ಗೃಹಲಕ್ಷ್ಮಿ ಹೆಸರಿನಲ್ಲಿ ಬೃಹತ್ ಹಗರಣ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
Published on
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಬ್ಯಾಂಕ್ ಖಾತೆಯೇ ಇಲ್ಲದ 23,262 ಜನರಿಗೆ 46.52 ಕೋಟಿ ರೂ. ಪಾವತಿಸಿರುವುದು ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದರು.
19,020 ಜನರಿಗೆ ಒಂದೇ ಬ್ಯಾಂಕ್‌ನ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವುದನ್ನು ಸ್ವತಃ ಸಿಎಜಿ ವರದಿ ಬಯಲಿಗೆಳೆದಿದೆ. 10 ಲಕ್ಷ ಫಲಾನುಭವಿಗಳ ಖಾತೆಗಳು ನಿರಂತರವಾಗಿ ಬದಲಾಗುತ್ತಿರುವುದು ಬಡ ಮಹಿಳೆಯರ ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಲೂಟಿಗೆ ಸಾಕ್ಷಿಯೇ ಎಂದು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದರು.
ರಾಜ್ಯದ ಅರ್ಹ ತಾಯಂದಿರಿಗೆ, ಸೋದರಿಯರಿಗೆ ತಲುಪಬೇಕಾದ ಸಾರ್ವಜನಿಕರ ತೆರಿಗೆ ಹಣವನ್ನು ವ್ಯವಸ್ಥಿತವಾಗಿ ನುಂಗಿರುವ ಈ ಭ್ರಷ್ಟಾಚಾರದ ಹಿಂದೆ ಯಾರ ಕೈವಾಡವಿದೆ? ಸ್ವತಃ ಸಿಎಜಿ ಕೇಳಿದರೂ ಬ್ಯಾಂಕ್ ಖಾತೆಗಳ ವಿವರ ನೀಡದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಚ್ಚಿಡುತ್ತಿರುವುದಕ್ಕೆ ಕಾರಣವಾದರೂ ಏನು? ಈ ಹಗರಣದ ಬೇರುಗಳು ಕಾಂಗ್ರೆಸ್ ಸರ್ಕಾರದಲ್ಲಿ ಬಹಳ ಗಾಢವಾಗಿ ಹರಡಿಕೊಂಡಿರುವ ಸಂಶಯ ಮತ್ತಷ್ಟು ಬಲಗೊಳ್ಳುತ್ತದೆ ಎಂದರು.
ಬಡವರ ಹೆಸರಿನಲ್ಲಿ ಕೋಟ್ಯಂತರ ರೂ. ಲೂಟಿ ಹೊಡೆದಿರುವ ಗಂಭೀರ ಭ್ರಷ್ಟಾಚಾರದ ಬಗ್ಗೆ ತಕ್ಷಣ ಅತ್ಯಂತ ಪಾರದರ್ಶಕವಾಗಿ, ಉನ್ನತ ಮಟ್ಟದ ತನಿಖೆ ಆಗಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net