ಕಲಬುರಗಿಯಲ್ಲಿ ಮಂಗಳವಾರ ನಡೆದ ಸಹಕಾರ ಭಾರತಿ ಜಿಲ್ಲಾ ಅಭ್ಯಾಸ ವರ್ಗ ಕಾರ್ಯಕ್ರಮದಲ್ಲಿ ಸಾಣೂರು ನರಸಿಂಹ ಕಾಮತ್, ಕೃಷ್ಣ ಜೋಶಿ, ಕೆ.ಬಿ.ಶಟಗಾರ, ಬಿ.ವಿ.ರವೀಂದ್ರನಾಥ, ರಾಜಕುಮಾರ ಮಾನ್ವಿ, ಸಂಜೀವ ಮಹಾಜನ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಾಣೂರು ನರಸಿಂಹ ಕಾಮತ್ ಅಭಿಪ್ರಾಯ
ಕಲಬುರಗಿಯಲ್ಲಿ ಅಭ್ಯಾಸ ವರ್ಗ ಕಾರ್ಯಕ್ರಮ
ಕಲಬುರಗಿ: ಸಹಕಾರ ಭಾರತಿ ಸಂಘಟನಾತ್ಮಕವಾಗಿ ಬಲಿಷ್ಠವಾದಾಗ ಮಾತ್ರ ಕ್ಷೇತ್ರದ ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಸಂಸ್ಥೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಹೇಳಿದರು.
ನಗರದ ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರ ಪ್ರಾಂತೀಯ ಕಚೇರಿ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಹಕಾರ ಭಾರತಿ ಜಿಲ್ಲಾ ಅಭ್ಯಾಸ ವರ್ಗ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರಚನೆಯಾಗಿ ಐದು ವರ್ಷವಾಗಿದೆ. ಹೊಸ ಸಹಕಾರಿ ನೀತಿ ಮತ್ತು ಸಹಕಾರ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲು ಕೇಂದ್ರ ಸರ್ಕಾರ ಹಲವು ಮಹತ್ವದ ಕಾರ್ಯಯೋಜನೆ ಜಾರಿಗೊಳಿಸುತ್ತಿದೆ ಎಂದು ತಿಳಿಸಿದರು.
ಕಳೆದ ಅಕ್ಟೋಬರ್ನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಸಹಕಾರ ಭಾರತಿಯ ಪೂರ್ಣ ಪ್ರಮಾಣದ ಜಿಲ್ಲಾ ಸಮಿತಿ ರಚನೆ ಆಗಿರುವುದು ಸಂತಸದ ಸಂಗತಿ. ಫ್ಯಾಕ್ಸ್ ಮಿಲ್ಕ್, ಗೃಹ ನಿರ್ಮಾಣ ಹಾಗೂ ಗ್ರಾಹಕ ಪ್ರಕೋಷ್ಠಗಳು ಸಕ್ರಿಯ ಕಾರ್ಯನಿರ್ವಹಿಸುತ್ತಿದ್ದು, ಪ್ರತ್ಯೇಕ ಜಿಲ್ಲಾ ಮಹಿಳಾ ಸಮಿತಿಯೂ ರಚನೆ ಆಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಕೆ.ಬಿ. ಶಟಗಾರ ಮಾತನಾಡಿ, ಜಿಲ್ಲೆಯ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಸಂಟನೆ ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತ ಪ್ರಚಾರ ಪ್ರಮುಖ ಕೃಷ್ಣ ಜೋಶಿ ಮಾತನಾಡಿ, ಸಹಕಾರ ಕ್ಷೇತ್ರದ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಅಪನಂಬಿಕೆ ನಿವಾರಿಸಲು ಪಾರದರ್ಶಕ, ಪ್ರಾಮಾಣಿಕ ಮತ್ತು ಉತ್ತಮ ಆಡಳಿತ ಅತ್ಯಗತ್ಯ. ಸಹಕಾರ ಭಾರತಿ ಕಾರ್ಯಕರ್ತರು ಸಂಘಟನೆ ಜತೆ ತಾವು ಪ್ರತಿನಿಧಿಸುವ ಸಂಸ್ಥೆಗಳ ಗೌರವ ಮತ್ತು ನತೆ ಎತ್ತಿ ಹಿಡಿಯುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಶಿವಮೊಗ್ಗ ಸಾಗರದ ಬಿ.ವಿ. ರವೀಂದ್ರನಾಥ, ಕಲಬುರಗಿ ವಿಭಾಗ ಕಾರ್ಯದರ್ಶಿ ರಾಜಕುಮಾರ ಮಾನ್ವಿ ಹಾಗೂ ರಾಜ್ಯ ಕಾನೂನು ಪ್ರಕೋಷ್ಠದ ಪ್ರಮುಖ ಸಂಜೀವ ಮಹಾಜನ್ ಮಾತನಾಡಿದರು.
ಸಹಕಾರ ಭಾರತಿ ರಾಜ್ಯ ಗ್ರಾಹಕ ಪ್ರಕೋಷ್ಠ ಸಹ ಸಂಚಾಲಕ ಎಸ್.ಎಸ್. ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ರಾಷ್ಟ್ರೀಯ ಮಹಿಳಾ ಸಹಕಾರಿ ಪ್ರಕೋಷ್ಠದ ಪ್ರಮುಖ ಶೈಲಜಾ ತಪಲಿ ಸ್ವಾಗತಿಸಿದರು. ಜಿಲ್ಲಾ ಪದಾಧಿಕಾರಿ ಶಿವಶರಣಪ್ಪ ವಂದಿಸಿದರು. ಮಲ್ಲಮ್ಮ ನಿರೂಪಣೆ ಮಾಡಿದರು. ಇದಕ್ಕೂ ಮುನ್ನ ಜಗತ್ ಸರ್ಕಲ್ನ ಆಮಂತ್ರಣ ಹೋಟೆಲ್ ಹಿಂಭಾಗದಲ್ಲಿ ಸಹಕಾರ ಭಾರತಿ ನೂತನ ಜಿಲ್ಲಾ ಕಚೇರಿಯನ್ನು ಸಾಣೂರು ನರಸಿಂಹ ಕಾಮತ್ ಉದ್ಘಾಟಿಸಿದರು.
"
ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದಲ್ಲಿ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಪರಿಣಾಮಕಾರಿ ಅನುಷ್ಠಾನ ಮತ್ತು ಕ್ಷೇತ್ರದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಸಹಕಾರ ಭಾರತಿ ಸಂಘಟನೆ ಇನ್ನಷ್ಟು ಬಲಿಷ್ಠವಾಗುವ ಅಗತ್ಯವಿದೆ.
— > ಸಾಣೂರು ನರಸಿಂಹ ಕಾಮತ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಹಕಾರ ಭಾರತಿ