ಕಮಿಷನ್ ಕೊಟ್ಟರೆ ಅತ್ಯುತ್ತಮ ವಿನ್ಯಾಸದ ಮೈಸೂರು ರೇಷ್ಮೆ ಸೀರೆ ಕೊಡ್ತಾರೆ: ಕೆಎಸ್‌ಐಸಿ ಮಳಿಗೆಯಲ್ಲಿ ಕಮಿಷನ್ ದಂಧೆ-Commission scam at KSIC store

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ
Published on
ಬೆಂಗಳೂರು: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ(ಕೆಎಸ್‌ಐಸಿ) ತಯಾರಿಸುವ ಮೈಸೂರು ರೇಷ್ಮೆ ಸೀರೆ ಮಹಿಳೆಯರಿಗೆ ಅಚ್ಚುಮೆಚ್ಚು. ಮಾರುಕಟ್ಟೆಯಲ್ಲಿ ಈ ಸೀರೆಗಳಿಗೆ ಭಾರೀ ಬೇಡಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಎಸ್‌ಐಸಿ ಮಳಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ಕಮಿಷನ್ ಜಾಸ್ತಿ ಕೊಟ್ಟವರಿಗೆ ಅತ್ಯುತ್ತಮ ವಿನ್ಯಾಸದ ಸೀರೆಯನ್ನು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿದೆ.
ಬೆಂಗಳೂರಿನ ಎಂ.ಜಿ.ರಸ್ತೆ, ಬಸವೇಶ್ವರನಗರ, ಕೆ.ಜಿ.ರಸ್ತೆ, ಗಾಂಧಿ ಬಜಾರ್, ಮಲ್ಲೇಶ್ವರಂ ವೃತ್ತ, ಜಯನಗರ, ಮೈಸೂರಿನ ಮನಂತೋಡಿ ರಸ್ತೆ, ಮೃಗಾಲಯದ ಮುಖ್ಯ ರಸ್ತೆ, ಕೆ.ಆರ್. ಸರ್ಕಲ್, ಜೆಎಲ್‌ಬಿ ರಸ್ತೆ, ಕಾಳಿದಾಸ ರಸ್ತೆ, ಬೆಂ.ದಕ್ಷಿಣದ ಚನ್ನಪಟ್ಟಣ, ದಾವಣಗೆರೆ, ಹೈದರಾಬಾದ್‌ನಲ್ಲಿ ಕೆಎಸ್‌ಐಸಿ ಮಾರಾಟ ಮಳಿಗೆಗಳಿವೆ. ಅತ್ಯುತ್ತಮ ಗುಣಮಟ್ಟ, ಶುದ್ಧತೆಯ ಭರವಸೆ ಇರುವುದರಿಂದ ಗ್ರಾಹಕರು, ಸೀರೆ ಖರೀದಿಸಲು ಕೆಎಸ್‌ಐಸಿ ಮಳಿಗೆಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಭೌಗೋಳಿಕ ಸೂಚನೆ(ಜಿಐ) ಟ್ಯಾಗ್ ಹೊಂದಿರುವ ಏಕೈಕ ಮೈಸೂರು ಸಿಲ್ಕ್ ಸೀರೆಗಳ ಉತ್ಪಾದಕ ಸಂಸ್ಥೆ ಕೆಎಸ್‌ಐಸಿ ಆಗಿದೆ.
