ಹುಳಿಯಾರು ತಾಲೂಕು ಕೇಂದ್ರವಾಗುವುದು ನಿಶ್ಚಿತ

Huliyaru is certain to become the taluk headquarters.
Huliyaru is certain to become the taluk headquarters.
Published on
ಹುಳಿಯಾರು: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶಾಸಕ ಸಿ.ಬಿ.ಸುರೇಶ್​ ಬಾಬು ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮನೆ ಬಾಗಿಲಿಗೆ ಮನೆ ಮಗ ವಿನೂತನ ಜನಸ್ಪಂದನಾ ಕಾರ್ಯಕ್ರಮವು ಶುಕ್ರವಾರ ಹುಳಿಯಾರು ಪಪಂ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನೆರವೇರಿತು.
ಪಟ್ಟಣದ 5, 6 ಮತ್ತು 7ನೇ ವಾರ್ಡ್​ಗಳಿಗೆ ಭೇಟಿ ನೀಡಿದ ಶಾಸಕರು, ಅಧಿಕಾರಿಗಳ ಸಮ್ಮುಖದಲ್ಲಿ ನೂರಾರು ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕರು, ಹುಳಿಯಾರು ಪಟ್ಟಣವು ಭೌಗೋಳಿಕವಾಗಿ ಹಾಗೂ ಆಡಳಿತಾತ್ಮಕವಾಗಿ ತಾಲೂಕು ಕೇಂದ್ರವಾಗಲು ಸರ್ವ ಅರ್ಹತೆಗಳನ್ನು ಹೊಂದಿದೆ. ಈ ಬಗ್ಗೆ ಈಗಾಗಲೇ ಸದನದಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ಭವಿಷ್ಯದಲ್ಲಿ ಹುಳಿಯಾರು ತಾಲೂಕು ಕೇಂದ್ರವಾಗುವುದು ನಿಶ್ಚಿತ ಎಂದರು.
ವಿಜಯನಗರ ಬಡಾವಣೆ ಸೇರಿದಂತೆ ಹುಳಿಯಾರಿನ 16 ವಾರ್ಡ್​ಗಳಲ್ಲಿ ವಾಸವಿರುವ ನಿವೇಶನ ರಹಿತರನ್ನು ಗುರುತಿಸುವಂತೆ ಪಂಚಾಯಿತಿಗೆ ಸೂಚಿಸಿ, ಈ ಹಿಂದೆ ಆಸ್ಪತ್ರೆಗೆ ಮೀಸಲಿಟ್ಟಿದ್ದ ಕಂಪನಹಳ್ಳಿ ಬಳಿಯ ಜಾಗವನ್ನು ಈಗ ಹೌಸಿಂಗ್​ ಬೋರ್ಡ್​ಗೆ ಬಿಟ್ಟುಕೊಡುವ ಕುರಿತು ತಹಸೀಲ್ದಾರ್​ ಜತೆ ಚರ್ಚಿಸಿ, ಶೀಘ್ರವೇ ಸೈಟ್​ ಹಂಚಿಕೆಗೆ ಪ್ಲಾನ್​ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹುಳಿಯಾರು ಹೋಬಳಿಯಲ್ಲಿ 10 ಪಂಚಾಯಿತಿಗಳಿದ್ದು, ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕ ವಾಹನ ಚಿಕ್ಕನಾಯಕನಹಳ್ಳಿಯಿಂದಲೇ ಬರಬೇಕಿದೆ. ಈ ಸಮಸ್ಯೆಯನ್ನು ನೀಗಿಸಲು ಹುಳಿಯಾರಿನಲ್ಲಿ ಎರಡು ಎಕರೆ ಜಾಗ ಗುರುತಿಸಿ, ಕ್ವಾರ್ಟಸ್​ ಸೇರಿದಂತೆ ಸುಸಜ್ಜಿತ ಅಗ್ನಿಶಾಮಕ ಠಾಣೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪಟ್ಟಣದ ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತಿದ್ದು, ಪಪಂನ ನೂತನ ಅಧ್ಯಕ್ಷರ ಅಧಿಕಾರಾವಧಿಯಲ್ಲಿ ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರತಿದಿನ ವಾರ್ಡ್​ಗಳಲ್ಲಿ ಕಸ ಸಂಗ್ರಹಣಾ ವಾಹನ ಬಂದಾಗ ಸಾರ್ವಜನಿಕರು ಹಸಿ ಕಸ ಹಾಗೂ ಒಣ ಕಸವನ್ನು ವಿಂಗಡಿಸಿ ನೀಡುವ ಮೂಲಕ ಪಟ್ಟಣದ ನೈರ್ಮಲ್ಯ ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪಪಂ ಸದಸ್ಯರಾದ ರತ್ನಮ್ಮ, ಹೇಮಂತ್​ ಕುಮಾರ್​, ದಯಾನಂದ್​, ಬಿ.ಬಿ.ಫಾತಿಮಾ, ಅಬೂಬಕ್ಕರ್​ ಸಿದ್ದೀಕ್​, ರಾಜು ಬಡಗಿ, ಮಹ್ಮದ್​ ಜುಬೇರ್​, ಮಂಜಾನಾಯ್ಕ, ಕಿರುತರೆ ಕಲಾವಿದ ಗೌಡಿ, ಜಿಪಂ ಮಾಜಿ ಸದಸ್ಯೆ ಮಂಜುಳಮ್ಮಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net