ಪರಪ್ಪನ ಅಗ್ರಹಾರದಲ್ಲಿ ಸಿಸಿಬಿ ದಾಳಿಯನ್ನು ಸ್ವಯಂ ಪ್ರೇರಣೆಯಿಂದ ನಾನೇ ಮಾಡಿಸಿದ್ದು: ಗೃಹ ಸಚಿವ ಪ್ರಿಯಾಂಕ್ ಖರ್ಗೆ | Priyank Kharge

ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
Published on
ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಆರೋಪಿಗಳು ಮತ್ತು ಕೈದಿಗಳ ಕೊಠಡಿಗಳಲ್ಲಿ ನಾನೇ ಸ್ವಯಂಪ್ರೇರಣೆಯಿಂದ ಸಿಸಿಬಿ ದಾಳಿ ಮಾಡಿಸಿದ್ದು ಎಂದು ಬುಧವಾರ(ಆ. 12) ಗೃಹಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಎರಡು ವಾರ ಮೂರು ವಾರಗಳ ಹಿಂದೇ ನಾನೇ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದೇ, ಅಲ್ಲಿ ಕೆಲವು ಲೋಪಗಳನ್ನ ನೋಡಿದ್ದೆ. ಈ ಹಿನ್ನೆಲೆ ಅದನ್ನ ನಮ್ಮ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಬಳಿಕ ಸಿಎಂ ಅನುಮತಿ ಪಡೆದು ನಿನ್ನೆ ದಾಳಿ ಮಾಡಿಸಿದ್ದೇನೆ. ಯಾವುದೇ ದಾಳಿಗೆ ಗೃಹಸಚಿವರ ಆದೇಶವಿರಬೇಕು ಎಂದಿದ್ದಾರೆ.
ಸುಮಾರು 100 ಸಿಸಿಬಿ ಅಧಿಕಾರಿಗಳ ಕಳಿಸಿ ದಾಳಿ ಮಾಡಿಸಲಾಗಿದೆ. ನಮ್ಮ ಜವಾಬ್ದಾರಿಯುತ ಅಧಿಕಾರಿಗಳ ಮಾಹಿತಿ, ನನ್ನ ಮಾಹಿತಿ ಆಧಾರದ ಮೇಲೆ ದಾಳಿಯಾಗಿದೆ. ಲೋಪದೋಷಗಳು ಕಂಡು ಬಂದಿದೆ, ಈಗಾಗಲೇ ನಾವು ಕ್ರಮ ತೆಗೆದುಕೊಂಡಿದ್ದೇವೆ. ವಿಡಿಯೋ ಬಂದಿದೆ, ಆಡಿಯೋ ಬಂದಿದೆ ಎಂಬುದು ಯಾವುದು ಇಲ್ಲ. ಇನ್ನೂ ಅಲ್ಲಿ ಅಕ್ರಮಕ್ಕೆ ಸಹಕಾರ ಕೊಟ್ಟ ಅಧಿಕಾರಿಗಳನ್ನು ಅಮಾನತು ಮಾಡೋಕೆ ಆದೇಶ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನೂ ಕೇವಲ ಪರಪ್ಪನ ಅಗ್ರಹಾರ ಅಷ್ಟೇ ಅಲ್ಲ, ಎಲ್ಲ ಜೈಲುಗಳಲ್ಲಿ ದಾಳಿಯಾಗುತ್ತದೆ. ಯಾವಾಗ ಏನು ಅಂತ ಹೇಳೋಕೆ ಆಗಲ್ಲ. ಕಲಬುರಗಿ, ಬೆಳಗಾವಿ, ಬೆಂಗಳೂರು ಇರಬಹುದು ಬೇರೆ ಯಾವುದೇ ಜೈಲು ಆಗಿರಬಹುದು. ನಿರಂತರವಾಗಿ ದಾಳಿ ಮಾಡ್ತಾ ಇರ್ತೇವೆ. ಯಾವಾಗ ಏನು ಅಂತ ಹೇಳೋಕೆ ಆಗಲ್ಲ. ನಮ್ಮಲ್ಲಿ ಕೆಲವು ಅಧಿಕಾರಿಗಳಿದ್ದಾರೆ, ಅವರು ಇನ್ನೂ ಹಳೆ ಚಾಳಿ ಬಿಟ್ಟಿಲ್ಲ, ಅವರನ್ನು ಗುರುತಿಸಿ ಕ್ರಮಕೈಗೊಳ್ತೇವೆ ಎಂದಿದ್ದಾರೆ.

