ವಿಮೆ ಹಣ ಕೈತಪ್ಪಲು ಬಿಡಲ್ಲ insurance

ಮಾಗಡಿ ಪಟ್ಟಣದ ಬಮುಲ್ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಳೆ ವಿಮೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಚ್.ಸಿ. ಉದ್ಘಾಟಿಸಿದರು.ಾಲಕೃಷ್ಣ.ತಹಸೀಲ್ದಾರ್ ಕೆ.ಆರ್.ರಂಜಿತ್, ತಾಪಂ ಇಒ ಜಯಪಾಲು, ತೋಟಗಾರಿಕೆ ಸಂತೋಷ್, ಬಮುಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಇತರರು ಇದ್ದರು.
ಮಾಗಡಿ ಪಟ್ಟಣದ ಬಮುಲ್ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಳೆ ವಿಮೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಚ್.ಸಿ. ಉದ್ಘಾಟಿಸಿದರು.ಾಲಕೃಷ್ಣ.ತಹಸೀಲ್ದಾರ್ ಕೆ.ಆರ್.ರಂಜಿತ್, ತಾಪಂ ಇಒ ಜಯಪಾಲು, ತೋಟಗಾರಿಕೆ ಸಂತೋಷ್, ಬಮುಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಇತರರು ಇದ್ದರು.
Published on
 ಮಾಗಡಿ :ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರಾಗಿ ಬೆಳೆಗೆ ಶೇ.50 ಹಾಗೂ ಮಾವು ಬೆಳೆಗೆ ಶೇ.25 ವಿಮೆ ಕಂತಿನ ಹಣವನ್ನು ಸ್ವತಃ ಭರಿಸುವುದಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ಘೋಷಿಸಿದರು.
ಪಟ್ಟಣದ ಬಮುಲ್ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಬೆಳೆ ವಿಮೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬೆಳೆ ವಿಮೆ ಕಟ್ಟಿದರೂ ಸರಿಯಾದ ಸಮಯಕ್ಕೆ ಪರಿಹಾರ ಹಣ ಕೈಸೇರುತ್ತಿಲ್ಲ ಎಂಬ ಅಸಮಾಧಾನದಿಂದಾಗಿ 33 ಸಾವಿರ ರೈತರಲ್ಲಿ ಕೇವಲ 1 ಸಾವಿರ ಮಂದಿ ಮಾತ್ರ ವಿಮೆ ಪಾವತಿಸಿದ್ದಾರೆ. 
ರೈತರಿಗೆ ವಿಮೆ ಹಣ ಬರುತ್ತದೆ ಎಂಬ ಭರವಸೆ ಮೂಡಿಸಿ, ಅವರ ಬೆನ್ನಿಗೆ ನಿಂತು ವಿಮೆ ಹಣ ಕೊಡಿಸುವ ಜವಾಬ್ದಾರಿ ನಮ್ಮದು. ಯಾವುದೇ ಕಾರಣಕ್ಕೂ ವಿಮೆ ಹಣ ಕೈತಪ್ಪಲು ಬಿಡುವುದಿಲ್ಲ. ವಿಮೆ ಹಣ ಬಾರದೆ ಇನ್ಶೂರೆನ್ಸ್ ಹಣ ಏಕೆ ರೈತರ ಕೈಗೆ  ತಲುಪುತ್ತಿಲ್ಲ ಎಂಬುದರ ಬಗ್ಗೆ ಪರಿಶೀಲಿಸಲು ತಕ್ಷಣವೇ ವಿಶೇಷ ತನಿಖಾ ತಂಡ ರಚಿಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಬೇರೆ ಜಿಲ್ಲೆಯ ಮಾವು ಬೆಳೆಗಾರರಿಗೆ ಸಿಗುತ್ತಿರುವ ಪ್ರೋತ್ಸಾಹಧನ ಈ ಭಾಗದ ರೈತರಿಗೆ ಏಕೆ ಸಿಗುತ್ತಿಲ್ಲ ಎಂದು ಶಾಸಕರು ಅಧಿಕಾರಿಗಳನ್ನು ಪ್ರಶ್ನಿಸಿದರು. ಕೃಷಿ ಇಲಾಖೆಯಿಂದ ರೈತರಿಗೆ ಶಾಶ್ವತ ಎಫ್‌ಐಡಿ ಕಾರ್ಡ್ ಮಾಡಿಸಿಕೊಡಿ. ಇದಕ್ಕೆ ತಗುಲುವ ಸಂಪೂರ್ಣ ವೆಚ್ಚವನ್ನು ನಾನೇ  ಭರಿಸುವುದಾಗಿ ತಿಳಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯ ಸವಣೂರು ಮಾತನಾಡಿ, ಬೆಳೆ ಸಾಲ ಪಡೆದವರು ಹಾಗೂ ಪಡೆಯದವರು ಸೈಬರ್ ಸೆಂಟರ್ ಮೂಲಕ ಇಬ್ಬರೂ ವಿಮೆ ಮಾಡಿಸಬಹುದು. ಪಹಣಿ, ಖಾತೆ ಮತ್ತು ಆಧಾರ್ ಕಾರ್ಡ್‌ನಲ್ಲಿ ರೈತರ ಹೆಸರು ಒಂದೇ ರೀತಿಯಾಗಿರಬೇಕು. ತಾಲೂಕಿನಲ್ಲಿ ಈ ಬಾರಿ ವಾಡಿಕೆ ಮಳೆ 30 ಎಂ.ಎಂ. ಗಿಂತ ತೀವ್ರ ಅಭಾವ ಕೇವಲ 3 ಎಂ.ಎಂ. ಉಂಟಾಗಿದ್ದು, ಶೇ.92 ಮಳೆ ಕೊರತೆಯಿಂದ ರಾಗಿ ಭಿತ್ತನೆಯಾಗಿಲ್ಲ. ರೈತರು ತಕ್ಷಣವೇ ನೋಂದಣಿ ಮಾಡಿಸಿಕೊಂಡು ವಿಮೆ ಸೌಲಭ್ಯ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ರಾಮನಗರ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ್ ಮಾತನಾಡಿ, 4 ಹಂತಗಳಲ್ಲಿ ಬೆಳೆ ವಿಮೆ ದೊರೆಯಲಿದೆ.
