‌ಎಫ್‌ಗೆ ಕಳುಹಿಸಲಾಗಿದೆ ಎಂದು ಸಚಿವರು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net