ಖಾತೆ ಹಂಚಿಕೆ ವಿಚಾರ

ರಾಜ್ಯದಲ್ಲಿ ಹೊಸದಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ 19 ಸಚಿವರಿಗೆ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಖರ್ಗೆ, ಸಿಎಂ ಹೇಳಿದ್ದಾರೆ, ಇವತ್ತು ಖಾತೆ ಹಂಚಿಯಾಗುತ್ತದೆ. ಪಟ್ಟಿ ಲೋಕಭವನಕ್ಕೆ ಹೋಗಿರೋ ಬಗ್ಗೆ ಮಾಹಿತಿಯಿಲ್ಲ. ಮತ್ತು ನಾನು ಯಾವುದೇ ಹೆಚ್ಚುವರಿ ಖಾತೆ ಕೇಳಿಲ್ಲ. ಈಗ ಕೊಟ್ಟಿರೋದು ನಿರ್ವಹಿಸೋದೆ ಸಾಕಾಗಿದೆ. ಇನ್ನೂ ನಾವು ಪಕ್ಷದ ಶಿಸ್ತಿನ ಶಿಫಾಯಿಗಳು, ಏನೇ ಜವಾಬ್ದಾರಿ ಕೊಟ್ಟರು ಮಾಡ್ತೀವಿ ಎಂದು ಹೇಳಿದ್ದಾರೆ.

ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯ

ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಹೋರಾಟದ ಕುರಿತು ಮಾತನಾಡಿರುವ ಅವರು, ವಿಜಯೇಂದ್ರ‌ ಅವರು ನನ್ನ ಮಾತಿಗಿಂತ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮಾತು ಕೇಳಲಿ. ಇಂದು ಅವರು ನೈತಿಕತೆ ಬಗ್ಗೆ ಮಾತಾಡ್ತಿದ್ದಾರೆ, ಯತ್ನಾಳ್ ಏನ್ ಹೇಳಿದ್ದಾರೆ ನೋಡಲಿ. ಬಿಜೆಪಿಯವರು ಹಿರಿಯರಾಗಲಿ, ಕಿರಿಯರಾಗಲಿ ಯಾರಿಗೂ ನೈತಿಕತೆಯಿಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರು ಮೊದಲು ತಮ್ಮ ನೈತಿಕತೆಯನ್ನು ತೋರಿಸಲಿ. ಯಡಿಯೂರಪ್ಪ ಅವರ ಮೇಲೆ ಫೋಕ್ಸೊ ಕೇಸ್ ಇರೋದು ಗೊತ್ತಿಲ್ವಾ?, ಸುಪ್ರೀಂಕೋರ್ಟ್​​ನಲ್ಲಿ ಇದೆಯಲ್ಲ. ಅವರ ಶಾಸಕರ ಮೆಲೆ ಅಟ್ರಾಸಿಟಿ, ಮಹಿಳಾ ದೌರ್ಜನ್ಯದ ಪ್ರಕರಣಗಳು ನಡೆಯುತ್ತಿವೆ. ಬೇಕಾದ್ರೆ ಸಮೀಕ್ಷೆ ನಡೆಯಲಿ ಯಾವ ಪಕ್ಷದ ಶಾಸಕರ ಮೇಲೆ ಜಾಸ್ತಿ ಪ್ರಕರಣಗಳಿವೆ ನೋಡಲಿ. ಆಮೇಲೆ ನೈತಿಕತೆ ಬಗ್ಗೆ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉದ್ಯೋಗ ನೇಮಕಾತಿ 

ಇನ್ನೂ ಕೊನೆಯದಾಗಿ ಸೀನ್ ಆಫ್ ಕ್ರೇಂ ಅಧಿಕಾರಿಗಳ ನೇಮಕಾತಿ ಅಷ್ಟೇ ಅಲ್ಲ, ನಮ್ಮ ಇಲಾಖೆಯಲ್ಲಿ 11 ಸಾವಿರ ನೇಮಕಾತಿ ಕರೆದಿದ್ದೇವೆ. ಬಹಳ ವರ್ಷದಿಂದ SOCO ನೇಮಕಾತಿ ನಡೆದಿರಲಿಲ್ಲ, ನಾವು ಮಾಡುತ್ತಿದ್ದೇವೆ. ಒಟ್ಟು 74,000 ಹುದ್ದೆಗಳನ್ನು ಕರೆದಿದ್ದೇವೆ. ಕೆಇಎಯಿಂದ ನಮಗೆ ದಿನಾಂಕ ಸಿಗುತ್ತಿಲ್ಲ. ಪ್ರತಿ ಭಾನುವಾರ ಪರೀಕ್ಷೆ ನಡೆಸುತ್ತಿದ್ದೇವೆ. ಮತ್ತು ಸಿಎಂ ಶನಿವಾರವು ಪರೀಕ್ಷೆ ನಡೆಸುವ ಚಿಂತನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.  
ನಮ್ಮ ಸರ್ಕಾರದಲ್ಲಿ ಯುವಕರಿಗೆ ಉದ್ಯೋಗ ಕೊಡಿಸುವ ಪ್ರಾಮಾಣಿಕ ಪ್ರಯತ್ನ ನಡೆದಿದೆ. ಆರ್ಥಿಕ ಇಲಾಖೆಯಿಂದ ಯಾವುದೇ ಸಮಸ್ಯೆಯಿಲ್ಲ 74 ಸಾವಿರ ಹುದ್ದೆಗಳಿಗೆ ಅನುಮೋದನೆ ಬಂದಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಯಾವುದೇ ಅನುಮೋದನೆ ಬೇಕಾಗಿಲ್ಲ. ಎಲ್ಲಾ ಸಮಸ್ಯೆಗಳು ಬಗೆಹರಿವೆ, ನೇಮಕಾತಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net