ಸೀರೆಗಳ ನೇಕಾರಿಕೆ ಪ್ರಕ್ರಿಯೆ ಬಹಳ ಸೂಕ್ಷ್ಮವಾಗಿದ್ದು, ನುರಿತ ಕುಶಲಕರ್ಮಿಗಳು ಕಡಿಮೆ ಇರುವುದರಿಂದ ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. 23 ಸಾವಿರ ರೂ. ನಿಂದ 2.5 ಲಕ್ಷದವರೆಗೆ ಸೀರೆಗೆ ದರ ಇದೆ. ಮಳಿಗೆಗಳಲ್ಲಿನ ವಿಪರೀತ ಜನಸಂದಣಿ ನಿಯಂತ್ರಿಸಲು ಮತ್ತು ಎಲ್ಲರಿಗೂ ಸೀರೆ ಸಿಗುವಂತೆ ಮಾಡಲು ಪ್ರತಿ ಗ್ರಾಹಕರಿಗೆ ಒಂದೇ ಸೀರೆ ನೀಡಲಾಗುತ್ತಿದೆ. ಟೋಕನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ, ಕಮಿಷನ್ ನೀಡದವರಿಗೆ ಯಾವುದೇ ಸೀರೆ ತೋರಿಸಿ ಮಾರಾಟ ಮಾಡಲಾಗುತ್ತಿದೆ. ಖಾಸಗಿ ಮಳಿಗೆಗಳು ಸಹ ಮೈಸೂರು ರೇಷ್ಮೆ ಸೀರೆ ಎಂದು ಹೇಳಿ ಮಹಿಳೆಯರಿಗೆ ಮಾರಾಟ ವಂಚಿಸುತ್ತಿರುವ ಬಗ್ಗೆ ದೂರುಗಳಿವೆ.
ರಾಜ್ಯದ ಆಸ್ಮಿತೆ ಮೈಸೂರು ರೇಷ್ಮೆ ಸೀರೆ
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು 2022-23ರಿಂದ 2024-25ವರೆಗೆ 3.10 ಲಕ್ಷ ಸೀರೆಗಳ ತಯಾರಿಕೆ ಪೈಕಿ 3.09 ಲಕ್ಷ ಸೀರೆ ಮಾರಾಟದಿಂದ 221 ಕೋಟಿ ರೂ.ಲಾಭ ಗಳಿಸಿದೆ. ಇನ್ನಷ್ಟು ಲಾಭ ಗಳಿಸುವ ಅವಕಾಶವಿದ್ದರೂ ಆಡಳಿತ ವ್ಯವಸ್ಥೆಯ ಅಸಹಾಯಕತೆಯಿಂದ ಕೆಎಸ್‌ಐಸಿ ನಲುಗುತ್ತಿದೆ. ಇದರಿಂದಾಗಿ ರಾಜ್ಯದ ಅಸ್ಮಿತೆಯಾಗಿ, ಮಹಿಳೆಯರ ಅಚ್ಚುಮೆಚ್ಚಿನ ಅದ್ಧೂರಿಯ ಉಡುಗೆಯಾಗಿರುವ ‘ಮೈಸೂರು ರೇಷ್ಮೆ ಸೀರೆ’ ತಯಾರಿಗೆ ಹೊಸತನ ಸೃಷ್ಟಿಸಲಾಗದ ವ್ಯಥೆ ಪಡೆಯುತ್ತಿದೆ. ಮೈಸೂರಿನ ಪ್ರಭಾವಿಗಳಿಗೆ ಹೊರ ನಗರಗಳಿಂದ, ವಿದೇಶದಿಂದ ಜನರು ಕರೆ ಮಾಡಿ ನಮಗೊಂದು ಅತ್ಯುತ್ತಮ ರೇಷ್ಮೆ ಸೀರೆ ಬೇಕಿದೆ ಕೊಡಿಸಬಹುದೇ ಎಂದು ಅವರ ಮೂಲಕ ಪ್ರಭಾವ ಬೀರುತ್ತಿದ್ದಾರೆ. ಇದು ಸಾಮಾನ್ಯವಾದ ಸೀರೆಯಲ್ಲ. ಜಗತ್ತಿನ ಹೆಂಗಳೆಯರ ಗೆದ್ದ ಸೀರೆಯಾಗಿದೆ. ಆದರೆ, ಅವರ ಬೇಡಿಕೆಗೆ ಸೂಕ್ತವಾಗಿ ಉದ್ಯಮ ಬೆಳೆಸಲಾಗದೆ ಉದ್ಯೊಗ ಸೃಷ್ಟಿಯ, ಆರ್ಥಿಕತೆಗೆ ಬೂಸ್ಟ್ ಒದಗಿಸಬಹುದಾಗಿದ್ದ ಕಾಮಧೇನುವಿನಂಥ ಉದ್ಯಮವನ್ನು ಉಸಿರುಕಟ್ಟಿಸಲಾಗುತ್ತಿದೆ. ಜನರ ಒತ್ತಡ, ಬೇಡಿಕೆ ತಡೆಕೊಳ್ಳಲಾಗದೆ ಆನ್‌ಲೈನ್ ಮಾರಾಟ ಸೇವೆ ರದ್ದುಪಡಿಸಲಾಗಿದೆ. ಎಲ್ಲ ಉದ್ಯಮಗಳು ಆನ್‌ಲೈನ್ ವ್ಯವಹಾರ ನಂಬಿಕೊಂಡಿದ್ದರೆ, ಮೈಸೂರು ರೇಷ್ಮೆ ಸೀರೆ ಮಾರಾಟವನ್ನು ಮತ್ತೆ ಹಳೆಯ ಸಾಂಪ್ರದಾಯಿಕ ಶೈಲಿಗೆ ಸಂಬಂಧಿಸಿದವರು ಸೀಮಿತಗೊಳಿಸಿದ್ದಾರೆ.
