ಕುಡಿಯುವ ನೀರಿನ‌ ಸಮಸ್ಯೆಗಳಿದ್ದಲ್ಲಿ ಬಾಡಿಗೆ ಕೊಳವೆ ಬಾವಿ ಮೂಲಕ ನೀರು ಪೂರೈಸಿ: ಡಿಸಿ ಇಕ್ರಮ್ ಶರೀಫ್ ಸೂಚನೆ

,
,
Published on

ಪ್ರಮುಖ ಮುಖ್ಯಾಂಶಗಳು

  • ವಿಪತ್ತು ನಿರ್ವಹಣಾ ಪ್ರಾಧಿಕಾರ‌ ಸಭೆ ನಡೆಸಿದ ನೂತನ ಜಿಲ್ಲಾಧಿಕಾರಿ
ಕಲಬುರಗಿ : ಜಿಲ್ಲೆಯ ಯಾವುದೇ ಗ್ರಾಮೀಣ ಮತ್ತು‌ ನಗರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಕೂಡಲೆ ಬಾಡಿಗೆ ಮೇಲೆ ಕೊಳವೆ ಬಾವಿ ಪಡೆದು ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್‌ ಶರೀಫ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ 3-4 ವರ್ಷಗಳ ಸಮಸ್ಯಾತ್ಮಕ ಗ್ರಾಮಗಳನ್ನು ಮೊದಲ ಪಟ್ಟಿ ಮಾಡಿ ಅಲ್ಲಿ ಹೆಚ್ಚು ನಿಗಾ ವಹಿಸಬೇಕು ಮತ್ತು ಎಲ್ಲಿಯೂ ಕುಡಿಯುವ ನೀರಿನ ತೊಂದರೆಯಾಗದಂತೆ ಎಚ್ಚರದಿಂದ ಕಾರ್ಯನಿರ್ವಹಿಸಿ ಎಂದರು.
21ನೇ ಶತಮಾನದಲ್ಲಿ ನಾವಿದ್ದೇವೆ. ಇಂದಿಗೂ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಮಾಡದಿದ್ದರೆ ಅದು ನಮ್ಮ ಆಡಳಿತದ ವೈಫಲ್ಯ ಎಂಬುದನ್ನು‌ ಮರೆಯದಿರಿ. ಗ್ರಾಮೀಣ ಮತ್ತು ನಗರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿದಲ್ಲಿ ಕೂಡಲೆ ಜಿಲ್ಲಾ ಪಂಚಾಯತ್ ಸಿ.ಇ.ಓ ಮತ್ತು ಡಿ.ಯು.ಡಿ.ಸಿ ಅವರ ಗಮನಕ್ಕೆ ತರಬೇಕು. ಹಳೇ ಬೋರವೆಲ್ ಗಳಿದಲ್ಲಿ ಅದನ್ನು ಫ್ಲಶ್ ಮಾಡಬೇಕು. ಟ್ಯಾಂಕರ್‌ ಮೂಲಕ ನೀರು ಪೂರೈಕೆ ನಮ್ಮ ಕೊನೆ ಆದ್ಯತೆಯಾಗಿರಲಿ ಎಂದರು.
ಈಗಾಗಲೆ‌ ಅರ್ಧ ಬೇಸಿಗೆ ಕಳೆದು ಹೋಗಿದೆ. ಇನ್ನು ಒಂದು ತಿಂಗಳ ಕಾಲ ಸವಾಲು ನಮ್ಮ‌ ಮುಂದಿದೆ. ನೀರು ಜೀವ ಜಲ. ಅದಿಲ್ಲದಿದ್ದರೆ ಸಕಲ ಪ್ರಾಣಿಗೂ ಸಂಕಟ ಇದ್ದಂತೆ. ಇನ್ನು‌ ಬೇಸಿಗೆ ಕಾಲದ ಕ್ರಾಪ್‌ ಸಮೀಕ್ಷೆ ವಾರಾಂತ್ಯದಲ್ಲಿ ಪೂರ್ಣಗೊಳಿಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಇ.ಇ. ಜಗದೇವ ಜೀವಣಗಿ ಮಾತನಾಡಿ ಜಿಲ್ಲೆಯಲ್ಲಿ 26 ಗ್ರಾಮಗಳಿಗೆ ಕುಡಿಯುವ ನೀರಿನ‌ ಸಮಸ್ಯೆ ಇದ್ದು, ಬಾಡಿಗೆ ಕೊಳವೆ ಬಾವಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದಾಗ ಡಿ.ಸಿ. ಅವರು ಮಾತನಾಡಿ, ರೈತರೊಂದಿಗೆ ಬಾವಿ ಬಾಡಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿಸಿಕೊಂದು ದಾಖಲಾತಿ ನಿರ್ವಹಣೆ ಮಾಡಬೇಕು ಎಂದರು.