ರಾಗಿ ಬೆಳೆ ಸಂಪೂರ್ಣ ಹಾನಿಯಾದರೆ 24,490 ವರೆಗೆ ವಿಮೆ ಹಣ ಲಭ್ಯ. ಬಿತ್ತನೆ ಹಂತದ ಹಾನಿಗೆ 5 ಸಾವಿರ  ವರೆಗೆ ಪರಿಹಾರ ಬರಲಿದೆ. ರೈತರು ತಮ್ಮ ಜಮೀನಿನ ವಿವರವನ್ನು ಫ್ರೂಟ್ಸ್ ಐಡಿಯಲ್ಲಿ ನೋಂದಾಯಿಸಿ, ಬೆಳೆ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಿ ಎಂದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಮೋಹನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ  86 ಸಾವಿರ ಬೆಳೆಸಾಲದ ಪೈಕಿ  ತಾಲೂಕಿನಲ್ಲಿ 17 ಸಾವಿರ ರೈತರು ಸಾಲ ಪಡೆದಿದ್ದು, ಆಯಾ ಬ್ಯಾಂಕ್‌ಗಳು ಕಡ್ಡಾಯವಾಗಿ ವಿಮೆ ಕಂತು ಕಟ್ಟಿಸಿಕೊಳ್ಳಬೇಕು. ಕರ್ನಾಟಕದ ಫ್ರೂಟ್ಸ್ ಐಡಿ ಮಾದರಿಯನ್ನು ಕೇಂದ್ರ ಸರ್ಕಾರ ದೇಶವ್ಯಾಪಿ ಅನುಷ್ಠಾನಗೊಳಿಸುತ್ತಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಹರ್ಷ ಮಾತನಾಡಿ, ತಾಲೂಕಿನ 46 ಸಿಎಸ್‌ಆರ್ ಕೇಂದ್ರಗಳ ಮೂಲಕ ರೈತರಿಗೆ ಸುಲಭವಾಗಿ ವಿಮೆ ಮಾಡಿಕೊಡಲು ನೆರವಾಗಲಾಗುವುದು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಕೃಷ್ಣಮೂರ್ತಿ, ಎಂ.ಕೆ.ಧನಂಜಯ, ಜೆ.ಪಿ.ಚಂದ್ರೇಗೌಡ,  ಶಿವಪ್ರಸಾದ್, ರವೀಶ್, ಪುರುಷೋತ್ತಮ್, ಸುರೇಶ್, ಮಾರೇಗೌಡ, ರಂಗಸ್ವಾಮಯ್ಯ ಇತರರು ಇದ್ದರು.
ಮಳೆ ಇಲ್ಲದೆ ಬೆಳೆ ಇಲ್ಲ ಬೆಳೆ ಬಂದು ರೈತನ ಕೈಗೆ ಸೇರುವ ವೇಳೆಗೆ ಪ್ರಕೃತಿ ವಿಕೋಪದಿಂದ ಬೆಳೆ ಹಾಳಾದರೆ ರೈತ ಸಂಕಷ್ಟ ಅನುಭವಿಸುತ್ತಾನೆಂಬ ದೃಷ್ಠಿಯಿಂದ ಶೇ.50 ವಿಮೆ ಕಟ್ಟುತ್ತೇನೆ ಒರತು ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಸ್ಪಷ್ಟಪಡಿಸಿದರು. ತಾಲೂಕಿನ ರೈತರು ಆಗಸ್ಟ್ 14ರ ಒಳಗಾಗಿ ಕಡ್ಡಾಯವಾಗಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿ ಇದರ ಸೌಲಭ್ಯ ಪಡೆದುಕೊಳ್ಳಿ, 10 ದಿನಗಳ ನಂತರ ಕೃಷಿ ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗುವುದು. ಅಷ್ಟರಲ್ಲಿ ತಾಲೂಕಿನ ಗರಿಷ್ಠ ರೈತರಿಂದ ವಿಮೆ ಮಾಡಿಸಿರಬೇಕು. ಯಾವುದೇ ವಿಳಂಬ ಧೋರಣೆ ಸಹಿಸುವುದಿಲ್ಲ ಎಂದು ತಾಕೀತು ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net