ಹೇಗೆಲ್ಲಾ ನಡೆಯುತ್ತೆ ಕಮಿಷನ್​ ದಂಧೆ?
* ಒಳ್ಳೆಯ ವಿನ್ಯಾಸದ ಸೀರೆಗೆ 2 ಸಾವಿರ ರೂ.ನಂತೆ ಕಮಿಷನ್ ವಸೂಲಿ
* ಕೆಲವೊಮ್ಮೆ ವಿನ್ಯಾಸದ ತಕ್ಕಂತೆ ಕಮಿಷನ್ ಮೊತ್ತ ಹೆಚ್ಚಳ
* ಮುಂಗಡವಾಗಿ ಬರುವ ಸೀರೆಗಳ ಪೈಕಿ ಅತ್ಯುತ್ತಮ ಸೀರೆ ಆಯ್ಕೆಮಾಡಿ ಕಮಿಷನ್ ನೀಡುವವರಿಗೆ ಮಾರಾಟ
* ಬೇರೆ ಹೆಸರಿನಲ್ಲಿ ಬಿಲ್ ಹಾಕಿಸುವ ಕೆಎಸ್‌ಐಸಿ ಸಿಬ್ಬಂದಿ
* ಹೊರಗಡೆ ದುಪ್ಪಟ್ಟು ಬೆಲೆಗೆ ಮಾರಾಟ
* ಎಂ.ಜಿ.ರಸ್ತೆ ಸೇರಿ ಎಲ್ಲ ಮಳಿಗೆಗಳಲ್ಲಿ ಸಿಬ್ಬಂದಿ ಕರಾಮತ್ತು
* ಕಮಿಷನ್ ದಂಧೆಯಿಂದ ಲಕ್ಷಾಂತರ ರೂಪಾಯಿ ಹಣ ಮಾಡಿಕೊಳ್ಳುವಿಕೆ
* ಕಮಿಷನ್ ನೀಡದಿದ್ದರೆ ಯಾವುದೋ ಸೀರೆ ನೀಡುವ ಸಿಬ್ಬಂದಿ
* ಗ್ರಾಹಕರ ಬೇಡಿಕೆ ತಕ್ಕಂತೆ ರೇಷ್ಮೆ ಸೀರೆ ಸಿಗುತ್ತಿಲ್ಲ
* ಟೋಕನ್ ಪಡೆದು ಸೀರೆ ಪಡೆಯವ ಸ್ಥಿತಿ
* ಒಳ್ಳೆಯ ವಿನ್ಯಾಸದ ಸೀರೆಗಳು ದೊರೆಯುತ್ತಿಲ್ಲ
* ಮಳಿಗೆ ಮುಂಭಾಗ ಸರದಿ ಸಾಲಿನಲ್ಲಿ ಕಾಯುವ ಸ್ಥಿತಿ
* ಸೀಮಿತ ದಾಸ್ತಾನು,ಸೀರೆಗಳ ಉತ್ಪಾದನೆ ಕುಂಠಿತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net