ಕೆ.ಯು.ಡಿ.ಐ.ಎಫ್.ಸಿ. ಅಧೀಕ್ಷಕ ಅಭಿಯಂತ ಅರ್.ಪಿ.ಜಾಧವ ಮಾತನಾಡಿ, ಕಲಬುರಗಿ ಮಹಾನಗರಕ್ಕೆ ಭೀಮಾದಿಂದ 60 ಎಂ.ಎಲ್.ಡಿ, ಬೆಣ್ಣೆತೋರಾದಿಂದ 22 ಎಂ.ಎಲ್.ಡಿ. ಪಡೆದು ನೀರು ಪೂರೈಸಲಾಗುತ್ತಿದೆ. ಭೀಮಾ ನದಿಯಿಂದ ಮುಂದಿನ 22 ದಿನಕ್ಕೆ ಆಗುವಷ್ಟು ಮಾತ್ರ ನೀರು ಶೇಖರಣೆ ಇದ್ದು, ಮುಂಗಾರು ಮಳೆ ತಡವಾದರೆ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ. ಹೀಗಾಗಿ ನಾರಾಯಣಪುರ ಜಲಾಶಯದಿಂದ ಮುಂಜಾಗ್ರತೆಯಾಗಿ ನೀರು ಬಿಡಿಸಿಕೊಳ್ಳಬೇಕು ಎಂದರು.
ಪಿ.ಡಿ.ಓ ಗಳು ಜವಾಬ್ದಾರಿಯಿಂದ ವರ್ತಿಸಿ:
ಜಿಲ್ಲಾ‌ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪಿ.ಡಿ.ಓ ಗಳು ಕುಡಿಯುವ ನೀರಿನ ವಿಷಯದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕು. ಹಣ ಇಲ್ಲ‌ ಎನ್ನುವ ಬೇಜವಾಬ್ದಾರಿತನ ಉತ್ತರ ನೀಡಬಾರದು. ಹಣಕ್ಕೆ ಯಾವುದೇ ಕೊರತೆ ಇಲ್ಲ. ಟಾಸ್ಕ್ ಫೋರ್ಸ್ ಕಮಿಟಿಯಲ್ಲಿ ಎಲ್ಲಾ ರೀತಿಯ ಕಾಮಗಾರಿಗಳನ್ನು ಅನುಮೋದನೆ ಪಡೆದು ಕೈಗೆತ್ತಿಕೊಳ್ಳಬಹುದಾಗಿದೆ. ಇದಲ್ಲದೆ‌ ಕೆ.ಕೆ.ಆರ್.ಡಿ.ಬಿ ಮಂಡಳಿಯಿಂದ 17.30 ಕೋಟಿ ರೂ. ಜಿಲ್ಲೆಗೆ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ನೀರು ಪೂರೈಕೆಗೆ 7 ಸರ್ಕಾರಿ ಟ್ಯಾಂಕರ್ ಗಳಿವೆ,‌ ಇದನ್ನು ಸಮರ್ಪಕ ಬಳಸಿಕೊಳ್ಳಬೇಕು ಎಂದರು.
ಅಪರ‌ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ, ಸಿಡಿಲಿಂದ ಸಾವನಪ್ಪುವುದನ್ನು ತಡೆಯಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದೊಂದೆ ದಾರಿಯಾಗಿದ್ದು, ಹೆಚ್ಚು ರೈತಾಪಿ ಜನರಿಗೆ ಅರಿವು ಮೂಡಿಸಬೇಕು. ಹೀಟ್ ವೇವ್ ಕುರಿತು ಹೆಚ್ಚು ಪ್ರಚಾರ ಮಾಡಬೇಕು. ಇನ್ನು ತಾಲೂಕಾವಾರು ಟಾಸ್ಕ್ ಫೋರ್ಸ್ ಸಮಿತಿ ಕರೆದು ಸಭೆ ನಡಾವಳಿ ಕಳುಹಿಸಿದಲ್ಲಿ ಅನುಮೋದನೆ ನೀಡಲಾಗುವುದು ಎಂದು ತಹಶೀಲ್ದಾರ, ತಾಲೂಕಾ ಪಂಚಾಯತ್ ಇ.ಓ ಗಳಿಗೆ ನಿರ್ದೇಶನ ನೀಡಿದರು.
ಇದಕ್ಕೂ ಮೊದಲು ಜಿಲ್ಲಾಧಿಕಾರಿಗಳು ಸೊನ್ನ ಬ್ಯಾರೇಜ್, ಅಮರ್ಜಾ, ಬೆಣ್ಣೆತೋರಾ, ಚಂದ್ರಂಪಳ್ಳಿ, ಗಂಡೋರಿ ನಾಲಾ, ಲೋವರ್ ಮುಲ್ಲಾಮಾರಿ ಜಲಾಶಯಗಳಲ್ಲಿ ಇಂದಿನ ನೀರಿನ ಸ್ಥಿತಿಗತಿಯನ್ನು ಇಂಜಿನೀಯರ್ ಗಳಿಂದ ಡಿ.ಸಿ. ಮಾಹಿತಿ ಪಡೆದರು.
ಸಭೆಯಲ್ಲಿ , ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಸಹಾಯಕ ಆಯುಕ್ತಾರಾದ ಸಾಹಿತ್ಯಾ ಆಲದಕಟ್ಟಿ, ಪ್ರಭುರೆಡ್ಡಿ ಸೇರಿದಂತೆ ತಾಲೂಕಿನ ತಹಶೀಲ್ದಾರರು, ತಾಲೂಕಾ ಪಂಚಾಯತ್ ಇ.ಓ. ಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net